ADVERTISEMENT

ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 8:10 IST
Last Updated 27 ಡಿಸೆಂಬರ್ 2025, 8:10 IST
<div class="paragraphs"><p>&nbsp;ಚೆಂಡು ಹೂ</p></div>

 ಚೆಂಡು ಹೂ

   

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಚೆಂಡು ಹೂ ಕಾರ್ಖಾನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಬಂದ್ ಮಾಡಿಸಬೇಕೆಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘಟನೆ ಗ್ರಾಮ ಘಟಕಗಳ ಪದಾಧಿಕಾರಿಗಳು ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೆಂಡು ಸಂಸ್ಕರಣೆ ವೇಳೆ ಕಾರ್ಖಾನೆ ಹೊರ ಸೂಸುವ ಹೊಗೆಯಿಂದ ವಾಯು ಮಾಲಿನ್ಯ ಉಂಟಾಗುವ ಕಾರಣ ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ, ಕೆಲಸೂರುಪುರ, ಕೆಲಸೂರು, ಕಗ್ಗಳದಹುಂಡಿ, ಕಗ್ಗಳ, ತೆರಕಣಾಂಬಿ ಇನ್ನೂ ಮೊದಲಾದ ಗ್ರಾಮಗಳ ಜನರಾದ ನಮಗೆ ಆರೋಗ್ಯದ ಸಮಸ್ಯೆಗಳು ಉಲ್ಬಣಗೊಂಡಿವೆ. ಬೈಕ್ ರ‍್ಯಾಲಿ ಮೂಲಕ ಚಾಮರಾಜನಗರಕ್ಕೆ ತೆರಳಿ ಜಿಲ್ಲಾಧಿಕಾರಿಗಳಲ್ಲಿ ನಮ್ಮ ಸಂಕಷ್ಟ ಮನದಟ್ಟು ಮಾಡಿದರೂ ಕ್ರಮ ಕೈಗೊಳ್ಳುವುದು ಭರವಸೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಡಿ.29ರಂದು ಶಿಂಡನಪುರ, ಕೆಲಸೂರು, ತೆರಕಣಾಂಬಿ ಮತ್ತು ಕೊಡಸೋಗೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಬೀಗ ಜಡಿಯುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಚೆಂಡು ಹೂ ಸಂಸ್ಕರಣೆ ನಂತರ ಹೊರ ಬರುವ ಮಲಿನ ನೀರು ಅಂತರ್ಜಲ ಸೇರುವ ಪರಿಣಾಮ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾರ್ಖಾನೆ ಸುತ್ತಲಿನ ತೋಟಗಳಲ್ಲಿ ವಾಸಿಸುವ ರೈತರು ಹೊರಗಡೆಯಿಂದ ಕುಡಿವ ಮತ್ತು ಅಡುಗೆಗೆ ಹೊರಗಿನಿಂದ ನೀರು ತೆಗೆದುಕೊಂಡು ಹೋಗಬೇಕಿದೆ. ವಾಯು ಮಾಲಿನ್ಯದಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಕಾರ್ಖಾನೆ ಸನಿಹವೆ ಸಂರಕ್ಷಿತ ಅರಣ್ಯಪ್ರದೇಶವಿದ್ದು, ವನ್ಯಜೀವಿಗಳು ವಾಸಿಸುತ್ತಿವೆ. ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಚೆಂಡು ಹೂ ಸಂಸ್ಕರಣೆ ಪ್ರಾರಂಭಿಸಿದರೆ ವಾಯು ಮಾಲಿನ್ಯ ಇಡೀ ತಾಲ್ಲೂಕಿಗೆ ವ್ಯಾಪಿಸುವ ಕಾರಣ ಬಂದ್ ಮಾಡಿಸಲೇಬೇಕಿದೆ. ಆದರೆ ಜೀವ–ಜೀವನ ಎರಡಕ್ಕೂ ಕುತ್ತು ತಂದಿಟ್ಟಿರುವ ಕಾರ್ಖಾನೆ ಮೇಲೆ ಸರ್ಕಾರಕ್ಕೆ ಯಾಕಿಷ್ಟು ಮೋಹ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.

ನಮ್ಮ ಒತ್ತಾಯ ಕೇವಲ ಚೆಂಡು ಹೂ ಅರೆಯುವುದರ ವಿರುದ್ಧವೇ ಹೊರತು ಅರಿಸಿನ, ಮೆಣಸಿನಕಾಯಿ ಸಂಸ್ಕರಣೆ ವಿರುದ್ಧವಲ್ಲ. ಆದ್ದರಿಂದ ಚೆಂಡು ಹೂ ಅರೆಯುವ ಕ್ರಿಯೆಗೆ ಅಂತ್ಯವಾಡಬೇಕು ಇಲ್ಲವಾದಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಒಂದು ವೇಳೆ ಕಾರ್ಖಾನೆ ಬೆನ್ನಿಗೆ ಸರ್ಕಾರ, ಜಿಲ್ಲಾಡಳಿತವಾಗಲಿ ನಿಂತರೆ ಮುಂದಾಗುವ ಆನಾಹುತಗಳಿಗೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ, ಕೆಲಸೂರುಪುರ ಗ್ರಾಮ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.