
ಗುಂಡ್ಲುಪೇಟೆ: ‘ರಾಜ್ಯದಲ್ಲಿ ಇದು ಕೊನೆಯ ಕಾಂಗ್ರೆಸ್ ಆಡಳಿತ ಎಂಬ ಕಾರಣಕ್ಕೆ ಅಧಿಕಾರಕ್ಕೆ ಹೊಡೆದಾಟ ನಡೆಯುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ತಾಲ್ಲೂಕಿನ ದೊಡ್ಡತುಪ್ಪೂರು ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳಿಂದ ನಡೆಸಿದ ಭ್ರಷ್ಟಾಚಾರ ಮತ್ತು ದುರಾಡಳಿತದಂತೆ ಹಿಂದೆ ನಾನೆಂದೂ ಕಂಡಿಲ್ಲ. ದೇಶ ಸ್ವತಂತ್ರಗೊಂಡ ನಂತರ ಮೊದಲ ಭ್ರಷ್ಟ ಸರಕಾರ ಇದು. ಮುಖ್ಯಮಂತ್ರಿಯವರು ದೇವರಾಜ ಅರಸು ಅವರ ದಾಖಲೆ ಮುರಿದಿರುವುದು ಕೆಟ್ಟ ವಿಷಯದಲ್ಲಿ’ಎಂದು ಆರೋಪಿಸಿದರು.
‘ಆಗಾಗ ಹಗಲು ಗನಸು ಬೀಳುವ ಕಾರಣಕ್ಕೆ ಸಿದ್ದರಾಮಯ್ಯನವರು 2028ಕ್ಕೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳುತ್ತಾರೆ. ರಾಜ್ಯಪಾಲ ಥಾವರ್‌ಚಂದ ಗೆಹಲೋತ್ ಕೇಂದ್ರಮಂತ್ರಿ, ರಾಜ್ಯ ಸಭೆಯಲ್ಲಿ ಪಕ್ಷದ ನೇತಾರರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಂತಲೂ ಹೆಚ್ಚಿನ ರಾಜಕೀಯ ಅನುಭವಹೊಂದಿದ್ದು ಪಾಠ ಬೇಕಿಲ್ಲ. ಅವರು ರಾಷ್ಟ್ರಗೀತೆಗೆ ಅಗೌರವ ತೋರಿಲ್ಲ’ ಎಂದರು.
ಒಕ್ಕಲಿಗರು ಬೆಂಬಲಿಸುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ಬಗ್ಗೆ ಆ ಪಕ್ಷದವರನ್ನು ಕೇಳಬೇಕು. ಬಹುಮತ ಇದ್ದವರು ಸಿಎಂ ಆಗುತ್ತಾರೆ’ ಎಂದರು.
‘ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ವಿಷಯದಲ್ಲಿ ಕುಮ್ಮಕ್ಕು ಇರುವ ಕಾರಣಕ್ಕೆ ಗಲಾಟೆ ಆಗಿದೆ. ಜನರು ಅವರನ್ನು ಬೀದಿಯಲ್ಲಿ ಹಿಡಿದು ಹೊಡೆದಾಗ ಸರಿ ಹೋಗುತ್ತಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವ ಎನ್.ಮಹೇಶ್, ಶಾಸಕ ಸಿ.ಎಸ್.ನಿರಂಜನಕುಮಾರ್ ಜತೆಗಿದ್ದರು.