ADVERTISEMENT

ಒಳಮೀಸಲಾತಿ ಕಲ್ಪಿಸುವವರೆಗೆ ಹೋರಾಟ ನಿರಂತರ: ಬಸವನಪುರ ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 14:24 IST
Last Updated 5 ಮಾರ್ಚ್ 2021, 14:24 IST
ರಾಜಶೇಖರ್‌
ರಾಜಶೇಖರ್‌   

ಚಾಮರಾಜನಗರ: ‌ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ನೀಡುವವರೆಗೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಬಸವನಪುರ ರಾಜಶೇಖರ್‌ ಅವರು ಶುಕ್ರವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ರಾಜ್ಯದಲ್ಲಿ 50ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾದಿಗ ಸಮುದಾಯಕ್ಕೆ ಯಾವ ಸರ್ಕಾರಗಳೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಮೀಸಲಾತಿಗಾಗಿ 25 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೂ ಯಾರೂ ಗಮನ ಹರಿಸಿಲ್ಲ’ ಎಂದು ದೂರಿದರು.

‘ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನಮ್ಮ ಸಮುದಾಯ ಹಿಂದೆ ಉಳಿದಿದೆ. ಆಳುವವರು ಹಾಗೂ ಪರಿಶಿಷ್ಟ ಜಾತಿಯ ಸಮುದಾಯದವರೇ ನಮ್ಮನ್ನು ತುಳಿಯುತ್ತಿದ್ದಾರೆ. ರಾಜಕೀಯದಲ್ಲಿ ನಮ್ಮವರಿಗೆ ಅವಕಾಶವೇ ಇಲ್ಲ. ಪರಿಶಿಷ್ಟ ಜಾತಿಯಲ್ಲೇ ಇರುವ ಬೆರಳೆಣಿಕೆಯ ಜಾತಿಗಳು ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿವೆ. ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಲು ಎಲ್ಲ ಸರ್ಕಾರಗಳು ವಿಫಲವಾಗಿವೆ’ ಎಂದರು.

ADVERTISEMENT

‘ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಬಂದರೆ, ಸಮುದಾಯದವರಿಗೆ ಅನುಕೂಲವಾಗಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಶೇ 3ರಷ್ಟು ಮಂದಿ ಮಾತ್ರ ಇದಕ್ಕೆ ವಿರೋಧಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾದರೂ ಸರ್ಕಾರ ವರದಿ ಜಾರಿಗೆ ಮನಸ್ಸು ಮಾಡುತ್ತಿಲ್ಲ’ ಎಂದು ರಾಜಶೇಖರ್ ಹೇಳಿದರು.

8ರಂದು ಸಮಾವೇಶ: ‘ಮಾದಿಗರಿಗೆ ಮೀಸಲಾತಿ ಸಿಗುವವರೆಗೆ ಹಾಗೂ ಸಾಮಾಜಿಕ ನ್ಯಾಯ ಲಭ್ಯವಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಹೋರಾಟದ ಭಾಗವಾಗಿ ಇದೇ 8ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಜಿಲ್ಲೆಯವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದರು. ‌

‌ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಚಾಮರಾಜು, ತಾಲ್ಲೂಕು ಅಧ್ಯಕ್ಷ ಮರಪ್ಪ, ಕಾರ್ಯದರ್ಶಿ ಎಂ.ಶಿವಕುಮಾರ್, ಮುಖಂಡರಾದ ಜಗದೀಶ್, ನಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.