ADVERTISEMENT

ಕಾಡಂಚಿನಲ್ಲಿರುವ ರಾಜ್ಯದ ಕೊನೇ ಗ್ರಾಮ ಎಲಚೆಟ್ಟಿಯಲ್ಲಿ ಕಾಡಾನೆ ಹಾವಳಿ: ಬೇಸತ್ತ ಜನ

ನಾಲ್ಕೈದು ತಿಂಗಳಿಂದ ಕಾಟ, ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ, ಸೆರೆ ಹಿಡಿಯಲು ಆಗ್ರಹ

ಮಲ್ಲೇಶ ಎಂ.
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST
ಶನಿವಾರ ರಾತ್ರಿ ಎಲಚೆಟ್ಟಿ ಗ್ರಾಮದ ಮಾಯಪ್ಪ (ಚಿಕ್ಕಮಾದಪ್ಪ) ಅವರ ಮನೆ ಗೇಟನ್ನು ಆನೆ  ಮುರಿದಿರುವುದು
ಶನಿವಾರ ರಾತ್ರಿ ಎಲಚೆಟ್ಟಿ ಗ್ರಾಮದ ಮಾಯಪ್ಪ (ಚಿಕ್ಕಮಾದಪ್ಪ) ಅವರ ಮನೆ ಗೇಟನ್ನು ಆನೆ  ಮುರಿದಿರುವುದು   

ಗುಂಡ್ಲುಪೇಟೆ: ಕಾಡಂಚಿನಲ್ಲಿರುವ ರಾಜ್ಯದ ಕೊನೆಯ ಗ್ರಾಮ, ತಾಲ್ಲೂಕಿನ ಎಲಚೆಟ್ಟಿಯ ಜನರು ಕಾಡಾನೆಯೊಂದರ ಪುಂಡಾಟದಿಂದ ಬೇಸತ್ತಿದ್ದಾರೆ. ಆನೆಯನ್ನು ಸೆರೆ ಹಿಡಿದು ಬೇರೆಡೆಗೆ ಬಿಡುವಂತೆ ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ.

ಆನೆಯು ಪ್ರತಿ ದಿನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿ ಬೆಳೆ ಸೇರಿದಂತೆ ಮನೆಗಳ ಮೇಲೆ ದಾಳಿ ಮಾಡಿ ಹಾನಿ ಮಾಡುತ್ತಿದೆ.

ಶನಿವಾರ ಗ್ರಾಮದ ಮಾಯಪ್ಪ (ಚಿಕ್ಕಮಾದಪ್ಪ) ಅವರ ಮನೆಯ ಕಬ್ಬಿಣದ ಗೇಟನ್ನು ಮುರಿದು ಹಾಕಿದೆ. ಈ ಹಿಂದೆ ಪಳನಿ ಎಂಬುವವರ ಮನೆಗೆ ಹಾನಿ ಮಾಡಿತ್ತು. ಅದೃಷ್ಟವಶಾತ್‌ ಇದುವರೆಗೆ ಆನೆಯಿಂದಾಗಿ ಪ್ರಾಣಹಾನಿ ಸಂಭವಿಸಿಲ್ಲ.

ADVERTISEMENT

ಆನೆಯ ಪುಂಡಾಟದಿಂದ ಭಯಗೊಂಡಿರುವ ಸ್ಥಳೀಯರು ಜಮೀನಿಗೆ ಹೋಗಿ ಕೃಷಿ ಚಟುವಟಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಬೆಳೆಗಳನ್ನು ರಾತ್ರಿ ಸಮಯದಲ್ಲಿ ಕಾಯಲು ಹೋಗುತ್ತಿಲ್ಲ. ಇದರಿಂದಾಗಿ ಬೆಳೆಗಳೆಲ್ಲ ಹಂದಿ ಸೇರಿದಂತೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಜನರು ಮನೆ ಸೇರಬೇಕಾದ ಪರಿಸ್ಥಿತಿ ಇದೆ.

ನಾಲ್ಕೈದು ತಿಂಗಳಿನಿಂದ ಕಾಡಂಚಿನ ಗ್ರಾಮದ ಜನರು ಆನೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಆನೆ ದಾಳಿಯಿಂದ ಬೇಸತ್ತ ಜನರು ತಿಂಗಳ ಹಿಂದೆ ಕುಂದುಕೆರೆ ವಲಯದ ವಲಯಾರಣ್ಯಾಧಿಕಾರಿ ಶ್ರೀನಿವಾಸ್ ಅವರಿಗೆ ದಿಗ್ಬಂಧನ ಹಾಕಿದ್ದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಅವರನ್ನು ಹೋಗುವುದಕ್ಕೆ ಬಿಟ್ಟಿದ್ದರು.

ಅ ಸಂದರ್ಭದಲ್ಲಿ, ‘ಆನೆ ಸೆರೆ ಹಿಡಿಯಲು ಬೇಕಾದ ಆನೆಗಳು ನಾಡಹಬ್ಬ ದಸರಾಗೆ ಹೋಗಿವೆ. ಬಂದ ನಂತರ ಪುಂಡಾನೆಯನ್ನು ಸೆರೆ ಹಿಡಿದು ಕಾಡಿಗೆ ಬಿಡುತ್ತೇವೆ’ ಎಂದು ಗ್ರಾಮಸ್ಥರ ಮನವೊಲಿಸಿದ್ದರು‌.

‘ದಸರಾ ಮುಗಿದು ತಿಂಗಳು ಕಳೆದರೂ ಆನೆಯನ್ನು ಸೆರೆ ಹಿಡಿಯುವ ಕೆಲಸ ಮಾಡಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

‘ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಗಳಿಗೆ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಜೆ ಮನೆಗೆ ಮನೆಗೆ ವಾಪಸ್ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಪೋಷಕರು ಮಕ್ಕಳಿಗಾಗಿಬಸ್ ನಿಲ್ದಾಣ, ರಸ್ತೆ ಬಳಿ ಭಯದಿಂದ ಕಾಯಬೇಕಿದೆ’ ಎಂದು ಗ್ರಾಮದ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ರಮೇಶ್‌ ಕುಮಾರ್‌ ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ಕುಂದುಕೆರೆ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್‌ ಪ್ರತಿಕ್ರಿಯಿಸಿ, ‘ಸಮಸ್ಯೆ ಇರುವುದು ಗೊತ್ತಿದೆ. ಆನೆಯನ್ನು ಸೆರೆ ಹಿಡಿಯುದಕ್ಕೆ ಹುಲಿ ಯೋಜನೆ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅನುಮತಿ ಸಿಕ್ಕ ಕೂಡಲೆ ಸೆರೆ ಹಿಡಿಯುವ ಕೆಲಸ ಮಾಡುತ್ತೇವೆ. ಸಮಸ್ಯೆ ತಗ್ಗಿಸಲು ಆ ಭಾಗದಲ್ಲಿ ಗಸ್ತು ಹೆಚ್ಚಿಸಲಾಗುವುದು’ ಎಂದರು.

ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ: ಎಚ್ಚರಿಕೆ
‘ಆನೆಯಿಂದಾಗಿ ಪ್ರತಿದಿನ ಯಾರಾದರೂ ಒಬ್ಬರ ಮನೆ ಹಾನಿಯಾಗುತ್ತಲೇ ಇದೆ. ಹೀಗಿದ್ದರೂ ಅರಣ್ಯ ಇಲಾಖೆಯವರು ಆನೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿಲ್ಲ. ಸಂಜೆಯಾಗುತ್ತಿದ್ದಂತೆ ಸಿಬ್ಬಂದಿ ಕಾಡಿನೊಳಗೆ ಓಡಿಸಲೂ ಯತ್ನಿಸುತ್ತಿಲ್ಲ. ನೆಪ ಮಾತ್ರಕ್ಕೆ ಜೀಪಿನಲ್ಲಿ ಸೈರನ್ ಹಾಕುತ್ತ ಒಂದೆರಡು ಸುತ್ತ ಹಾಕಿ ಹೋದರೆ ಮತ್ತೆ ತಿರುಗಿ ನೋಡುವವರು ಇಲ್ಲ’ ಎಂದು ಗ್ರಾಮಸ್ಥರು ದೂರಿದರು.

‘ಆನೆಯನ್ನು ಸೆರೆ ಹಿಡಿದು ಬೇರೆ ಕಡೆಗೆ ಬಿಡದಿದ್ದರೆ ಇಲ್ಲಿನ ಜನರು ವಾಸ ಮಾಡುವುದಕ್ಕೆ ಆಗುವುದಿಲ್ಲ. ಆನೆ ಜನರ ಪ್ರಾಣಕ್ಕೆ ಅಪಾಯ ತಂದೊಡ್ಡುವ ಮುನ್ನ ಸೆರೆ ಹಿಡಿಯಬೇಕು. ಇಲ್ಲದಿದ್ದರೆ, ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಗ್ರಾಮದ ಮುಖಂಡರಾದ ಮಹದೇವ ಪ್ರಸಾದ್, ಪಳನಿ, ಶಂಕರಪ್ಪ, ಮಹದೇವಪ್ಪ ಸ್ವಾಮಿ, ಮಾದೇಶ, ಮಹದೇವ ಸ್ವಾಮಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.