ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿರುವ 35 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಮುನ್ನಡೆಯುವಂತೆ ಮಾಡುವ ಕೆಲಸ ನನ್ನ ಹೆಗಲ ಮೇಲಿದೆ ಎಂದು ಹೇಳಿದರು.
ಸಹಕಾರ ಕೇಂದ್ರ ಬ್ಯಾಂಕ್ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿವೆ. ಮುಚ್ಚುವ ಹಂತದಲ್ಲಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಸಹಕಾರ ಕ್ಷೇತ್ರದಲ್ಲಿ ಎಚ್.ಎಸ್.ಮಹದೇವಪ್ರಸಾದ್ ಅವರು ತಂದ ಸುಧಾರಣಾ ಕ್ರಮಗಳಿಂದ ಪುನಶ್ಚೇತನಗೊಂಡ ಬಗ್ಗೆ ಉತ್ತರ ಕರ್ನಾಟಕ ಭಾಗದ ಶಾಸಕರು ಹೇಳುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರ ಕ್ಷೇತ್ರ ಅತ್ಯಂತ ಬಲಿಷ್ಟವಾಗಿದೆ. ಆದ್ದರಿಂದ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದು ತಿಳಿಸಿದರು.
‘ಸಾವಿರ ಕೋಟಿ ಮೀರಿದ ಹಣಕಾಸಿನ ವಹಿವಾಟು ನಡೆದರೆ ಜಿಲ್ಲೆಗೆ ಪ್ರತ್ಯೇಕ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ತಾಲ್ಲೂಕಿನಲ್ಲಿ ಒಂದೊಂದು ಸಂಘವು ಒಂದೊಂದು ವಿಧದಲ್ಲಿ ಬೆಳವಣಿಗೆ ಕಾಣುತ್ತಿವೆ. ಆದ್ದರಿಂದ ಸಹಕಾರ ಸಂಘಗಳಿಗೆ ಸೂಕ್ತ ಕಟ್ಟಡ ಮತ್ತು ಮೂಲಸೌಲಭ್ಯ ಇಲ್ಲದಿರುವುದು ತಿಳಿದಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ನೆರವು ಕೇಳಲಾಗಿದೆ. ವಿಶೇಷ ಅನುದಾನ ತಂದು ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ರೈತರಿಗೆ ಅನುಕೂಲ ಕೆಲಸ ಮಾಡಲಾಗುವುದು. ಒಬ್ಬರಿಗೊಬ್ಬರು ಕೈಜೋಡಿಸಿ ಮುನ್ನಡೆಯುವುದೇ ಸಹಕಾರ ತತ್ವವಾಗಿದೆ. ಅದರಂತೆ ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಆರ್.ಜಯರಾಂ, ಉಪಾಧ್ಯಕ್ಷ ನಾಗರಾಜೇಗೌಡ, ನಿರ್ದೇಶಕರಾದ ಎಂ.ನಿರಂಜನಮೂರ್ತಿ, ಶಿವರಾಮ, ಎಂ.ಮಲ್ಲೇಶ್, ಕೆ.ಸತೀಶ್, ಎಸ್.ಗಂಗಾಧರ, ಲೋಕೇಶ್, ಎಸ್.ಸುರೇಶ್, ತಾಯಮ್ಮ, ಚಿಕ್ಕತಾಯಮ್ಮ, ಗೋವಿಂದ, ಬ್ಯಾಂಕ್ ಪ್ರತಿನಿಧಿ ಕಾರ್ತಿಕ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ರಾಮಣ್ಣ, ನೌಕರರಾದ ಗುರುಸಿದ್ದನಾಯಕ, ಎಸ್.ಮಹೇಶ್, ಕೆ.ಸಾಗರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.