ADVERTISEMENT

ರಾಜಕಾಲುವೆ, ಕೆರೆ ಒತ್ತುವರಿ ತೆರವಿಗೆ ಸಚಿವ ವಿ. ಸೋಮಣ್ಣ ತಾಕೀತು

ಮಳೆ, ಪ್ರವಾಹದಿಂದ ಹಾನಿ, ಪರಿಹಾರ ಕಾರ್ಯಗಳ ಬಗ್ಗೆ ಶಾಸಕರು, ಅಧಿಕಾರಿಗಳೊಂದಿಗೆ ಸೋಮಣ್ಣ ಸಭೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 2:41 IST
Last Updated 11 ಸೆಪ್ಟೆಂಬರ್ 2022, 2:41 IST
ಚಾಮರಾಜನಗರ ತಾಲ್ಲೂಕಿನ ದಡದಹಳ್ಳಿಯಲ್ಲಿ ಮನೆಗೋಡೆ ಕುಸಿದು ಮೃತಪಟ್ಟ ಮೂರ್ತಿ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಸ್ತಾಂತರಿಸಿದರು. ಎಸ್‌ಪಿ ಶಿವಕುಮಾರ್‌, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ, ಡಿಸಿ ಚಾರುಲತಾ ಸೋಮಲ್‌, ಶಾಸಕ ಸಿ.ಪುಟ್ಟರಂಗಶೆಟ್ಟಿ ಇತರರು ಇದ್ದರು
ಚಾಮರಾಜನಗರ ತಾಲ್ಲೂಕಿನ ದಡದಹಳ್ಳಿಯಲ್ಲಿ ಮನೆಗೋಡೆ ಕುಸಿದು ಮೃತಪಟ್ಟ ಮೂರ್ತಿ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಸ್ತಾಂತರಿಸಿದರು. ಎಸ್‌ಪಿ ಶಿವಕುಮಾರ್‌, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ, ಡಿಸಿ ಚಾರುಲತಾ ಸೋಮಲ್‌, ಶಾಸಕ ಸಿ.ಪುಟ್ಟರಂಗಶೆಟ್ಟಿ ಇತರರು ಇದ್ದರು   

ಚಾಮರಾಜನಗರ: ಜಿಲ್ಲೆಯಲ್ಲಿರುವ ಎಲ್ಲ ರಾಜಕಾಲುವೆಗಳು, ಕೆರೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವುದು ಸೇರಿದಂತೆ ಕೆರೆಗಳ ಹಾನಿ ಸರಿಪಡಿಸುವ ಕಾಮಗಾರಿಯನ್ನು ತುರ್ತಾಗಿ ಸಮರೋಪಾದಿಯಲ್ಲಿ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಶನಿವಾರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಮಳೆ ಪ್ರವಾಹದಿಂದ ಆಗಿರುವ ಹಾನಿ, ಪರಿಹಾರ ಕ್ರಮಗಳ ಸಂಬಂಧ ಶಾಸಕರ ಸಮ್ಮುಖದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ವರ್ಷಗಳಲ್ಲಿಕಂಡರಿಯದ ಮಳೆಯಿಂದ ಜಿಲ್ಲೆಯಲ್ಲಿ ಮನೆ, ಬೆಳೆಗಳಿಗೆ ಸಾಕಷ್ಟು ಹಾನಿಯಾಗಿವೆ. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೇ ತೊಂದರೆಗಳಾಗಿವೆ. ಹೀಗಾಗಿ ರಾಜಕಾಲುವೆಗಳು ಕೆರೆಗಳ ಒತ್ತುವರಿಯನ್ನು ತೆರವು ಮಾಡಿಸಬೇಕು. ರಾಜಕಾಲುವೆಗಳ ಆಧುನೀಕರಣ ದುರಸ್ತಿ ಹಾಗೂ ಹಾನಿಯಾಗಿರುವ ಕೆರೆಗಳನ್ನು ಸರಿಪಡಿಸುವ ಕಾಮಗಾರಿಯನ್ನು ತಕ್ಷಣದಿಂದಲೇ ಆರಂಭಿಸಬೇಕು’ ಎಂದು ಸೂಚಿಸಿದರು.

ಕಾರ್ಯಪಡೆ ರಚಿಸಿ: ‘ಕೆರೆ, ಕಾಲುವೆಗಳು ಸಂರಕ್ಷಣೆ, ಅಭಿವೃದ್ದಿ, ಒತ್ತುವರಿ ತೆರವು ಸಂಬಂಧ ಕಾರ್ಯನಿರ್ವಹಿಸಲು ಸ್ಥಳೀಯ ಎಲ್ಲ ಶಾಸಕರ ಅಭಿಪ್ರಾಯ, ಸಹಕಾರ ಪಡೆದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿಯಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನೊಳಗೊಂಡ ಕಾರ್ಯ ಪಡೆ ರಚಿಸಬೇಕು. ಈ ಕಾರ್ಯಪಡೆಯು ಕೆರೆ, ಕಾಲುವೆ ಒತ್ತುವರಿ, ಅಭಿವೃದ್ದಿಗೆ ಮೇಲುಸ್ತುವಾರಿ ಮಾಡಬೇಕು’ ಎಂದು ಸೋಮಣ್ಣ ಹೇಳಿದರು.

ADVERTISEMENT

‘ರಾಜಕಾಲುವೆಗಳ ದುರಸ್ತಿ, ಆಧುನೀಕರಣ ಸೇರಿದಂತೆ ನಾಲೆಗಳಲ್ಲಿಯೂ ಸರಾಗವಾಗಿ ನೀರು ಹರಿಯಬೇಕು. ಕೆರೆಗಳಲ್ಲಿ ಬೆಳೆದಿರುವ ಕಳೆ ಇನ್ನಿತರ ತ್ಯಾಜ್ಯ ಗಿಡಗಳನ್ನು ತೆರವುಗೊಳಿಸಬೇಕು. ಈ ಕೆಲಸಗಳಿಗೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು. ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಮಾಡಬಾರದು’ ಎಂದರು.

‘ಪ್ರವಾಹದಿಂದ ಹಾನಿಯಾಗಿರುವ ಸೇತುವೆ, ರಸ್ತೆಗಳನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕಡೆ ಪರಿಶೀಲಿಸಿ ಸಮಗ್ರ ವರದಿ ನೀಡಿ ಬೇಕಿರುವ ಅಂದಾಜು ಪ್ರಸ್ತಾವನೆ ಕೂಡಲೇ ಸಲ್ಲಿಸಬೇಕು. ಬೆಳೆ ಹಾನಿ ಜಂಟಿ ಸಮೀಕ್ಷೆ ಚುರುಕಾಗಿ ನಡೆಯಬೇಕು. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ತಲುಪಿಸಬೇಕು. ಮನೆಗೆ ನೀರು ನುಗ್ಗಿರುವ ಪ್ರಕರಣಗಳಲ್ಲಿ ಬಾಕಿ ಇರುವ ಸಂತ್ರಸ್ತರಿಗೆ ಸೌಲಭ್ಯ ತಲುಪಿಸಲು ದಾಖಲೆಗಳ ಸಬೂಬು ಹೇಳಬಾರದು’ ಎಂದು ಸೂಚಿಸಿದರು.

‘ಶಾಲೆ, ಅಂಗನವಾಡಿಗಳು ಹಾನಿಯಾಗಿರುವ ಕಡೆ ಕೂಡಲೇ ದುರಸ್ತಿಗೆ ಕ್ರಮವಹಿಸಬೇಕು ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿಗೆ ₹7 ಕೋಟಿ ಅನುದಾನ ನೀಡಲಾಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಾಂತರ ಒಳಭಾಗದ ರಸ್ತೆಗಳ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು’

‌ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ನರೇಂದ್ರ, ಎನ್‌.ಮಹೇಶ್‌, ನಿರಂಜನಕುಮಾರ್‌ ಅವರು, ತ‌ಮ್ಮ ಕ್ಷೇತ್ರಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಚಿವರ ಗಮನ ಸೆಳೆದರು.

ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಮಳೆ ಬಂದಾಗ ನಗರದಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.ವಿಧಾನಪರಿಷತ್‌ ಸದಸ್ಯ ಮಂಜೇಗೌಡ ಮಾತನಾಡಿದರು.

ಗೋಡೆ ಕುಸಿದು ಮೃತಪಟ್ಟ ದಡದಹಳ್ಳಿಯ ಮೂರ್ತಿ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ವಿತರಿಸಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್.ಸುಂದರ್‌ರಾಜ್, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಡಾ. ಸಂತೋಷ್ ಕುಮಾರ್ ಇತರೆ ಅಧಿಕಾರಿಗಳು ಇದ್ದರು.

ತಕ್ಷಣಕ್ಕೆ ₹60 ಕೋಟಿ ಬೇಕು

ಸಭೆಯ ಬಳಿಕ ಮಳೆ, ಪ್ರವಾಹದಿಂದಾಗಿ ಆಗಿರುವ ಹಾನಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸೋಮಣ್ಣ, ‘640 ಪ್ರಾಥಮಿಕ ಶಾಲಾ ಕಟ್ಟಡಗಳಿಗೆ, 266 ಅಂಗನವಾಡಿ ಕೇಂದ್ರಗಳಿಗೆ, 24 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದೆ. 126 ಕಿ.ಮೀನಷ್ಟು ಹೆದ್ದಾರಿ, 165 ಕಿ.ಮೀಗಳಷ್ಟು ಜಿಲ್ಲಾ ಮುಖ್ಯ ರಸ್ತೆ ಹಾಗೂ 143.77 ಕಿ.ಮೀ ನಷ್ಟು ಗ್ರಾಮೀಣ ರಸ್ತೆ ಹಾಳಾಗಿದೆ. 38 ಸೇತುವೆ, ಮೋರಿಗಳು ದುರಸ್ತಿಗೀಡಾಗಿವೆ. 347 ವಿದ್ಯುತ್‌ ಕಂಬಗಳು ಮುರಿದಿವೆ. 15 ಕೆರೆಗಳು ಹಾನಿಗೀಡಾಗಿವೆ. ದುರಸ್ತಿ ಕಾರ್ಯಗಳಿಗಾಗಿ ತಕ್ಷಣಕ್ಕೆ ₹50ರಿಂದ ₹60 ಕೋಟಿ ಬೇಕು’ ಎಂದರು.

‘290 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ, 166 ಹೆಕ್ಟೇರ್‌ಗಳಷ್ಟು ಕಬ್ಬು, 3,500 ಎಕರೆ ಹತ್ತಿ, 30 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ ಬೆಳೆನಷ್ಟವಾಗಿದೆ. 1,082 ಹೆಕ್ಟೇರ್‌ಗಳಷ್ಟು ತೋಡಗಾರಿಕಾ ಬೆಳೆಗಳು ಹಾನಿಗೀಡಾಗಿವೆ. ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತರಕಾರಿಗಳು ಸೇರಿದಂತೆ ಹಲವು ಬೆಳೆಗಳು ನಷ್ಟಕ್ಕೆ ತುತ್ತಾಗಿವೆ’ ಎಂದು ಸೋಮಣ್ಣ ಹೇಳಿದರು.

ನಗರದಲ್ಲಿಯೇ ಜಿಲ್ಲಾಸ್ಪತ್ರೆ ಆರಂಭಿಸಲು ಸೂಚನೆ

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಹಿಂದೆ ಇದ್ದಂತೆ ತಕ್ಷಣವೇ ಜಿಲ್ಲಾಸ್ಪತ್ರೆ ಆರಂಭಿಸಬೇಕು ಎಂದು ಸಚಿವ ಸೋಮಣ್ಣ ಅವರು ಸಭೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಜಿಲ್ಲಾ ಆಸ್ಪತ್ರೆಯು ನಗರದ ಕೇಂದ್ರ ಭಾಗದಲ್ಲಿಯೇ ಈ ಹಿಂದೆ ಇದ್ದಂತೆಯೇ ಆರಂಭಿಸುವ ನಿಟ್ಟಿನಲ್ಲಿ ಸೂಕ್ತ ಸಮಾಲೋಚನೆ ನಡೆಸುವಂತೆ ಸೂಚಿಸಿದ್ದೆ. ಈ ಸಂಬಂಧ ಏನು ಕ್ರಮಗಳಾಗಿವೆ’ ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಎಇಎಚ್‌ಒ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು ಪ್ರತಿಕ್ರಿಯಿಸಿ, ‘ಆಸ್ಪತ್ರೆ ಆರಂಭ ಸಂಬಂಧ ಸಭೆ ನಡೆಸಲಾಗಿದೆ. ಸಿಮ್ಸ್‌ ಆಸ್ಪತ್ರೆಯಲ್ಲಿ ನಿಯೋಜನೆ ಗೊಂಡಿರುವ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಮತ್ತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಾಪಸ್‌ ನಿಯೋಜಿಸಿದ್ದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಬಹುದು’ ಎಂದರು.

ಸೋಮಣ್ಣ ಮಾತನಾಡಿ, ‘ಸಿಮ್ಸ್‌ ಬೋದನಾ ಆಸ್ಪತ್ರೆ ನಗರದಿಂದ 7 ಕಿ.ಮೀ ದೂರದಲ್ಲಿದೆ. ತುರ್ತು ಸಂದರ್ಭಗಳಲ್ಲಿ ಜನರಿಗೆ ತೀವ್ರ ಅನನುಕೂಲವಾಗುತ್ತಿದೆ. ಬೋಧನಾ ಆಸ್ಪತ್ರೆಗೆ ಪ್ರತ್ಯೇಕ ವ್ಯವಸ್ಥೆಯಾಗಲಿ. ಈ ಹಿಂದೆ ನಗರದ ಮುಖ್ಯ ಭಾಗದಲ್ಲಿ ಇದ್ದಂತೆಯೇ ಜಿಲ್ಲಾ ಆಸ್ಪತ್ರೆಯನ್ನು ಕೂಡಲೇ ಆರಂಭಿಸಿ. ವೈದ್ಯರು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ’ ಎಂದು ಸೂಚಿಸಿದರು.

ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ಅವರು ಈ ಬಗ್ಗೆ ಮಾಹಿತಿ ನೀಡಲು ಹೊರಟಾಗ ಅವರ ಮಾತು ಕೇಳದ ಸಚಿವರು, ‘ತಕ್ಷಣವೇ ಆಸ್ಪತ್ರೆ ಆರಂಭವಾಗಬೇಕು. ನಿಮ್ಮಿಂದ ಆಗದಿದ್ದರೆ ಆರು ತಿಂಗಳು ರಜೆ ಮೇಲೆ ಹೋಗಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.