ಯಳಂದೂರು: ತಾಲ್ಲೂಕಿನಲ್ಲಿ ಮೆಕ್ಕೆಜೋಳ ಕೃಷಿಕರ ಜಮೀನಿಗೆ ಕೃಷಿ ಅಧಿಕಾರಿಗಳು ಹಾಗೂ ಪ್ರಗತಿ ಪರ ರೈತರು ಭೇಟಿ ನೀಡಿ ರೋಗ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಮಾತನಾಡಿ, ‘ಸೈನಿಕ ಹುಳು ಹೊಸದೇನಲ್ಲ. ಅತಿ ಹೆಚ್ಚು ಮಳೆಯಾಶ್ರಿತ ಪ್ರದೇಶದ ಬೆಳೆಗಳಲ್ಲಿ ಕಂಡುಬರುತ್ತದೆ. ಭೂಮಿಯೊಳಗೆ ಇದರ ಕೋಶಗಳು ಸುರಕ್ಷಿತವಾಗಿ ಸಂರಕ್ಷಿಸಲ್ಪಡುತ್ತದೆ. ಒಮ್ಮೆಗೆ ಸಾವಿರದ ತನಕ ತತ್ತಿ ಇಟ್ಟು ಮರಿಮಾಡುತ್ತದೆ, ಮಳೆ ಹೆಚ್ಚು ಸಮಯ ಮುಂದುವರಿದರೆ ತಾಕಿನಲ್ಲಿ ಸೇರಿ ಹೆಚ್ಚು ಹಾನಿ ಉಂಟುಮಾಡುತ್ತದೆ. ಜೊತೆಗೆ ಭತ್ತ, ರಾಗಿ, ಜೋಳಗಳಂತಹ ಹುಲ್ಲಿನಲ್ಲೂ ಇವು ಕಂಡುಬರುತ್ತವೆ. ಹಾಗಾಗಿ, ಬೇಸಾಯಗಾರರು ಏಕ ಬೆಳೆ ಪದ್ಧತಿಗೆ ಬದಲಾಗಿ ಬಹು ಬೆಳೆ ಬಿತ್ತನೆ ಮಾಡುವ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಕೀಟನಾಶಕದ ಮೂಲಕವೂ ತಡೆಗಟ್ಟಬಹುದು. ಶೀತದ ಪ್ರಮಾಣ ಹೆಚ್ಚು ಇದ್ದಾಗ ಔಷಧೋಪಚಾರ ಮಾಡಿ, ಬೆಳೆ ರಕ್ಷಿಸಿಕೊಳ್ಳಬೇಕು’ ಎಂದರು.
ಪೋಷಕಾಂಶ ನೀಡಲು ಸಲಹೆ: ತಾಲ್ಲೂಕಿನಾದ್ಯಂತ ಭತ್ತ ಬಿತ್ತನೆ ನಡೆಯುತ್ತಿದೆ. ಸಸಿ ಮಡಿಯತ್ತ ರೈತರು ಚಿತ್ತ ಹರಿಸಿದ್ದಾರೆ. ಆದರೆ, ಭೂಮಿಯಲ್ಲಿ ಪೋಷಕಾಂಶಗಳ ಕೊರತೆ ಕಂಡುಬಂದಿದ್ದು, ನಾಟಿಗೂ ಮೊದಲು ಭೂಮಿಗೆ ಸಾವಯವ ಇಲ್ಲವೇ ಗೊಬ್ಬರಗಳ ಮೂಲಕ ಅಗತ್ಯ ಪೋಷಕಾಂಶ ಒದಗಿಸಬೇಕು. ಭತ್ತ ಬೆಳೆಯುವ ಸಾಗುವಳಿದಾರರು ಕಾಂಪ್ಲೆಕ್ಸ್ ಜೊತೆ ಜಿಂಕ್, ಸಲ್ಫೇಟ್ ಹಾಗೂ ಬೋರಾನ್ ಸೇರಿಸಬೇಕು. ಇದರಿಂದ ಭೂಮಿಯಲ್ಲಿ ಸಾವಯವ ಇಂಗಾಲ ವೃದ್ಧಿಸಿ ಬೆಳೆ ಇಳುವರಿಗೆ ಸಹಾಯಕ ಆಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.