ADVERTISEMENT

ಗುಂಡ್ಲುಪೇಟೆ | ಮಳೆ ಕೊರತೆ: ವರ್ಷದ ಹಿಂದೆ ತುಂಬಿದ್ದ ಕೆರೆಗಳೆಲ್ಲ ಭಣ ಭಣ

ಮಲ್ಲೇಶ ಎಂ.
Published 29 ಜನವರಿ 2024, 6:34 IST
Last Updated 29 ಜನವರಿ 2024, 6:34 IST
ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿ ಕೆರೆ ನೀರಿಲ್ಲದೆ ಭಣಗುಡುತ್ತಿದೆ
ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನಹಳ್ಳಿ ಕೆರೆ ನೀರಿಲ್ಲದೆ ಭಣಗುಡುತ್ತಿದೆ   

ಗುಂಡ್ಲುಪೇಟೆ: 2022ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಹೆಚ್ಚು ಮಳೆಯಾಗಿದ್ದ ಕಾರಣಕ್ಕೆ ಕಳೆದ ವರ್ಷದ ಬೇಸಿಗೆಯಲ್ಲೂ ನೀರಿನಿಂದ ನಳನಳಿಸುತ್ತಿದ್ದ ಕೆರೆಗಳು ಈ ಬಾರಿ ಬೇಸಿಗೆ ಆರಂಭವಾಗುವ ಸಮಯಕ್ಕೆ ಬರಿದಾಗಿವೆ. 

2022ರಲ್ಲಿ ನವೆಂಬರ್‌ ಕೊನೆಯವೆಗೂ ಮಳೆಯಾಗಿ, ತಾಲ್ಲೂಕು ವ್ಯಾಪ್ತಿಯ ದೊಡ್ಡ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದವು. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಮಳೆ ಕೊರತೆಯಾಗಿರುವುದರಿಂದ ಕೆರೆಗಳು ಭರ್ತಿಯಾಗಿರಲಿಲ್ಲ. 

ಹೊಸ ವರ್ಷದ ಮೊದಲ ತಿಂಗಳಿನಲ್ಲಿಯೇ ಜಲಮೂಲಗಳು ಬರಿದಾಗಿರುವುದರಿಂದ ಈ ಬಾರಿ ಜಾನುವಾರುಗಳಿಗೆ ನೀರಿನ ಕೊರತೆಯಾಗುವ ಸಾಧ್ಯತೆ ಗೋಚರಿಸುತ್ತಿದೆ. 

ADVERTISEMENT

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರೈತರ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕಳೆದ ವರ್ಷ ಕೆರೆಗಳಲ್ಲಿ ನೀರು ಇದ್ದುದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ನಿಷ್ಕ್ರಿಯವಾಗಿದ್ದ ಕೊಳವೆ ಬಾವಿಗಳಲ್ಲೂ ನೀರು ಬಂದಿತ್ತು. ನೀರಿನ ಕೊರತೆ ಕಾರಣಕ್ಕೆ ವ್ಯವಸಾಯ ನಿಲ್ಲಿಸಿದ್ದ ಅನೇಕ ರೈತರು ಕೃಷಿ ಮಾಡಲು ಆರಂಭಿಸಿದ್ದರು.

ಈ ವರ್ಷ ಮಳೆ ಕೊರತೆಯಿಂದ ಅನೇಕ ಬೆಳೆಗಳಲ್ಲಿ ಇಳುವರಿ ಕುಂಠಿತವಾಗಿದೆ. ಮಳೆ ನಂಬಿ ವ್ಯವಸಾಯ ಮಾಡಿದ್ದವರಿಗೆ ಸಾಲ ಹೆಗಲೇರಿದೆ. ಜೂನ್ ತಿಂಗಳಲ್ಲಿ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಮಳೆ ನಂಬಿ ಅನೇಕರು ತರಕಾರಿ ಬೆಳೆಯಲು ನಿರ್ಧಾರ ಮಾಡಿ ಆಲೂಗಡ್ಡೆ, ಬೀಟ್‌ರೂಟ್‌ ಬಿತ್ತನೆ ಮಾಡಿದ್ದರು. ಮಳೆ ಕೈ ಕೊಟ್ಟಿದ್ದರಿಂದಾಗಿ ಅನೇಕರಿಗೆ ಬೆಳೆ ಕೈ ಸೇರಿರಲಿಲ್ಲ.

‘ತಾಲ್ಲೂಕಿನಲ್ಲಿ ವಾರ್ಷಿಕವಾಗಿ 79.2 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. 2022ರಲ್ಲಿ 100.51 ಸೆಂ.ಮೀ ಮಳೆಯಾಗಿದೆ. 2023ರಲ್ಲಿ ಕೇವಲ 57.49 ಸೆಂ.ಮೀ ಮಳೆ ಬಿದ್ದಿದೆ. ಕಳೆದ ವರ್ಷ ಮೇ ತಿಂಗಳು ಬಿಟ್ಟು ಉಳಿದ ತಿಂಗಳಲ್ಲಿ ವಾಡಿಕೆಯ ಅರ್ಧದಷ್ಟೂ ಮಳೆಯಾಗಲಿಲ್ಲ’ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ವರ್ಷದ ವಾಡಿಕೆ ಮಳೆ 79.2 ಸೆಂ.ಮೀ ಕಳೆದ ವರ್ಷ ಬಿದ್ದ ಮಳೆ 57.49 ಕೃಷಿಗೆ ಕೊಳವೆಬಾವಿಗಳೇ ಆಧಾರ
‘ಶುಂಠಿ ಬೆಳೆ ನಿರ್ಬಂಧಿಸಿ’
ನೀರಿನ ಕೊರತೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯಲು ಜಿಲ್ಲಾಡಳಿತ ನಿರ್ಬಂಧ ವಿಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.  ‘ಬರದಿಂದಾಗಿ ಈ ವರ್ಷ ಎಲ್ಲ ಬೆಳೆಗಳ ಇಳುವರಿ ಕುಂಠಿತವಾಗಿದೆ. ಬೆಜ್ಜಲು ಭೂಮಿಯಲ್ಲಿ ಮಳೆ ನಂಬಿ ಬೇಸಾಯ ಮಾಡುವವರು ಹಾಕಿದ ಬಂಡವಾಳವೂ ಕೈ ಸೇರಿಲ್ಲ. ಆದರೆ ಹೊರ ರಾಜ್ಯದವರು ಶುಂಠಿ ಬೆಳೆಯುವುದಕ್ಕಾಗಿ ಜಮೀನುಗಳಲ್ಲಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಕೊಳವೆ ಬಾವಿಗಳನ್ನು ಹೆಚ್ಚು ಕೊರೆಯುವುದರಿಂದ ನೀರಿನ ಅಭಾವ ಹೆಚ್ಚಾಗಲಿದೆ. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ವು ನೀರು ಬಳಕೆಯಾಗುವ ಬೆಳೆಗಳನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಯವರು ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.