ADVERTISEMENT

ಚಾಮರಾಜನಗರ ಜಿಲ್ಲೆಗೆ ಆಮ್ಲಜನಕ ಪೂರೈಕೆ ತಡೆದರೇ ರೋಹಿಣಿ ಸಿಂಧೂರಿ?

ಮೈಸೂರು ಅಧಿಕಾರಿಗಳು, ಆಮ್ಲಜನಕ ಪೂರೈಕೆ ಸಂಸ್ಥೆ ಸಿಬ್ಬಂದಿ ನಡುವಿನ ಸಂಭಾಷಣೆ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 17:27 IST
Last Updated 6 ಜೂನ್ 2021, 17:27 IST
ರೋಹಿಣಿ ಸಿಂಧೂರಿ, ಪ್ರತಾಪ್‌ ಸಿಂಹ
ರೋಹಿಣಿ ಸಿಂಧೂರಿ, ಪ್ರತಾಪ್‌ ಸಿಂಹ   

ಚಾಮರಾಜನಗರ: ಜಿಲ್ಲೆಯ ಕೋವಿಡ್‌ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಅಧಿಕಾರಿಗಳು, ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವ ಅಲ್ಲಿನ ಎರಡು ಸಂಸ್ಥೆಗಳ ಸಿಬ್ಬಂದಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗಳು ಭಾನುವಾರ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿವೆ.

ಚಾಮರಾಜನಗರಕ್ಕೆ ಆಮ್ಲಜನಕ ಸಿಲಿಂಡರ್‌ ನೀಡಬೇಕಾದರೆ, ಮೈಸೂರು ಜಿಲ್ಲಾಧಿಕಾರಿ (ಆಗ ರೋಹಿಣಿ ಸಿಂಧೂರಿ ಇದ್ದರು) ಅವರ ಅನುಮತಿ ಬೇಕು ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಿರುವುದು ಧ್ವನಿಮುದ್ರಿಕೆಯಲ್ಲಿವೆ.

ಎಂಪಿ3 ಮಾದರಿಯಲ್ಲಿರುವ ಐದು ಧ್ವನಿಮುದ್ರಿಕೆಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಪ್ರತಿ ಧ್ವನಿಮುದ್ರಿಕೆಯ ಕುರಿತ ಒಕ್ಕಣೆಯೂ ವೈರಲ್‌ ಆಗಿದೆ. ಕರೆ ಮಾಡಿದ ದಿನ, ಸಮಯ, ಯಾರ ನಡುವಿನ ಸಂಭಾಷಣೆ, ಯಾರು ಏನು ಹೇಳುತ್ತಾರೆ ಎಂಬ ವಿವರಗಳು ಅದರಲ್ಲಿವೆ. ಅದರ ಪ್ರಕಾರ, ಎಲ್ಲ ಸಂಭಾಷಣೆಗಳು ಆಮ್ಲಜನಕ ದುರಂತ ಸಂಭವಿಸುವುದಕ್ಕೂ ಮೊದಲೇ ನಡೆದಿವೆ.

ADVERTISEMENT

ಮೂರು ಧ್ವನಿಮುದ್ರಿಕೆಗಳ ಸಂಭಾಷಣೆ ಮೇ 1ರಂದು ಹಾಗೂ ಒಂದು ಮೇ 2ರ ರಾತ್ರಿ 8.35ಕ್ಕೆ ಹಾಗೂ ಇನ್ನೊಂದು ಏಪ್ರಿಲ್‌ 29ರಂದು ನಡೆದ ಸಂಭಾಷಣೆ ಎಂದು ಹೇಳಲಾಗಿದೆ.

ವಜಾಮಾಡಲು ಶಿಫಾರಸು ಮಾಡಲಾ?
ಏಪ್ರಿಲ್‌ 29ರಂದು ನಡೆದ ಸಂಭಾಷಣೆಯು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಅಲ್ಲಿನ ಉಪ ಔಷಧ ನಿಯಂತ್ರಕ ಅರುಣ್‌ ಕುಮಾರ್‌ ಎಂಬುವವರ ನಡುವೆ ನಡೆದಿದೆ ಎನ್ನಲಾಗಿದೆ.

‘ಅರುಣ್‌, ಡಿಸಿ ಮಾತಾಡುತ್ತಾ ಇದ್ದೇನೆ. ನಿನ್ನನ್ನು ವಜಾ ಮಾಡಲು ಶಿಫಾರಸು ಮಾಡಲಾ? ಏನು ಮಾಡಲಿ ಹೇಳು? ಆಮ್ಲಜನಕ ಮತ್ತೆ ಚಾಮರಾಜನಗರಕ್ಕೆ ಯಾಕೆ ಹೋಗುತ್ತಿದೆ?ನಾಳೆ ಮೈಸೂರಿಗೆ ರಿಫಿಲ್‌ಗೆ ಇಲ್ಲ ಎಂದು ಸದರ್ನ್‌ ಗ್ಯಾಸ್‌ ಏಜೆನ್ಸಿಯವನು ಹೇಳುತ್ತಿದ್ದಾನೆ. ನನಗೆ ಇವತ್ತು ರಾತ್ರಿ 10 ಸಾವಿರ ಲೀಟರ್‌ನ ಘಟಕ ಭರ್ತಿಯಾಗಬೇಕು. ಏನಕ್ಕೆ ಅಷ್ಟಷ್ಟು ಹೋಗ್ತಾ ಇದೆ’ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸುವುದು ಆಡಿಯೊದಲ್ಲಿದೆ. ಇದಕ್ಕೆ ಪ್ರತಿಕ್ರಿಯಿಸುವ ಅಧಿಕಾರಿ, ‘ಚಾಮರಾಜನಗರದಲ್ಲಿ ಕೋವಿಡ್‌ ರೋಗಿಗಳಿಗೆ ಮಾತ್ರ ಅಲ್ಲ, ಆಸ್ಪತ್ರೆಗೆ ಆಮ್ಲಜನಕ ಇಲ್ಲ ಅದಕ್ಕೆ ಹೋಗುತ್ತಿದೆ’ ಎಂದು ಹೇಳುತ್ತಾರೆ. ‘ಮುಂದಿನ ಎರಡು ದಿನಗಳ ಅವಧಿಗೆ 34 ಆಸ್ಪತ್ರೆಗಳಿಗೆ ಎಷ್ಟೆಷ್ಟು ಆಮ್ಲಜನಕ ಬೇಕು ಎಂಬ ಮಾಹಿತಿ ಸಂಗ್ರಹಿಸಿ, ಕಚೇರಿಗೆ 11 ಗಂಟೆಗೆ ಬಾ’ ಎಂದು ಜಿಲ್ಲಾಧಿಕಾರಿ ಅವರು ಹೇಳುವುದು ಧ್ವನಿಮುದ್ರಿಕೆಯಲ್ಲಿ ಕೇಳಿಸುತ್ತಿದೆ.

‘ಜಿಲ್ಲಾಧಿಕಾರಿ ಅನುಮತಿ ಬೇಕು’
‘ಆಮ್ಲಜನಕ ನೀಡಬೇಕು ಎಂದರೆ ಜಿಲ್ಲಾಧಿಕಾರಿ ಅವರ ಅನುಮತಿ ಬೇಕು. ಅವರಿಂದ ಕರೆ ಮಾಡಿಸಿ, ಇಲ್ಲವೇ ಅನುಮತಿ ಪತ್ರ ತನ್ನಿ. ಅವರಿಂದ ಬೈಗಳು ತಿನ್ನುವುದಕ್ಕೆ ಆಗುವುದಿಲ್ಲ’ ಎಂದು ಆಮ್ಲಜನಕ ಪೂರೈಸುವ ಸಂಸ್ಥೆಯೊಂದದರ ಸಿಬ್ಬಂದಿ ಹೇಳುವುದು ಧ್ವನಿಮುದ್ರಿಕೆಗಳಲ್ಲಿದೆ.

ಕಾಲಿಗೆ ಬೀಳ್ತೀನಿ ಸಿಲಿಂಡರ್‌ ಕೊಡಿ: ಒಂದು ಧ್ವನಿಮುದ್ರಿಕೆಯಲ್ಲಿ ಉಪ ಔಷಧ ನಿಯಂತ್ರಕ ಅಧಿಕಾರಿ, ಗ್ಯಾಸ್‌ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ‘ಚಾಮರಾಜನಗರದಲ್ಲಿ ತುರ್ತು ಪರಿಸ್ಥಿತಿ ಇದೆ. ಬೆಳಿಗ್ಗೆ 6 ಗಂಟೆಯ ಹೊತ್ತಿಗೆ 50 ಸಿಲಿಂಡರ್‌ ತುರ್ತಾಗಿ ಬೇಕು. ಇಲ್ಲದಿದ್ದರೆ 20 ಜನ ಸಾಯುತ್ತಾರೆ. ಅಲ್ಲಿ ಜಿಲ್ಲಾ ಸರ್ಜನ್‌ ಅಳುತ್ತಿದ್ದಾರೆ. ಕಾಲಿಗೆ ಬೀಳ್ತೀನಿ. ನೀವು ಯಾಕೆ ಈ ರೀತಿ ಮಾಡ್ತೀರಿ. ಯಾಕೆ ಆಟ ಆಡ್ತಾ ಇದ್ದಾರೆ. ಸಿಲಿಂಡರ್‌ ಕೊಡ್ರಿ’ ಎಂದು ಅಳುತ್ತಾ ಹೇಳುತ್ತಿರುವುದು ಕೇಳಿಸುತ್ತಿದೆ.

‘ಸಿಲಿಂಡರ್‌ ಕೊಡುವುದಕ್ಕೆ ಡಿಸಿ ಅನುಮತಿ ಬೇಕು’ ಎಂದು ಸಿಬ್ಬಂದಿ ಹೇಳುವುದೂ ಧ್ವನಿ ಮುದ್ರಿಕೆಯಲ್ಲಿದೆ. ಮೇ 1ರಂದು ಮುಂಜಾನೆ 4.15ಕ್ಕೆ ಈ ಸಂಭಾಷಣೆ ನಡೆದಿದೆ. ‘ಈಗ 4.15 ಆಯ್ತು. 6 ಗಂಟೆಗೆ ಅಲ್ಲಿಗೆ ತಲುಪಬೇಕು’ ಎಂದು ಅಧಿಕಾರಿ ಹೇಳುವುದು 11.17 ನಿಮಿಷಗಳ ಧ್ವನಿಮುದ್ರಿಕೆಯಲ್ಲಿ ಕೇಳಿಸುತ್ತದೆ.

ಕೇಳಿ ಬಂದಿತ್ತು ಆರೋಪ: ಮೇ 2ರಂದು ಆಮ್ಲಜನಕ ದುರಂತ ನಡೆದ ಮಾರನೇ ದಿನ, ಜಿಲ್ಲೆಗೆ ಆಮ್ಲಜನಕ ಪೂರೈಸುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನೇರವಾಗಿ ಈ ಆರೋಪ ಮಾಡಿದ್ದರು. ಇದನ್ನು ರೋಹಿಣಿ ಸಿಂಧೂರಿ ತಳ್ಳಿ ಹಾಕಿದ್ದರು.

ವರ್ಗಾವಣೆ ನಂತರ ವೈರಲ್‌: ಆಮ್ಲಜನಕ ದುರಂತ ನಡೆದ ಒಂದು ತಿಂಗಳ ಬಳಿಕ, ಅದೂ ರೋಹಿಣಿ ಸಿಂಧೂರಿ ಅವರು ವರ್ಗಾವಣೆ ಆದ ಮರು ದಿನವೇ ಧ್ವನಿಮುದ್ರಿಕೆಗಳು ಬಿಡುಗಡೆಯಾಗಿರುವುದು ಕುತೂಹಲ ಹುಟ್ಟಿಸಿದೆ.

ಮೌಖಿಕ ನಿರ್ದೇಶನ ಏನಿತ್ತು ಎಂಬುದು ಗೊತ್ತು: ಪ್ರತಾಪ್‌ ಸಿಂಹ
ಈ ಮಧ್ಯೆ, ಆಮ್ಲಜನಕ ದುರಂತದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸಮರ್ಥಿಸಿಕೊಂಡಿದ್ದ ಮೈಸೂರು–ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು, ಈಗ ಭಿನ್ನ ಹೇಳಿಕೆ ನೀಡಿದ್ದು, ಜಿಲ್ಲೆಗಳ ನಡುವೆ ಜಗಳವಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಅವರನ್ನು ಸಮರ್ಥಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಫೇಸ್‌ ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಅವರು, ‘ಅಂದು ಏನು ತಪ್ಪಾಗಿದೆ ಎಂಬುದು ನನಗೆ ಗೊತ್ತಿದೆ. ಆದರೆ ಕೆಲವು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಅಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕೂಡ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ದೂರಿದ್ದರು. ರಾಜ್ಯದಲ್ಲಿ ನಮ್ಮದೇ ಸರ್ಕಾರದ ಇದೆ. ಡಿಸಿ, ಡೀನ್‌ ಡಿಎಚ್‌ಒ ಎಲ್ಲರೂ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಮೈಸೂರನ್ನು ಕಟಕಟೆಗೆ ನಿಲ್ಲಿಸಬಾರದು. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ನಡುವೆ ಜಗಳವಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರನ್ನು ಸಮರ್ಥಿಸಿದ್ದೆ’ ಎಂದು ಅವರು ಹೇಳಿದ್ದಾರೆ.

ಆದರೆ, ಸತ್ಯ ಏನು ಎಂಬುದು ನನಗೆ ಗೊತ್ತಿದೆ. ಮೌಖಿಕ ನಿರ್ದೇಶನ ಏನಿತ್ತು? ಚಾಮರಾಜನಗರಕ್ಕೆ ಯಾಕೆ ಅಂದು ಆಮ್ಲಜನಕ ಸಿಲಿಂಡರ್‌ ಹೋಗಿಲ್ಲ ಎಂಬುದು ಗೊತ್ತಿದೆ. ಈಗ ಪ್ರಾಥಮಿಕ ವರದಿ ಬಂದಿದೆಯಷ್ಟೆ. ಹೈಕೋರ್ಟ್‌ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ನಂತ‌ರ ಸತ್ಯಾಸತ್ಯತೆ ಏನೆಂಬುದು ಗೊತ್ತಾಗಲಿದೆ’ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.