ಗುಂಡ್ಲುಪೇಟೆ: ಬಡವರು ಉತ್ತಮ ಸ್ಥಾನಕ್ಕೆ ಬರಬೇಕಾದರೆ ಶಿಕ್ಷಣ ದಿಂದ ಮಾತ್ರ ಸಾಧ್ಯ. ಸಂವಿಧಾನ ಮತ್ತು ಶಿಕ್ಷಣ ಸಮಾಜವನ್ನು ಬದಲಾಯಿಸುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ಬೆಂಡರವಾಡಿಯಲ್ಲಿ ಭಾನುವಾರ ನಡೆದ ಡಾ.ಜಿ.ಪರಮೇಶ್ವರ-75 ನೆನಪಿನ ಅಮೃತ ಮಹೋತ್ಸವ ಉದ್ಘಾಟನೆ, ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಪ್ರತಿಮೆ ಅನಾವರಣ, ಮಹಿಳಾ ಗೃಹ ಕೈಗಾರಿಕಾ ಘಟಕ ನೂತನ ಕಟ್ಟಡ ಉದ್ಘಾಟನೆ, ಡಾ.ಜಿ.ಪರಮೇಶ್ವರ್ ಸಾಲುಮರದ ರಸ್ತೆ ನಾಮಕರಣ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಮತ್ತು ಶಿಕ್ಷಣ ನೊಂದ ಮತ್ತು ಶೋಷಿತರ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಇದಕ್ಕಾಗಿ ದೇವರೇ ಅಂಬೇಡ್ಕರ್ ಅವರನ್ನು ಭೂಮಿಗೆ ಕಳುಹಿಸಿದ್ದಾನೆ ಎಂದೆನೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯವನಾಗಿದ್ದು, ನನ್ನ ತಂದೆ ಗಂಗಾಧರಯ್ಯ ವಿನೋಬಾ ಭಾವೆ, ಅಂಬೇಡ್ಕರ್ ಇತರೆ ಮಹನೀಯರ ಪ್ರಭಾವಕ್ಕೆ ಒಳಗಾಗಿ ಸಾಧನೆ ಮಾಡಿದರು. ನನ್ನ ಮುತ್ತಾತ ಗಂಗಮರಿಯಪ್ಪ ಮೈಸೂರು ಸಂಸ್ಥಾನದಲ್ಲಿ ಹವಾಲ್ದಾರ್ ಆಗಿದ್ದರು. ಜನರಿಗಾಗಿ ನಾವು ಎಂದು ಹೇಳಿದ ಮೊದಲ ಸಂಸ್ಥಾನ ಮೈಸೂರು, ಬಡವರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಕೊಡುವ ಮೊದಲೇ ಮೈಸೂರು ಸಂಸ್ಥಾನ ಸಮಾನತೆ ಕೊಟ್ಟಿದೆ. ಹೀಗಾಗಿ ಸೂರ್ಯ ಚಂದ್ರ ಇರುವವರೆಗೂ ಸ್ಮರಿಸಬೇಕು ಎಂದು ತಿಳಿಸಿದರು.
ಮೈಸೂರು ಸಂಸ್ಥಾನದ ಬಗ್ಗೆ ಮತನಾಡಲು ಚಿಕ್ಕವನು. ಯದುವೀರ್ ಅವರನ್ನು ನಾನು ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ ನೋಡುತ್ತೇನೆ. ಬೆಂಡರವಾಡಿಯಲ್ಲಿ ನಡೆದ ಕಾರ್ಯಕ್ರಮ ನನ್ನ ಹೃದಯ ಮತ್ತು ಮನಸ್ಸಿಗೆ ತಟ್ಟಿದೆ. ಮಹಿಳಾ ಕೈಗಾರಿಕೆ ಮತ್ತು ಗ್ರಂಥಾಲಯಕ್ಕೆ ₹10 ಲಕ್ಷ ಕೊಡುಗೆ ನೀಡುತ್ತೇನೆ. ಶಿಕ್ಷಣ ಭೀಷ್ಮ ಎಂದು ನನ್ನ ತಂದೆ ಬಗ್ಗೆ, ಸವ್ಯಸಾಚಿ ಪರಮೇಶ್ವರ ಎಂದು ನನ್ನ ಬಗ್ಗೆ ಪುಸ್ತಕ ಬರೆಯುವ ಮೂಲಕ ಸಮಾಜಕ್ಕೆ ನಮ್ಮ ಬಗ್ಗೆ ತಿಳಿಸಿಕೊಟ್ಟ ಮಹದೇವ ಭರಣಿ ನನ್ನ ಕಿರಿಯ ಸಹೋದರ ಎಂದರು.
ನಿವೃತ್ತ ಐಎಫ್‍ಎಸ್ ಅಧಿಕಾರಿ ರಾಜು, ಸಾವಿರ ಹೊಂಗೆ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪರಿಸರ ತಜ್ಞ ಮತ್ತು ವನ್ಯಜೀವ ತಜ್ಞರಾದ ಕೃಪಾಕರ, ಸೇನಾನಿ ಮತ್ತು ಸಂಜಯ್, ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಇನ್ನೂ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತಿ ನಾಗೇಶ್ ಸೋಸಲೆ ಅವರ ಸಾಹಿತ್ಯ ಮತ್ತು ನಿರ್ಮಾಣದ ಡಾ.ಜಿ.ಪರಮೇಶ್ವರ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಹನೂರು ಜೇತವನದ ಮನೋರಖ್ಖಿತ ಭಂತೇಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಗುಲ್ಬರ್ಗ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಎಚ್.ಟಿ.ಪೋತೆ, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಭಾಗ್ಯವಾನ್, ಸಿದ್ದಾರ್ಥ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಜಿ.ಗುರುಶಂಕರ್, ಜಾರಿ ನಿರ್ದೇಶನಾಲಯ ನಿರ್ದೇಶಕ ಆನಂದ್‍ಕುಮಾರ್, ಎಸ್ಪಿ ಡಾ.ಬಿ.ಟಿ.ಕವಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಡಾ.ಲಕ್ಷ್ಮಮ್ಮ, ಜನಪದ ಕಲಾವಿದ ಮಳವಳಿ ಮಹದೇವಸ್ವಾಮಿ, ಸೇರಿದಂತೆ ಹಲವು ಮಂದಿ ಹಾಜರಿದ್ದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಬಂಡೀಪುರ ಮತ್ತು ಗುಂಡ್ಲುಪೇಟೆ ಹಸಿರಿಗೆ ಹೆಸರಾಗಿದೆ. ತೆರಕಣಾಂಬಿ ಹಂಗಳ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಮೈಸೂರು ರಾಜಮನೆತನಕ್ಕೂ ಅವಿನಭಾವ ಸಂಬಂಧವಿದೆ. ಹೀಗಾಗಿ ಕರೆಯದಿದ್ದರೂ ನಾನು ಇಲ್ಲಿಗೆ ಬಂದು ಹೋಗುತ್ತೇನೆ. ಆಧುನಿಕ ಜೀವನದ ಜತೆಜತೆಗೆ ವನ್ಯ ಜೀವಿಗಳ ಸಂರಕ್ಷಣೆ ಆಗಬೇಕು ಇದಕ್ಕಾಗಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ವಿಷಯವನ್ನು ಎರಡು ಸಂಸತ್ ನಲ್ಲಿ ಪ್ರಸ್ತಾಪಿಸಿದ್ದು ಕೇಂದ್ರ ಸಚಿವ ಭೂಪೇಂದ್ರಯಾದವ್ ನಮ್ಮ ಪರ ನಿಲ್ಲುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.