ADVERTISEMENT

ನಗರಸಭೆ ಉಪಚುನಾವಣೆ: ಸ್ಪರ್ಧಿಸಲು ಅವಕಾಶವಿಲ್ಲ, ಅನರ್ಹ ಸದಸ್ಯರಿಗೆ ಹಿನ್ನಡೆ

ಚುನಾವಣಾ ಆಯೋಗದ ತೀರ್ಮಾನದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ

ಅವಿನ್ ಪ್ರಕಾಶ್
Published 9 ಅಕ್ಟೋಬರ್ 2022, 6:13 IST
Last Updated 9 ಅಕ್ಟೋಬರ್ 2022, 6:13 IST
ಎನ್‌.ಮಹೇಶ್‌
ಎನ್‌.ಮಹೇಶ್‌   

ಕೊಳ್ಳೇಗಾಲ: ಇದೇ 28ರಂದು ಇಲ್ಲಿನ ನಗರಸಭೆಯ ಏಳು ವಾರ್ಡ್‌ಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸದಸ್ಯತ್ವ ಅನರ್ಹಗೊಂಡಿರುವವರು ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದು ಅನರ್ಹಗೊಂಡ ಏಳು ಮಂದಿ ಹಾಗೂ ಶಾಸಕ ಎನ್‌.ಮಹೇಶ್‌ ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಚುನಾವಣೆ ಆಯೋಗದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡಲು ಏಳು ಮಂದಿ ಸಿದ್ಧತೆ ನಡೆಸಿದ್ದಾರೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಲೇ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಏಳು ಮಂದಿಯೂ ಉತ್ಸುಕರಾಗಿದ್ದರು. ಶಾಸಕ ಎನ್‌.ಮಹೇಶ್‌ ಕೂಡ, ಅವರೇ ಮತ್ತೆ ಸದಸ್ಯರಾಗುತ್ತಾರೆ ಎಂದು ಹೇಳಿದ್ದರು.

ADVERTISEMENT

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ್ದಬಿಎಸ್‌ಪಿ ಸದಸ್ಯರಾದ ಎಲ್‌.ನಾಗಮಣಿ (2ನೇ ವಾರ್ಡ್‌), ಗಂಗಮ್ಮ (6ನೇ ವಾರ್ಡ್‌) ನಾಸೀರ್‌ ಷರೀಫ್‌ (7ನೇ ವಾರ್ಡ್‌), ಎನ್‌.ಪವಿತ್ರ (13ನೇ ವಾರ್ಡ್), ಪ್ರಕಾಶ್‌ (21ನೇ ವಾರ್ಡ್‌), ರಾಮಕೃಷ್ಣ (25ನೇ ವಾರ್ಡ್‌), ನಾಗಸುಂದ್ರಮ್ಮ (26ನೇ ವಾರ್ಡ್‌) ಅವರ ಸದಸ್ಯತ್ವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು.

ಚುನಾವಣಾ ಆಯೋಗ ಹೇಳಿದ್ದೇನು?: ಸದಸ್ಯರ ಅನರ್ಹತೆಯಿಂದ ತೆರವಾಗಿರುವ ಏಳು ವಾರ್ಡ್‌ಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಅದರ ಪ್ರಕಾರ, ಇದೇ 10ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. 28ರಂದು ಮತದಾನ ನಡೆಯಲಿದೆ. 31ರಂದು ಫಲಿತಾಂಶ ಪ್ರಕಟವಾಗಲಿದೆ.

ಅನರ್ಹ ಸದಸ್ಯರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಇದೇ 6ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಆಯೋಗ, ‘ಕೊಳ್ಳೇಗಾಲ ನಗರಸಭೆ ಚುನಾಯಿತ ಸದಸ್ಯರ ಅವಧಿ 29.10.2025ಕ್ಕೆ ಮುಕ್ತಾಯವಾಗುತ್ತದೆ. ಸದಸ್ಯರ ಅನರ್ಹತೆಯ ಅವಧಿಯು ಅವರ ಅಧಿಕಾರದ ಅವಧಿ ಮುಕ್ತಾಯಗೊಳ್ಳುವವರೆಗೂ ಇರುವ ಬಗ್ಗೆ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದೆ. ಹಾಗಾಗಿ, ಉಪ ಚುನಾವಣೆಯಲ್ಲಿ ಅನರ್ಹಗೊಂಡ ಸದಸ್ಯರು ನಾಮಪತ್ರ ಸಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ತೀವ್ರ ಹಿನ್ನಡೆ: ಅನರ್ಹಗೊಂಡಿರುವ ಏಳು ಮಂದಿಯೂ ಶಾಸಕ ಎನ್‌.ಮಹೇಶ್‌ ಬೆಂಬಲಿಗರು. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ತಾವು ಹಿಂದೆ ಪ್ರತಿನಿಧಿಸಿದ್ದ ವಾರ್ಡ್‌ಗಳಲ್ಲಿ ಸುತ್ತಾಡಲು ಆರಂಭಿಸಿದ್ದರು. ‘ಮತ್ತೆ ನಮಗೆ ನಿಲ್ಲಲು ಅವಕಾಶ ದೊರೆತಿದೆ. ನಮ್ಮನ್ನು ಗೆಲ್ಲಿಸಬೇಕು’ ಎಂದು ಕೆಲವರು ಪ್ರಚಾರವನ್ನೂ ಆರಂಭಿಸಿದ್ದರು.

ಜೊತೆಗೆ ಶಾಸಕ ಎನ್.ಮಹೇಶ್ ಅವರು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಏಳು ಮಂದಿಯನ್ನು ಕರೆದುಕೊಂಡು ಹೋಗಿ, ‘ಇವರಿಗೆ ಟಿಕೆಟ್ ನೀಡಬೇಕು’ ಎಂದು ಮನವಿಯನ್ನೂ ಮಾಡಿದ್ದರು.

ಆದರೆ, ಈಗ ಚುನಾವಣಾ ಆಯೋಗ ವ್ಯಕ್ತಪಡಿಸಿರುವ ಅಭಿಪ್ರಾಯ ಶಾಸಕರು ಹಾಗೂ ಏಳು ಮಂದಿ ಆಕಾಂಕ್ಷಿಗಳಿಗೂ ನಿರಾಸೆ ಉಂಟು ಮಾಡಿದೆ.

ಆಯೋಗದ ತೀರ್ಮಾನದ ವಿರುದ್ಧ ನ್ಯಾಯಾಲಯ ಮೆಟ್ಟಿಲು ಹತ್ತಲು ಯೋಚಿಸಿದ್ದಾರೆ. ಅಲ್ಲೂ ಸಾಧ್ಯವಾಗದೇ ಇದ್ದರೆ, ತಮ್ಮ ಕುಟುಂಬದ ಬೇರೆ ಸದಸ್ಯರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ.

‘ನ್ಯಾಯ ದೊರೆಯುವ ವಿಶ್ವಾಸ’
ಏಳು ಮಂದಿಯೂ ಚುನಾವಣೆ ಆಯೋಗದ ವಿರುದ್ದ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಅಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ಈ ಹಿಂದೆ, ಶಾಸಕರು ಅನರ್ಹಗೊಂಡು ಸುಪ್ರೀಂಕೋರ್ಟ್‍ಗೆ ಹೋಗಿ ತಡೆಯಾಜ್ಞೆ ತಂದು ಶಾಸಕರಾಗಿ ಮುಂದುವರಿದಿದ್ದಾರೆ. ಅದೇ ರೀತಿ ನಮಗೂ ಸಹ ನ್ಯಾಯ ಸಿಗಲಿದೆ’ ಎಂದು ಅನರ್ಹ ಸದಸ್ಯ (21ನೇ ವಾರ್ಡ್‌) ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

–––

ಈಗಾಗಾಲೇ ಏಳು ಮಂದಿ ಮತ್ತು ಮುಖಂಡರ ಜೊತೆ ಸಭೆ ನಡೆಸಿದ್ದೇನೆ. ಎಲ್ಲರೂ ಚುನಾವಣಾ ಆಯೋಗ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಿದ್ದರಾಗಿದ್ದಾರೆ.
-ಎನ್‌.ಮಹೇಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.