ADVERTISEMENT

ಚಾಮರಾಜನಗರ: ಚಿಕಿತ್ಸೆ ಕರ್ತವ್ಯ, ಕುಟುಂಬದಿಂದ ದೂರ ಅನಿವಾರ್ಯ

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮಾತುಗಳು

ಸೂರ್ಯನಾರಾಯಣ ವಿ
Published 1 ಜುಲೈ 2020, 3:59 IST
Last Updated 1 ಜುಲೈ 2020, 3:59 IST
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)   
""

ಚಾಮರಾಜನಗರ: ‘ಕೋವಿಡ್‌–19 ಬಗ್ಗೆ ಭಯ ಪಡುವಂತಹದ್ದೇನಿಲ್ಲ. ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ, ಅದರಿಂದ ವಿಮುಖರಾಗುವ ಪ್ರಶ್ನೆಯೇ ಬರುವುದಿಲ್ಲ’.ನಗರದ ಕೋವಿಡ್‌–19 ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮಾತಿದು.

ಪ್ರೊಫೆಸರ್‌ ಡಾ.ಬಿ.ರಮೇಶ್

ರಾಜ್ಯದಲ್ಲಿ ಕೋವಿಡ್‌–19 ಹಾವಳಿ ಆರಂಭವಾದ ನಂತರ 100 ದಿನಗಳವರೆಗೆ ಸೋಂಕು ಮುಕ್ತವಾಗಿದ್ದ ಗಡಿ ಜಿಲ್ಲೆಯಲ್ಲಿಜೂನ್‌ ತಿಂಗಳ ಮೊದಲ ವಾರದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಸದ್ಯ 32 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯಕೀಯ ಕಾಲೇಜಿನ ಬೋಧಕರೂ ಆಗಿರುವ, ಆಸ್ಪತ್ರೆಯ ವೈದ್ಯರು ಮೂರು ವಾರಗಳಿಂದ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ರೋಗಿಗಳ ಚಿಕಿತ್ಸೆಗಾಗಿ ವೈದ್ಯರ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡಕ್ಕೂ ಒಂದು ವಾರದ ಪಾಳಿ ವ್ಯವಸ್ಥೆ ಮಾಡಿದೆ. ವಾರಕ್ಕೊಮ್ಮೆ ಈ ತಂಡ ಬದಲಾಗುತ್ತಿರುತ್ತದೆ. ಚಿಕಿತ್ಸೆಯ ಜವಾಬ್ದಾರಿಯನ್ನು ಜನರಲ್‌ ಮೆಡಿಸಿನ್‌ ವಿಭಾಗ ಹೊತ್ತುಕೊಂಡಿದೆ. ಕಳೆದ ವಾರ ನಾಲ್ವರು ವೈದ್ಯರ ತಂಡ ರೋಗಿಗಳಿಗೆ ಚಿಕಿತ್ಸೆ ನೀಡಿದೆ.

ADVERTISEMENT

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಸೈನಿಕರಾಗಿರುವ ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕುಟುಂಬದಿಂದ ದೂರ ಉಳಿಯುತ್ತಾರೆ. ಮನೆಗೆ ತೆರಳದೆ ಆಸ್ಪತ್ರೆಯಲ್ಲೇ ಉಳಿಯುತ್ತಾರೆ. ಫೋನ್‌, ವಿಡಿಯೊ ಕರೆ‌ಗಳ ಮೂಲಕ ಪತ್ನಿ, ಮಕ್ಕಳು, ತಂದೆ ತಾಯಿ ಅವರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ವಾರ ಕಳೆದ ನಂತರವಷ್ಟೇ ಎಲ್ಲರನ್ನೂ ನೇರವಾಗಿ ಕಾಣುತ್ತಾರೆ. ಪಾಳಿ ಮುಗಿದ ತಕ್ಷಣ ಕೋವಿಡ್‌ ಪರೀಕ್ಷೆಗೂ ಒಳಗಾಗುತ್ತಿದ್ದಾರೆ.

ಮಾನಸಿಕವಾಗಿ ಸಿದ್ಧರಾಗಿದ್ದೆವು:‘ಕೋವಿಡ್‌–19 ಇಡೀ ಜಗತ್ತನ್ನು ಕಾಡುತ್ತಿದೆ. ನಮ್ಮಲ್ಲಿಗೂ ಕಾಲಿಟ್ಟಿದೆ. ವೈದ್ಯರಾಗಿದ್ದುಕೊಂಡು ನಾವು ಚಿಕಿತ್ಸೆ ನೀಡಲೇಬೇಕು.ಎಲ್ಲ ಸುರಕ್ಷತಾ ಪರಿಕರಗಳನ್ನು ಧರಿಸಿಯೇ ಚಿಕಿತ್ಸೆ ನೀಡುತ್ತೇವೆ. ಕರ್ತವ್ಯದಲ್ಲಿ ಇರುವ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವುದಕ್ಕೆ ಆಗುವುದಿಲ್ಲ. ಈ ಸಂದರ್ಭದಲ್ಲಿ ಅದು ಅನಿವಾರ್ಯ’ ಎಂದು ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್‌ ಡಾ.ಬಿ.ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಜಿಲ್ಲೆಯಲ್ಲಿ ತಡವಾಗಿ ಪ್ರಕರಣಗಳು ವರದಿಯಾಗಿದ್ದರಿಂದ ಸಿದ್ಧತೆಗೆ ಸಾಕಷ್ಟು ಸಮಯವಿತ್ತು. ಮಾನಸಿಕವಾಗಿ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿದ್ದವು’ ಎಂದು ಅವರು ಹೇಳಿದರು.

ಕುಟುಂಬದಿಂದ ದೂರ: ‘ಪಾಳಿ ವ್ಯವಸ್ಥೆ ಮಾಡಿರುವುದರಿಂದ ಒಂದು ವಾರ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನನ್ನ ಕುಟುಂಬ ಮೈಸೂರಿನಲ್ಲಿ ಇದೆ. ಆಸ್ಪತ್ರೆಯಲ್ಲಿ ಇರುವ ಸಂದರ್ಭದಲ್ಲಿ ಮನೆಗೆ ಭೇಟಿ ಕೊಡುವುದಿಲ್ಲ. ಇಲ್ಲೆ ಇರುತ್ತೇನೆ‘ ಎಂದು ಮೆಡಿಸಿನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ, ವೈದ್ಯ ಡಾ.ಶರತ್‌ಕುಮಾರ್‌ ವಿ.ಜೈಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌–19 ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನಾವು ಬೇರೆ ಯಾರಿಗೂ ಚಿಕಿತ್ಸೆ ನೀಡುವುದಿಲ್ಲ. ಸುರಕ್ಷತಾ ಸಾಧನಗಳನ್ನು ಧರಿಸುವುದರಿಂದ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಕೋವಿಡ್‌ನಂತಹ ಪರಿಸ್ಥಿತಿಯಲ್ಲಿ ವೈದ್ಯರಾಗಿ ನಮ್ಮ ಕರ್ತವ್ಯವನ್ನು ಮಾಡಲೇಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಚಿಕಿತ್ಸಾ ತಂಡದ ಭಾಗವಾಗಿರುವ ಅರಿವಳಿಕೆ ತಜ್ಞ ಡಾ.ಸಂತೋಷ್‌ ಕುಮಾರ್‌ ಬೆನ್ನೂರು ಅವರು ಮೂಲತಃ ನಂಜನಗೂಡಿನವರು. ವಾರದಿಂದೀಚೆಗೆ ಮನೆಗೆ ಅವರು ಹೋಗಿಲ್ಲ. ಮತ್ತೊಬ್ಬ ಅರಿವಳಿಕೆ ತಜ್ಞೆಯಾಗಿರುವ ಡಾ.ಲೋಕೇಶ್ವರಿ ಅವರು ಕೂಡ ವೈದ್ಯರ ತಂಡದಲ್ಲಿದ್ದಾರೆ.

ಮಾನಸಿಕವಾಗಿ ಸಜ್ಜು

‘ಕೊರೊನಾ ವೈರಸ್‌ ಹೊಸ ವೈರಸ್‌ ಆಗಿರುವುದರಿಂದ ಆರಂಭದಲ್ಲಿ ಸಹಜವಾಗಿ ಸ್ವಲ್ಪ ಭಯ ಇತ್ತು. ಆದರೆ, ದಿನ ಕಳೆದಂತೆ ಸಾಕಷ್ಟು ಮಾಹಿತಿ ಲಭ್ಯವಾಯಿತು. ನಮ್ಮ ಜಿಲ್ಲೆಯಲ್ಲಿ ಆರಂಭದಲ್ಲಿ ಸೋಂಕು ಪತ್ತೆಯಾಗದೇ ಇದ್ದುದರಿಂದ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಕ್ಕಿತ್ತು. ಚಿಕಿತ್ಸೆ ನೀಡುವುದಕ್ಕೆ ಮಾನಸಿಕವಾಗಿ ಸಿದ್ಧನಾಗಿದ್ದೆ’ ಎಂದು ಸಹಾಯಕ ಪ್ರಾಧ್ಯಾಪಕ ಹಾಗೂ ವೈದ್ಯ ಡಾ.ಅಭಿಷೇಕ್‌ ಕೆ.ಬಿ. ಅವರು ‘ಪ್ರಜಾವಾಣಿ’ ಮುಂದೆ ಮನದಾಳವನ್ನು ಬಿಚ್ಚಿಟ್ಟರು.

ಜಿಲ್ಲೆಯ ಮೊದಲ ಪ್ರಕರಣ, ಕೋವಿಡ್‌–19ಗೆ ತುತ್ತಾಗಿದ್ದಮುಂಬೈನ ವೈದ್ಯಕೀಯ ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದವರಲ್ಲಿ ಅಭಿಷೇಕ್‌ ಪ್ರಮುಖರು. ವಿದ್ಯಾರ್ಥಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಇನ್ನೂ ಇದ್ದಾರೆ ಸೇನಾನಿಗಳು...

‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ವೈದ್ಯರು ಮಾತ್ರ ಸೇನಾನಿಗಳಲ್ಲ.ನಾವು ರೋಗಿಗಳ ಬಳಿಗೆ ಹೋಗಿ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಯಾವ ರೀತಿ ಚಿಕಿತ್ಸೆ ನೀಡಬೇಕು, ಯಾವ ಔಷಧಗಳನ್ನು ಕೊಡಬೇಕು ಎಂದು ಹೇಳುತ್ತೇವೆ. ರೋಗಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುವವರು ನರ್ಸ್‌ಗಳು. ಚಿಕಿತ್ಸೆಯಲ್ಲಿ ಅವರ ಪಾತ್ರ ಮಹತ್ವದ್ದು. ಇವರ ಜೊತೆಗೆ ಆಂಬುಲೆನ್ಸ್‌ ಚಾಲಕರು, ಆಸ್ಪ‍ತ್ರೆಯ ಇತರೆ ಸಿಬ್ಬಂದಿ.. ಹೀಗೆ ಎಲ್ಲರೂ ಕೊರೊನಾ ಸೈನಿಕರೇ ಆಗಿದ್ದಾರೆ. ಎಲ್ಲರ ಶ್ರಮದಿಂದ ಕೋವಿಡ್‌ ವಿರುದ್ಧದ ಹೋರಾಟ ಸಾಗಿದೆ’ ಎಂದು ಡಾ.ಶರತ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.