ಹನೂರು: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ಗಂಗನದೊಡ್ಡಿಯ ನಟರಾಜು ಎಂಬುವವರು ಕಾಡಾನೆ ದಾಳಿಯಿಂದ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಅಂದು ರಾತ್ರಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ಸಮಯದಲ್ಲಿ ಕಾಡಾನೆಯೊಂದು ಜಮೀನಿಗೆ ನುಗ್ಗಿದ್ದು, ದಾಳಿ ನಡೆಸಿದೆ. ಬಳಿಕ ಗಾಯಗೊಂಡಿದ್ದ ಅವರನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಾನೆ ಹಾವಳಿ ತಪ್ಪಿಸಿ: ನಾಲ್ಕು ತಿಂಗಳ ಹಿಂದೆ ಇದೇ ರೀತಿ ಕಾವಲು ಕಾಯುವ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿತ್ತು. ಆಗ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಮತ್ತೆ ದಾಳಿಗೆ ತುತ್ತಾಗಿದ್ದಾರೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಕಾಡಂಚಿನ ಜಮೀನಿನ ರೈತರು ಸದಾ ಆತಂಕದಲ್ಲೆ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
‘ಆನೆ ದಾಳಿ ಪರಿಣಾಮ ಬಲಗಾಲು ಮುರಿದಿದ್ದು, ಸೊಂಟದ ಬಳಿ ಗಾಯವಾಗಿದೆ. ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರಿಂದ ವರದಿ ಪಡೆದು ನಂತರ ಇಲಾಖೆಯಿಂದ ವೈದ್ಯಕೀಯ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.