ಸಂತೇಮರಹಳ್ಳಿ: ಈ ಶಾಲೆಯಲ್ಲಿ ಮಕ್ಕಳು ಹೃದಯವನ್ನು ಸ್ಪರ್ಶಿಸುತ್ತಾರೆ, ಕಿಡ್ನಿಯನ್ನು ದೇಹದಿಂದ ಪ್ರತ್ಯೇಕಿಸಿ ಅವಲೋಕಿಸುತ್ತಾರೆ, ರಕ್ತ ನಾಳಗಳ ವೈವಿಧ್ಯತೆಯನ್ನು ಚಿಕಿತ್ಸಕ ದೃಷ್ಟಿಯಿಂದ ತಿಳಿಯುತ್ತಾರೆ. ಮೆದುಳು, ಮಾನವನ ವಿಕಾಸದ ಬೆಳವಣಿಗೆಯನ್ನು ಪ್ರಯೋಗಕ್ಕೆ ಒಳಪಡಿಸುತ್ತಾರೆ. ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿರುವ ವೈವಿಧ್ಯಮಯ ಪ್ರಯೋಗಾಲಯದಲ್ಲಿ ಕಂಡುಬರುವ ದೃಶ್ಯಗಳು ಇವು.
ಈ ಶಾಲೆಯಲ್ಲಿ ವಿಜ್ಞಾನ ಶಿಕ್ಷಣವನ್ನು ಸರಳವಾಗಿ, ವಿಮರ್ಶಾತ್ಮಕವಾಗಿ ಅರಿಯುವ ಪ್ರಯತ್ನ ನಡೆಯುತ್ತಿದ್ದು, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳ ವಿಜ್ಞಾನ ಜ್ಞಾನವನ್ನು ಹೆಚ್ಚಿಸಲಾಗುತ್ತಿದೆ. ಶಾಲೆಯಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 14 ಶಿಕ್ಷಕರು ಇದ್ದಾರೆ. ಪಠ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲಿಸುವ ಜತೆಗೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಪ್ರಾತ್ಯಕ್ಷಿಕೆ, ವನ ಸಂಚಾರ, ಪರಿಸರ ಅಧ್ಯಯನ, ಮೊದಲಾದ ಸೃಜನಾತ್ಮಕ ಕಲಿಕೆಯ ಮೂಲಕ ಪ್ರಾಯೋಗಿಕ ಹಾಗೂ ಚಟುವಟಿಕೆಯುಕ್ತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಮಕ್ಕಳ ಕಲಿಕೆಗೆ ಅಗತ್ಯವಾದ ವೈಜ್ಞಾನಿಕ ಉಪಕರಣಗಳು ಶಾಲೆಯಲ್ಲಿವೆ. ಮೈಕ್ರೋ ಸೂಕ್ಷ್ಮದರ್ಶಕ, ಮತ್ತು ರಸಾಯನ ಶಾಸ್ತ್ರ ಪರಿಚಯಿಸಲು ಬೇಕಾದ ಆಮ್ಲ, ಆಮ್ಲೀಯ ವಸ್ತುಗಳು, ನಕ್ಷತ್ರ, ಗ್ರಹ ಕೇಂದ್ರಿತ ಸಿದ್ಧಾಂತವನ್ನು ತಿಳಿಸಲು ಪುಟ್ಟ ಯಂತ್ರಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಮಹದೇವಸ್ವಾಮಿ.
ಆಮ್ಲಜನಕ, ಜಲಜನಕ, ಓಝೋನ್ ಪದರಗಳಲ್ಲಿ ಇರುವ ನೀರು ಮತ್ತು ಪ್ರಾಣವಾಯು ಪ್ರಮಾಣಗಳನ್ನು ತಿಳಿದುಕೊಳ್ಳಲು ಅಗತ್ಯ ಪರಿಕರಗಳು ಇವೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಪ್ರಯೋಗಾಲಯಕ್ಕೆ ಭೇಟಿನೀಡಿ ಪಠ್ಯದಲ್ಲಿರುವ ಮೂಲ ವಿಷಯವನ್ನು ಸರಳ ಪ್ರಯತ್ನಗಳ ಮೂಲಕ ಕಲಿಯುವ ಪ್ರಯತ್ನ ನಡೆಸುತ್ತಾರೆ ಎನ್ನುತ್ತಾರೆ ಶಿಕ್ಷಕರು.
ಟಿವಿ ಮತ್ತು ಪ್ರೊಜೆಕ್ಟರ್ ಬಳಸಿಕೊಂಡು ಮಕ್ಕಳಿಗೆ ಗ್ರಹ ನಕ್ಷತ್ರಗಳ ಸ್ಥಾನೀಕರಣ ವ್ಯವಸ್ಥೆಯ ಬಗ್ಗೆ ತಿಳಿಸಲಾಗುತ್ತದೆ. ರಸಾಯನ ಶಾಸ್ತ್ರದಲ್ಲಿ ಬಳಕೆಯಾಗುವ ರಾಸಾಯನಿಕ ಪದಾರ್ಥಗಳನ್ನು ಗುರುತಿಸುವ ಮೂಲಕ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಬೇಸರದಿಂದ ಹೊರಬಂದು ಪ್ರಯೋಗ ವಿಷಯಗಳನ್ನು ಅರಿಯಲು ಸಾಧ್ಯವಾಗಲಿದೆ.
ಶಾಲೆಯಲ್ಲಿ ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನು ಭೂಪಟಗಳು ಮತ್ತು ಬಿಂಬ ಗ್ರಹಣ ಪ್ರಸ್ತುತಿ ಮೂಲಕ ಪಾಠ ವಿಷಯಗಳನ್ನಾಗಿ ಕಲಿಸಲಾಗುತ್ತಿದೆ. ಮಕ್ಕಳು ಮುಕ್ತವಾಗಿ ಪ್ರಶ್ನಿಸುತ್ತಾರೆ, ಚರ್ಚಾ ವಿಧಾನ ಸೇರಿದಂತೆ ಮೊದಲಾದ ವಿಧಾನಗಳಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬಹುದು. ಇದೇವೇಳೆ ಜೀವಶಾಸ್ತ್ರ ವಿಷಯದಲ್ಲಿ ದೇಹದ ಅಂಗಾಗಗಳು ಸಸ್ಯದ ಬೆಳವಣಿಗೆ ಪ್ರಾಣಿ ಮತ್ತು ಪಕ್ಷಿಗಳ ವಿಕಾಸದ ವೈವಿಧ್ಯತೆಗಳನ್ನು ತಿಳಿಯುವ ತರಬೇತಿ ನೀಡಲಾಗುತ್ತದೆ. ಇದರಿಂದ ಶಾಲೆಯಲ್ಲಿ ಕಲಿತ ಹತ್ತಾರು ವೈಜ್ಞಾನಿಕ ವಿಚಾರಧಾರೆಗಳನ್ನು ಸುಲಭವಾಗಿ ನಿರೀಕ್ಷಿಸಬಹುದು. ಪ್ರತಿ ವಿಷಯವನ್ನು ಸ್ಪರ್ಶಿಸುವ, ವೀಕ್ಷಿಸುವ ಮೂಲಕ ಅನುಭವಿಸಿ ಕಲಿಯುವುದರಿಂದ ಬೋಧನೆ ಸುಲಭವಾಗಿ ಅರ್ಥವಾಗುತ್ತದೆ ಎನ್ನುತ್ತಾರೆ 9ನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ.
ಕಲಿಕೆ ಏಕಮುಖವಾಗಿರುವುದಿಲ್ಲ, ಪರಿಸರ ವೈವಿಧ್ಯತೆಯನ್ನು ನಿಸರ್ಗ ಸಮೀಪದಲ್ಲಿಯೇ ಅರಿಯಬಹುದು. ಗಿಡ ಮರಗಳಿಗೆ ಹಸಿರು ತುಂಬಿಕೊಳ್ಳುವುದು, ವೇಗ, ಉತ್ಕರ್ಷ ಮತ್ತು ವೈವಿಧ್ಯಮಯ ಯಂತ್ರಗಳು, ಮೋಟಾರು, ರೈಲು, ವಿಮಾನಗಳ ವೇಗ, ಹೀಗೆ ವೈಚಾರಿಕ ಚಿಂತನೆಗಳನ್ನು ನಿಖರವಾಗಿ ಗುರುತಿಸುವ ಕೆಲಸ ಪ್ರಯೋಗಗಳಿಂದ ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿನಿ ಹರ್ಷಿತಾ (ಚಾರ್ವಿ) ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.