ADVERTISEMENT

ಪಕ್ಷದ ಹೋರಾಟಕ್ಕೆ ಮಣಿದು ನೆರೆ ಪರಿಹಾರ ಘೋಷಣೆ

ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:20 IST
Last Updated 11 ಅಕ್ಟೋಬರ್ 2019, 15:20 IST
ಪಿ.ಮರಿಸ್ವಾಮಿ
ಪಿ.ಮರಿಸ್ವಾಮಿ   

ಚಾಮರಾಜನಗರ: ‘ರಾಜ್ಯದಾದ್ಯಂತ ಕಾಂಗ್ರೆಸ್‌ ನಡೆಸಿರುವ ಹೋರಾಟಕ್ಕೆ ಮಣಿದು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಧ್ಯಂತರವಾಗಿ ₹1,200 ಕೋಟಿ ನೆರೆ ಪರಿಹಾರ ಘೋಷಿಸಿದೆ. ಇದರಲ್ಲಿ ರಾಜ್ಯದ ಬಿಜೆಪಿ ಸಂಸದರು ಹಾಗೂ ಸಚಿವರ ಪಾತ್ರ ಏನೂ ಇಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಶುಕ್ರವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ಪರಿಹಾರ ಘೋಷಿಸಿರುವುದಕ್ಕೆ ಕೇಂದ್ರವನ್ನು ಅಭಿನಂದಿಸಿರುವುದನ್ನು ಪ್ರಶ್ನಿಸಿದರು.

‘ಅತಿ ವೃಷ್ಟಿಯಾಗಿ ಎರಡು ತಿಂಗಳು ಕಳೆದಿದೆ. 20 ಜಿಲ್ಲೆ ಪ್ರವಾಹಕ್ಕೆ ಸಿಲುಕಿದೆ. ಲಕ್ಷಾಂತರ ಜನರು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಜಾನುವಾರುಗಳು ನೀರು ಪಾಲಾಗಿವೆ. ಜನರು ಬೀದಿಪಾಲಾಗಿದ್ದಾರೆ. ರಾಜ್ಯ ಸರ್ಕಾರ ₹38 ಸಾವಿರ ಕೋಟಿ ಪ‍ರಿಹಾರ ಕೇಳಿದ್ದರೆ, ಕೇಂದ್ರ ಸರ್ಕಾರ ಕೇವಲ ₹1,200 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದೆ. ಇದುವರೆಗೂ ಸುಮ್ಮನಿದ್ದು, ಈಗ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸ್ವಲ್ಪ ಹಣ ನೀಡಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರು ಯಾವ ಪುರುಷಾರ್ಥಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಈ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಬಂದಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು ಸ್ವತಃ ವೈಮಾನಿಕ ಸಮೀಕ್ಷೆ ನಡೆಸಿ ₹2,000 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದ್ದರು. ಇದನ್ನು ಮಲ್ಲಿಕಾರ್ಜುನಪ್ಪ ಮರೆತಿದ್ದಾರೆ’ ಎಂದರು.

‘ರಾಜ್ಯ ಸರ್ಕಾರ ಇನ್ನೂ ಸರಿಯಾದ ಪರಿಹಾರ ಕೈಗೊಂಡಿಲ್ಲ. ಪರಿಹಾರದ ಹಣ ಸಿಗದೆ ಸಂತ್ರಸ್ತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ನೆರೆ ಪರಿಹಾರ ಕೊಡದಿರುವ ಬಗ್ಗ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರು ಸರ್ಕಾರವನ್ನು ಹಾಗೂ ಕ್ರಮ ಕೈಗೊಳ್ಳದ ಕೇಂದ್ರ ಸಚಿವರನ್ನು ಟೀಕಿಸಿದ್ದರು. ಮುಖಂಡ ಬಸನಗೌಡ ಯತ್ನಾಳ್‌ ಅವರೂ ಟೀಕೆ ಮಾಡಿದ್ದರು. ಅವರಿಗೆ ನೋಟಿಸ್‌ ನೀಡಿ ಬಾಯಿ ಮುಚ್ಚಿಸಿದ್ದಾರೆ’ ಎಂದು ವ್ಯಂಗ್ಯಮಾಡಿದರು.

ಕಾಂಗ್ರೆಸ್‌ ಶಾಸಕ ಡಾ.ಜಿ.ಪರಮೇಶ್ವರ ಅವರ ಮನೆ, ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ತಪಾಸಣೆಯನ್ನು ಖಂಡಿಸಿದ ಮರಿಸ್ವಾಮಿ ಅವರು, ‘ಪರಮೇಶ್ವರ ಅವರು ಕಾನೂನು ಬದ್ಧವಾಗಿ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಜೆಪಿ ಐಟಿ ಇಲಾಖೆಯನ್ನು ಬಳಸುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿಯಲ್ಲೇ ಭ್ರಷ್ಟಾಚಾರ ನಡೆಸಿದರವು ಹಲವರಿದ್ದಾರೆ. ಅವರನ್ನು ಬಿಟ್ಟು ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಾದಯ್ಯ, ಚಾಮರಜಾಜನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಸ್ಗರ್‌ ಮುನ್ನಾ, ಪತ್ರಿಕಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಇದ್ದರು.

ಹುಲಿ ದಾಳಿ: ಸರ್ಕಾರದ ವಿರುದ್ಧ ಆಕ್ರೋಶ

ಬಂಡೀಪುರದಲ್ಲಿ ಹುಲಿಯ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಆದ್ಯತೆಯ ವಿಚಾರಗಳ ಬಗ್ಗೆ ಗಮನಕೊಡುತ್ತಿಲ್ಲ. ಬಂಡೀಪುರದಲ್ಲಿ ಇಬ್ಬರು ರೈತರನ್ನು ಹುಲಿ ಬಲಿ ಪಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಅರಣ್ಯ ಸಚಿವರಾಗಲಿ, ಸ್ಥಳೀಯ ಶಾಸಕರಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಈ ಹಿಂದೆ ಒಬ್ಬ ರೈತನನ್ನು ಹತ್ಯೆ ಮಾಡಿದಾಗಲೇ ಸಚಿವರು ಅರಣ್ಯ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ, ಎರಡನೇ ಅನಾಹುತ ಸಂಭವಿಸುತ್ತಿರಲಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.