ಗುಂಡ್ಲುಪೇಟೆ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂಜೆ 4.30ರ ನಂತರ ನಿಷೇಧವಿದ್ದರೂ ಪ್ರವಾಸಿಗರನ್ನು ಬೆಟ್ಟಕ್ಕೆ ಜೀಪ್‌ನಲ್ಲಿ ಕರೆದೊಯ್ಯುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ನಿಯಮ ಉಲ್ಲಂಘಿಸಿದ್ದಾರೆ. ಸ್ಥಳೀಯ ಹಾಗೂ ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಟ್ಟಕ್ಕೆ ತೆರಳಲು ಸಂಜೆ 4.30ರ ಬಳಿಕ ನಿಷೇಧವಿದೆ. ಇಲ್ಲಿನ ಇಡಿಸಿ(ಇಕೋ ಡೆವಲಪ್ಮೆಂಟ್ ಕಮಿಟಿ) ವಾಹನದಲ್ಲಿ ಬೆಟ್ಟಕ್ಕೆ ಪ್ರಯಾಣಿಕರನ್ನು ಕರೆದೊಯಿದ್ದಾರೆ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೆಎಸ್‍ಆರ್‌ಟಿಸಿ ಬಸ್ ಸಂಜೆ 4 ಗಂಟೆ ನಂತರ ನಿಷೇಧಿಸುವ ಅರಣ್ಯ ಅಧಿಕಾರಿಗಳು ಇಡಿಸಿ ವಾಹನದಲ್ಲಿ ಜನರನ್ನು ಕರೆದು ಹೋಗಲು ಅನುಮತಿ ನೀಡಿದ್ದು ಏಕೆ ಎಂಬ ಪ್ರಶ್ನೆ ಎದ್ದಿದ್ದು, ಹಣದಾಸೆಗೆ ಇಂತಹ ಕೃತ್ಯಕ್ಕೆ ಇಳಿದಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪರಿಸರ ಪ್ರೇಮಿ ಮಣಿಕಂಠ ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿ.ಎಸ್.ಬೆಟ್ಟ ವಲಯದ ಅರಣ್ಯಾಧಿಕಾರಿ ಮಲ್ಲೇಶ್ ಪ್ರತಿಕ್ರಿಯಿಸಿ, ‘ಪ್ರವಾಸಿಗರು 4.30ರ ಮೊದಲೇ ಟಿಕೆಟ್ ಪಡೆದಿದ್ದರು. ವಾಹನ ಪಂಕ್ಚರ್ ಆದ ಕಾರಣ ಬರಲು ತಡವಾಗಿದೆ. 4.15ಕ್ಕೆ ಕರೆದುಕೊಂಡು ಹೋಗಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.