ADVERTISEMENT

ಬಂಡೀಪುರ ಅರಣ್ಯದೊಳಗೆ ರಾತ್ರಿ ವಾಹನ ಸಂಚಾರ ನಿರ್ಬಂಧ ಮುಂದುವರಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:35 IST
Last Updated 6 ಏಪ್ರಿಲ್ 2025, 7:35 IST
<div class="paragraphs"><p>’ಬಂಡೀಪುರದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ</p></div>

’ಬಂಡೀಪುರದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ

   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ ನೀಡಬಾರದು, ನಿರ್ಬಂಧ ಮುಂದುವರಿಸಬೇಕು ಎಂದು ಒತ್ತಾಯಿಸಿ ಭಾನುವಾರ ಪರಿಸರವಾದಿಗಳ ನೇತೃತ್ವದಲ್ಲಿ ‘ಬಂಡೀಪುರದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ ನಡೆಯಿತು.

ಕಗ್ಗಳದ ಹುಂಡಿ ಬಳಿಯಿಂದ ಆರಂಭವಾದ ಪಾದಯಾತ್ರೆ ಮದ್ದೂರು ಚೆಕ್‌ಪೋಸ್ಟ್‌ವರೆಗೂ ಸಾಗಿತು. ದಲಿತ, ರೈತ, ಪ್ರಗತಿಪರ, ಕನ್ನಡಪರ ಸಂಘಟನೆಗಳು ಹಾಗೂ ಹಲವು ಎನ್‌ಜಿಒಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವು. ‘ರಾತ್ರಿ ಸಂಚಾರ ಬೇಡವೇ ಬೇಡ’, ‘ಮೂಖ ಪ್ರಾಣಿಗಳಿಗೆ ದನಿಯಾಗೋಣ’ ಎಂಬ ಪೋಸ್ಟರ್‌ಗಳನ್ನು ಹಿಡಿದು ಪರಸರವಾದಿಗಳು ಸಾಗಿದರು.

ADVERTISEMENT

ಮದ್ದೂರು ಚೆಕ್‌ಪೋಸ್ಟ್ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಪರಿಸರವಾದಿ ಸೇನಾನಿ ಮಾತನಾಡಿ ’ಭೂಮಿ ಮೇಲಿರುವ 80 ಲಕ್ಷ ಜೀವವೈವಿಧ್ಯಗಳಲ್ಲಿ ಮನುಷ್ಯನೂ ಸೇರಿದ್ದು, ಜೀವವೈವಿಧ್ಯ ಉಳಿದರೆ ಮಾತ್ರ ಮನುಷ್ಯ ಉಳಿಯಬಲ್ಲ ಎಂಬ ಸತ್ಯವನ್ನು ಆಳುವ ಸರ್ಕಾರಗಳು ಅರಿಯಬೇಕಿದೆ.

ಬಂಡೀಪರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದಶಕದ ಹಿಂದೆ 15 ನಿಮಿಷಕ್ದೊಂದು ವಾಹನ ಸಂಚರಿಸುತ್ತಿತ್ತು. ಪ್ರಸ್ತುತ 5 ಸೆಕೆಂಡ್‌ಗೆ ಒಂದು ವಾಹನ ಓಡಾಡುತ್ತಿದ್ದು ಸಂಚಾರ ದಟ್ಟಣೆ ಮಿತಿಮೀರಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದರೆ ಜೀವವೈವಿಧ್ಯವೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಅರಣ್ಯದೊಳಗೆ ಮಾನವನ ಹಸ್ತಕ್ಷೇಪ ಸಲ್ಲದು, ಅಭಿವೃದ್ಧಿ ಹೆಸರಿನಲ್ಲಿ ವಿಶಾಲವಾದ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ ಕಾರ್ಯಸಾಧುವಲ್ಲ ಎಂದು ಸೇನಾನಿ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪರಿಸರವಾದಿಗಳಾದ ಕೃಪಾಕರ, ಜೋಸೆಫ್ ಹೂವರ್, ನಾಗಾರ್ಜುನ ಕುಮಾರ್, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಬಾಲಚಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.