ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಗರದ ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುತ್ತುರಾಜ್ ಅವರು ತಮ್ಮ ಸ್ವಂತ ಹಣದಿಂದ ಪುಸ್ತಕ ಹಾಗೂ ಸಾಮಗ್ರಿಗಳನ್ನು ಬುಧವಾರ ವಿತರಣೆ ಮಾಡಿದರು.
ಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್, ಕಲರ್ ಪೆನ್ಸಿಲ್, ಸೇರಿದಂತೆ ವಿವಿಧ ಬಗೆಯ ಕಾಪಿ ರೈಟಿಂಗ್ ಹಾಗೂ ಇನ್ನಿತರ ಪುಸ್ತಕಗಳನ್ನು ವಿತರಿಸಿದರು. ಜೂನ್ 1ರಂದು ಶಾಲೆ ಆರಂಭವಾದಾಗ ನಾನು ಈ ಶಾಲೆಗೆ ಭೇಟಿ ನೀಡಿದ್ದೆ, ಆಗ ಅಲ್ಲಿನ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಮಾತನಾಡಿಸುವಾಗ ನಾನೇ ‘ಮಕ್ಕಳೇ ನಿಮಗೆ ಏನು ಬೇಕು’ ಎಂದು ಕೇಳಿದೆ ಆಗ ಮಕ್ಕಳು ಸರ್ ನಮಗೆ ಹೆಚ್ಚುವರಿ ಪುಸ್ತಕಗಳು ಹಾಗೂ ಇನ್ನಿತರ ಸಾಮಗ್ರಿಗಳು ಬೇಕಾಗಿದೆ ಎಂದು ಪ್ರೀತಿಯಿಂದ ಕೇಳಿದರು. ಆ ಕಾರಣದಿಂದ ನಾನು ನನ್ನ ಸ್ವಂತ ಹಣದಿಂದ 90ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಣೆ ಮಾಡಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ಮಕ್ಕಳಿಗೆ ಬೇಕಾದ ಸವಲತ್ತುಗಳನ್ನು ಸಹ ವಿತರಿಸುತ್ತೇನೆ. ಮಕ್ಕಳು ಇದನ್ನು ಸದುಪಯೋಗ ಪಡೆದುಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಣ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು, ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮುಂದೆ ಈ ಮಕ್ಕಳು ದೇಶವನ್ನು ಆಳುವ ಉತ್ತಮ ಪ್ರಜೆ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಪಶು ಆಸ್ಪತ್ರೆಯ ಸಿಬ್ಬಂದಿ ಡಾ. ಜೋಗಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಹೇಮಾಕ್ಷಿ, ಶಿಕ್ಷಕಿ ಸುನಂದ, ಜಯಮ್ಮ, ಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.