ADVERTISEMENT

ಹನೂರು | ದೇಸಿ ಹಸು ಸಾಕಣೆ; ತುಪ್ಪ ಮಾರಾಟದಿಂದ ಆದಾಯ

ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಬಿಇಎಲ್‌ ನಿವೃತ್ತ ಉದ್ಯೋಗಿ ನಾಗರಾಜು

ಬಿ.ಬಸವರಾಜು
Published 6 ಮೇ 2022, 3:16 IST
Last Updated 6 ಮೇ 2022, 3:16 IST
ನಾಗರಾಜು ಸಾಕಿರುವ ಹಸುಗಳು
ನಾಗರಾಜು ಸಾಕಿರುವ ಹಸುಗಳು   

ಹನೂರು: ಕೇಂದ್ರ ಸರ್ಕಾರದ ಉದ್ಯೋಗದಿಂದ ನಿವೃತ್ತಿ ಪಡೆದು, ಹಳ್ಳಿಗೆ ಬಂದು ಉತ್ತಮ ಹೈನುಗಾರರಾಗಿ ಬದಲಾಗಿರುವ ನಾಗರಾಜು ಕಥೆಯಿದು.

ತಾಲ್ಲೂಕಿನ ಚೆನ್ನಾಲಿಂಗನಹಳ್ಳಿಯ ನಾಗರಾಜು ಬೆಂಗಳೂರಿನ ಬಿಇಎಲ್‌ನಲ್ಲಿ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಉದ್ಯೋಗಿಯಾಗಿದ್ದವರು. 37 ವರ್ಷ ಸೇವೆ ಸಲ್ಲಿಸಿ 2003ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಬಳಿಕ ಬೆಂಗಳೂರಿನಲ್ಲಿ ಸಿಲಿಕಾನ್ ವ್ಯಾಲಿಟ್ ಎಂಬ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾದರು. ಕೋವಿಡ್ ಕಾರಣದಿಂದಾಗಿ ಗ್ರಾಮಕ್ಕೆ ಬಂದ ಅವರು ಇರುವ ಜಮೀನಿನಲ್ಲಿ ವಿಶೇಷ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಹೈನುಗಾರಿಕೆ ಆರಂಭಿಸಿದ್ದರು. ಈಗ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಸ್ವದೇಶಿ ತಳಿಗಳ ಹಸುಗಳನ್ನು ಸಾಕಿರುವುದು ಇವರ ವಿಶೇಷ.

ನಾಗರಾಜು ಅವರಿಗೆ 19.5 ಎಕರೆ ಜಮೀನಿದೆ. ಮೊದಲನೆ ಹಂತವಾಗಿ ಹೈನುಗಾರಿಕೆ ಆರಂಭಿಸಿದ್ದಾರೆ. ಹಸುಗಳನ್ನು ಸಾಕಲು ಆರಂಭಿಸುವುದಕ್ಕೂ ಮುನ್ನ ಅವುಗಳ ಮೇವಿಗಾಗಿ ಹುಲ್ಲು ಬೆಳೆದರು.ಬಳಿಕ ರಾಜಸ್ಥಾನದಿಂದ ಗಿರ್ ತಳಿಯ 10 ಹಸುಗಳನ್ನು ತಂದು ಸಾಕಲು ಪ್ರಾರಂಭಿಸಿದರು. ವರ್ಷದಲ್ಲೇ ಹಸುಗಳ ಸಂಖ್ಯೆ ಎರಡು ಪಟ್ಟು ಜಾಸ್ತಿಯಾಗಿ ಈಗ 26 ಗಿರ್ ತಳಿಯ ಹಸುಗಳು ಅವರ ಬಳಿ ಇವೆ. ಆಂಧ್ರಪ್ರದೇಶದಿಂದ ಪುಂಗನೂರು ತಳಿ, ಓಂಗೋಲ್ ತಳಿಯ ತಲಾ ಒಂದೊಂದು ಹಸು ಕೂಡ ಇವೆ. ಈಗ ಅವುಗಳು ಕರುಗಳನ್ನು ಹಾಕಿದ್ದು, ಮೂರು ತಳಿಗಳ ಹಸುಗಳು ಸೇರಿ 35 ರಾಸುಗಳಿವೆ. ಐವರು ಕೆಲಸದವರನ್ನೂ ಇಟ್ಟುಕೊಂಡಿದ್ದಾರೆ.

ADVERTISEMENT

ಗಿರ್ ತಳಿ ತುಪ್ಪ ಮಾರಾಟ: ತಾವು ಸಾಕುತ್ತಿರುವ ಗಿರ್ ತಳಿಯ ಹಸುವಿನ ಹಾಲಿನಿಂದ ಬೆಣ್ಣೆ ತೆಗೆದು ಅದರಿಂದ ತುಪ್ಪ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ತಮ್ಮದೇ ಆದ ಎನ್.ಎಂ.ಕೆ ಫಾರ್ಮ್ ಅನ್ನು ಸ್ಥಾಪಿಸಿ ಅದಕ್ಕೆ ಬನಶಂಕರಿ ಗೋಶಾಲೆ ಎಂದು ಹೆಸರಿಟ್ಟಿದ್ದಾರೆ.

‘2019ರಲ್ಲಿ ಈ ಗೋಶಾಲೆಯನ್ನು ನಾನು ಆರಂಭ ಮಾಡಿದ್ದು, ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಬೆಂಗಳೂರಿನಲ್ಲಿ ತುಪ್ಪಕ್ಕೆ ತುಂಬಾ ಬೇಡಿಕೆಯಿದ್ದು, ಮುಂಗಡವಾಗಿಯೇ ಗ್ರಾಹಕರು ತುಪ್ಪ ಕಾಯ್ದಿರಿಸುತ್ತಿದ್ದಾರೆ’ ಎಂದು ನಾಗರಾಜು ಹೇಳಿದರು.

‘ಬೆಂಗಳೂರಿನಲ್ಲಿ ಪ್ರತಿ ಕೆಜಿ ತುಪ್ಪಕ್ಕೆ ₹ 2,000ಕ್ಕೆ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯವಾಗಿ ಖರೀದಿಸುವವರಿಗೆ ಪ್ರತಿ ಕೆಜಿಗೆ ₹ 1,800ಕ್ಕೆ ಕೊಡುತ್ತಿದ್ದೇನೆ. ಉಳಿಕೆ ಹಾಲು, ಮಜ್ಜಿಗೆಯನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ಬೇರೆ ಆಯಾಮಗಳಲ್ಲಿ ಕೊಂಡೊಯ್ಯುವ ಯೋಜನೆಯಿದೆ. ಇದಕ್ಕಾಗಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.

ಮೀನು ಸಾಕಣೆಗೂ ಯೋಜನೆ

ಹೈನುಗಾರಿಕೆ ಜೊತೆಗೆ ಮೀನು ಸಾಕಣೆಗೂ ಮುಂದಾಗಿದ್ದಾರೆ. ಇದಕ್ಕಾಗಿ ಜಮೀನಿನಲ್ಲಿ ಮೀನಿನ ತೊಟ್ಟಿ ನಿರ್ಮಾಣ ಕಾರ್ಯ ಶುರು ಮಾಡಿದ್ದಾರೆ.

‘ಮೀನಿನ ಮರಿಗಳಿಗಾಗಿ, ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇನೆ. ಮೀನಿನ ಮರಿ ಸಿಕ್ಕಿದ ತಕ್ಷಣವೇ ಮೀನು ಸಾಕಣೆ ಪ್ರಾರಂಭಿಸುತ್ತೇನೆ’ ಎಂದು ನಾಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.