ADVERTISEMENT

ಕಳೆಗಟ್ಟಿದ ಬೆಳಕಿನ ಹಬ್ಬ ‌ದೀಪಾವಳಿ: ಮಾರುಕಟ್ಟೆಗೆ ಮಣ್ಣಿನ ದೀಪಗಳ ಲಗ್ಗೆ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:47 IST
Last Updated 20 ಅಕ್ಟೋಬರ್ 2025, 6:47 IST
ಚಾಮರಾಜನಗರದಲ್ಲಿ ದೀಪಾವಳಿ ಹಬ್ಬಕ್ಕೆ ದೀಪಗಳನ್ನು ಖರೀದಿ ಮಾಡುತ್ತಿರುವ ಸಾರ್ವಜನಿಕರು
ಚಾಮರಾಜನಗರದಲ್ಲಿ ದೀಪಾವಳಿ ಹಬ್ಬಕ್ಕೆ ದೀಪಗಳನ್ನು ಖರೀದಿ ಮಾಡುತ್ತಿರುವ ಸಾರ್ವಜನಿಕರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮ ಕಳೆಗಟ್ಟುತ್ತಿದೆ. ಸಾರ್ವಜನಿಕರು ಸಂಭ್ರಮದಿಂದ ಹಬ್ಬ ಆಚರಿಸಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ಬಾರಿ ಸಾಂಪ್ರದಾಯಿಕ ಮಣ್ಣಿನ ದೀಪಗಳ ಖರೀದಿಗೆ ಸಾರ್ವಜನಿಕರು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಭಾನುವಾರ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಖರೀದಿ ಉತ್ಸಾಹ ಜೋರಾಗಿತ್ತು. ನಗರದ ಅಂಗಡಿ ಬೀದಿಗಳಲ್ಲಿ ಅಲ್ಲಲ್ಲಿ ಮಣ್ಣಿನ ದೀಪಗಳ ಮಾರಾಟ ಕಂಡುಬಂತು.

ಕಳೆದ 20 ವರ್ಷಗಳಿಂದ ನಗರದಲ್ಲಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡು ಬಂದಿದ್ದೇನೆ. ಮಾರುಕಟ್ಟೆಯಲ್ಲಿ ಪಿಂಗಾಣಿ ಸಹಿತ ವಿದ್ಯುತ್ ದೀಪಗಳ ಹಾವಳಿ ಹೆಚ್ಚಾಗಿದ್ದರೂ ಮಣ್ಣಿನ ದೀಪಗಳ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ. ಇಂದಿಗೂ ಸಂಪ್ರದಾಯ ಪಾಲಿಸುವ ಬಹಳಷ್ಟು ಮಂದಿ ಮಣ್ಣಿನ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿ ಕುಮಾರ್ ಹೇಳಿದರು.

ADVERTISEMENT

ನೆರೆಯ ತಮಿಳುನಾಡು ಸಾಂಪ್ರದಾಯಿಕ ಶೈಲಿಯ ಮಣ್ಣಿನ ದೀಪಗಳ ತಯಾರಿಕೆಗೆ ಪ್ರಸಿದ್ಧವಾಗಿದ್ದು ಅಲ್ಲಿನ ಸೇಲಂನಿಂದ ಸಗಟಾಗಿ ದೀಪಗಳು ಜಿಲ್ಲೆಗೆ ಬರುತ್ತವೆ, ಮೈಸೂರಿನಿಂದಲೂ ದೀಪಗಳು ನಗರಕ್ಕೆ ಬರುತ್ತವೆ ಎಂದು ಕುಮಾರ್ ತಿಳಿಸಿದರು.   

₹ 10ಕ್ಕೆ ಸಣ್ಣ ಜೋಡಿ ದೀಪಗಳನ್ನು ಮಾರಾಟ ಮಾಡುತ್ತಿದ್ದೇನೆ, ಗಾತ್ರ ಹಾಗೂ ವಿನ್ಯಾಸಗಳ ಆಧಾರದ ಮೇಲೆ ಜೋಡಿಗೆ ₹ 100 ರವರೆಗೂ ದರ ಇದೆ. ಗೂಡು ದೀಪ ಹಾಗೂ ಸಾಲು ದೀಪಗಳು ದುಬಾರಿಯಾದರೂ ಹೆಚ್ಚು ಆಕರ್ಷಣೆಯ ಕಾರಣಕ್ಕೆ ಕೆಲವರು ಖರೀದಿ ಮಾಡುತ್ತಿದ್ದಾರೆ. ಅರ್ಧ ಡಜನ್‌ನಿಂದ ಹತ್ತಾರು ಡಜನ್‌ವರೆಗೂ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹದೇವ್.

ಹಬ್ಬದ ಹಿನ್ನೆಲೆಯಲ್ಲಿ ಹೂಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿದೆ. ಸಣ್ಣ ಮಲ್ಲಿಗೆ, ಮಲ್ಲಿಗೆ ಕೆ.ಜಿಗೆ 600, ಕನಕಾಂಬರ ₹800, ಸೇವಂತಿಗೆ ₹ 50ರಿಂದ 100, ಚೆಂಡು ಹೂ ₹10ರಿಂದ ₹20, ಸುಗಂಧರಾಜ ₹ 80 1000, ಗುಲಾಬಿ ₹240 ರಿಮದ 300ರವರೆಗೂ ದರ ಇದೆ. ಮೂರು ದಿನ ಹಬ್ಬ ಆಚರಿಸುವುದರಿಂದ ದರ ಸ್ಥಿರವಾಗಿರಲಿದೆ ಎಂದು ಹೂವಿನ ವ್ಯಾಪಾರಿ ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.