ADVERTISEMENT

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ

ಸುಳ್ವಾಡಿ: ಮೂರು ದಿನಗಳಿಂದ ವಿವಿಧ ಕಾಮಗಾರಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಬಿ.ಬಸವರಾಜು
Published 8 ಅಕ್ಟೋಬರ್ 2020, 20:15 IST
Last Updated 8 ಅಕ್ಟೋಬರ್ 2020, 20:15 IST
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಬಣ್ಣ ಬಳಿದಿರುವುದು
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಬಣ್ಣ ಬಳಿದಿರುವುದು   

ಹನೂರು (ಚಾಮರಾಜನಗರ): ವಿಷಪ್ರಸಾದ ಪ್ರಕರಣದಿಂದಾಗಿ ರಾಜ್ಯದಲ್ಲೆಲ್ಲ ಮನೆ ಮಾತಾಗಿ, ಭಕ್ತರ ಪಾಲಿಗೆ ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇವಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ.

ಮುಜರಾಯಿ ಇಲಾಖೆ ವಶಪಡಿಸಿಕೊಂಡಿರುವ ಈ ದೇವಾಲಯದಲ್ಲಿ ಶೀಘ್ರದಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ. ದೇವಾಲಯದ ಆರಂಭದ ಬಗ್ಗೆ ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರು ಸದನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಮುಜರಾಯಿ ಸಚಿವಕೋಟ ಶ್ರೀನಿವಾಸ ಪೂಜಾರಿ ಅವರು,‘ಅಕ್ಟೋಬರ್‌ 20ರಿಂದ ದೇವಾಲಯದಲ್ಲಿ ಪೂಜೆ ಆರಂಭಿಸಲಾಗುವುದು, ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದ್ದರು.

ಇತ್ತೀಚೆಗೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ದೇವಾಲಯದ ಆರಂಭಕ್ಕೂ ಮುನ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದರು.

ADVERTISEMENT

ಅದರಂತೆ, ಹನೂರು ತಹಶೀಲ್ದಾರ್ ಜಿ.ಎಚ್.ನಾಗರಾಜು ಅವರ ನೇತೃತ್ವದಲ್ಲಿ ಮೂರು ದಿನಗಳಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಯುತ್ತಿವೆ.

ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯುವುದು, ಅಗತ್ಯವಿರುವ ಹಾಗೂ ಅತಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ಸಂಪರ್ಕಕ್ಕಾಗಿ ಯುಪಿಎಸ್, ಆವರಣದ ಸುತ್ತಲೂ ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

19 ತಿಂಗಳ ಬಳಿಕ ದರ್ಶನ: 2018ರ ಡಿಸೆಂಬರ್‌ 14ರಂದು ಸಂಭವಿಸಿದ, ಪ್ರಸಾದದಲ್ಲಿ ವಿಷಬೆರೆಸಿ ಭಕ್ತರಿಗೆ ವಿತರಿಸಿದ ದೃಷ್ಕೃತ್ಯದ ನಂತರ ದೇವಸ್ಥಾನವನ್ನು ಮುಚ್ಚಲಾಗಿತ್ತು. ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟು 110ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಪ್ರಕರಣದ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದಾರೆ.

ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಒತ್ತಾಯ ನಂತತರ ಟ್ರಸ್ಟ್‌ನ ನಿಯಂತ್ರಣದಲ್ಲಿದ್ದ ದೇವಸ್ಥಾನವನ್ನು 2019ರ ಏಪ್ರಿಲ್‌ನಲ್ಲಿ ಮುಜರಾಯಿ ಇಲಾಖೆ ವಶಪಡಿಸಿಕೊಂಡಿತ್ತು.

ಆ ನಂತರವೂ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಇರಲಿಲ್ಲ. ಪೂಜೆಯೂ ನಡೆಯುತ್ತಿರಲಿಲ್ಲ. ಹಾಗಿದ್ದರೂ ಸ್ಥಳೀಯರು, ಜಿಲ್ಲೆ ಹಾಗೂ ತಮಿಳುನಾಡಿನಿಂದ ಬರುತ್ತಿದ್ದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹೊರಗಡೆಯಿಂದಲೇ ಕೈಮುಗಿದು ಹೋಗುತ್ತಿದ್ದರು. ಈಗ 19 ತಿಂಗಳ ಬಳಿಕ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತಿದೆ.

ಕಂದಾಯ ಇಲಾಖೆ ಅಧಿಕಾರಿಗಳು ಸೆ.29ರಂದು ದೇವಾಲಯದಲ್ಲಿದ್ದ ಹುಂಡಿ ಎಣಿಕೆ ಮಾಡಿದ್ದರು. ₹2.60 ಲಕ್ಷ ನಗದು, 2 ಗ್ರಾಂ ಚಿನ್ನ ಹಾಗೂ 30 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿತ್ತು.

ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ

‘ದೇವಾಲಯದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಅ.20 ಕ್ಕೆ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸುವಂತೆ ಮುಜುರಾಯಿ ಇಲಾಖೆ ಸೂಚಿಸಿತ್ತು. ಆದರೆ, ದಿನಾಂಕದಲ್ಲಿ ಸಣ್ಣ ಬದಲಾವಣೆಯಾಗಿದ್ದು, ಅ.21ರಿಂದ 23ರವರೆಗೆ ಮೂರು ದಿನಗಳ ಇಲಾಖೆಯ ಸೂಚನೆಯಂತೆ ದೇವಾಲಯದಲ್ಲಿ ಪೂಜಾ, ಹವನ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. 24ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಈಗಾಗಲೇ ದೇವಾಲಯಕ್ಕೆ ಬಣ್ಣ ಬಳಿಯಲಾಗಿದೆ. ಇನ್ನಿತರ ಕೆಲಸಗಳು ನಡೆಯುತ್ತಿವೆ. ನಿಗದಿತ ಅವಧಿಯೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಹನೂರು ತಹಶೀಲ್ದಾರ್ ಜಿ.ಎಚ್.ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.