ADVERTISEMENT

ಭೂಮಿ ಕಸಿಯಬೇಡಿ, ಸೌಲಭ್ಯ ಕೊಡಿ: ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:34 IST
Last Updated 22 ಆಗಸ್ಟ್ 2025, 2:34 IST
ಕೊಳ್ಳೇಗಾಲ ಕರ್ನಾಟಕ ರಾಜ್ಯ ರೈತ ಸಂಘದ ಜಾಗೇರಿ ಘಟಕದ ನೇತೃತ್ವದಲ್ಲಿ, ಅರಣ್ಯ ಇಲಾಖೆಯ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ನಾಗರೀಕರ ಮೂಲಭೂತ ಹಕ್ಕುಗಳ ಕಸಿದಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಮುಂದೆ ಗುರುವಾರ ಪ್ರತಿಭಟನೆ ಮಾಡಿದರು.
ಕೊಳ್ಳೇಗಾಲ ಕರ್ನಾಟಕ ರಾಜ್ಯ ರೈತ ಸಂಘದ ಜಾಗೇರಿ ಘಟಕದ ನೇತೃತ್ವದಲ್ಲಿ, ಅರಣ್ಯ ಇಲಾಖೆಯ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ನಾಗರೀಕರ ಮೂಲಭೂತ ಹಕ್ಕುಗಳ ಕಸಿದಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಮುಂದೆ ಗುರುವಾರ ಪ್ರತಿಭಟನೆ ಮಾಡಿದರು.   

ಕೊಳ್ಳೇಗಾಲ: ಅರಣ್ಯ ಇಲಾಖೆಯ ಜನವಿರೋಧಿ ನೀತಿ ಅನುಸರಿಸುತ್ತಿದೆ, ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಾಗೇರಿ ಘಟಕದ ನೇತೃತ್ವದಲ್ಲಿ ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಲ್ಲಿ ಜಮಾಯಿಸಿದ್ದ ರೈತರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯಿತಿಯವರೆಗೆ ಮೆರವಣಿಗೆ ನಡೆಸಿದರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ‘ಸರ್ಕಾರದ ಅರಣ್ಯ ನೀತಿಗಳು ಜನವಿರೋಧಿಯಾಗಿದ್ದು, ಗ್ರಾಮೀಣ ಭಾಗದ ಜನರು ಹಾಗೂ ರೈತ ಸಮುದಾಯದ ಬದುಕಿಗೆ ಅಪಾಯ ತಂದೊಡ್ಡಿದೆ. ದಿನಕೊಂದು ಕಾನೂನುಗಳನ್ನು ಹಾಗೂ ನಿಯಮಗಳನ್ನು ಜಾರಿಗೆ ತಂದು ಗ್ರಾಮಸ್ಥರಿಗೆ ತೊಂದರೆ ನೀಡಲಾಗುತ್ತಿದೆ.

ADVERTISEMENT

ಸತ್ತೇಗಾಲ ಗ್ರಾಮದ ಸರ್ವೆ ನಂ.174 ರಲ್ಲಿ 12,760 ಎಕರೆ ಪ್ರದೇಶವಿದ್ದು 1956ಕ್ಕೂ ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. 1836ರಲ್ಲಿ ಮದ್ರಾಸ್ ಸರ್ಕಾರ ರಾಮಸ್ವಾಮಿ ಮೊದಲಿಯಾ‌ರ್ ಎಂಬುವವರಿಗೆ ಇನಾಂ ಆಗಿ ನೀಡಿರುವ ಭೂಮಿ ಇದಾಗಿದೆ. ಈ ಭೂಮಿಯಲ್ಲಿ ಸಾವಿರಾರು ರೈತರು ಜೀವನೋಪಾಯಕ್ಕಾಗಿ 7 ದಶಕಗಳಿಂದಲೂ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ.

2022-23ನೇ ಸಾಲಿನಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ಕೊಳ್ಳೇಗಾಲ ಬಫರ್ ವಲಯದ ವಲಯ ಅರಣ್ಯಾಧಿಕಾರಿಗಳು 2023ರಲ್ಲಿ ಪತ್ರ ಬರೆದು ಸತ್ತೇಗಾಲ ಗ್ರಾಮದ ಸ.ನಂ.174ರ ಭೂಮಿ ಮೀಸಲು ಅರಣ್ಯ ಪ್ರದೇಶವಾಗಿದ್ದು ಯಾವುದೇ ಮೂಲಭೂತ ಸೌಲಭ್ಯ ಒದಗಿಸದಂತೆ ಮನವಿ ಮಾಡಿದ್ದಾರೆ. 

ಪರಿಣಾಮ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ನಡೆಯುತ್ತಿಲ್ಲ, ಮೂಲಭೂತ ಸೌಕರ್ಯಗಳು ಸಿಗದೆ ಮಾನವ ಹಕ್ಕುಗಳ ಉಲ್ಲಂಘನೆಹಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಅರಣ್ಯ ಇಲಾಖೆಗೆ ಭೂಮಿ ಹಸ್ತಾಂತರ ಮಾಡುವುದಕ್ಕಿಂತಲೂ ಮುನ್ನವೇ ಇಲ್ಲಿ ಗ್ರಾಮಸ್ಥರು ವಾಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ 1994ರಲ್ಲಿ ಸೆಕ್ಷನ್ 4ರಡಿ 9,415 ಎಕರೆ ಭೂಮಿಯನ್ನು ಕಾಯ್ದಿರಿಸಿದ ಅರಣ್ಯ ಎಂದು ಘೋಷಣೆ ಮಾಡಿರುವುದು ಸರಿಯಲ್ಲ. ಈ ಭಾಗದಲ್ಲಿ 710 ಎಕರೆ ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದರೂ ಅದನ್ನು ಕಡೆಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ. 

ಸತ್ತೇಗಾಲದ ಸರ್ವೆ ನಂಂಬರ್ 174ರಲ್ಲಿ 12,760 ಎಕರೆಯ ಪೈಕಿ 4,055 ಎಕರೆಯಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದು, ಜನವಸತಿಯೂ ಇದೆ. ಅಧಿಸೂಚನೆಗೂ ಮೊದಲೇ ವ್ಯವಸಾಯ ಮಾಡುತ್ತಿರುವ 710 ಏಕರೆ ಪ್ರದೇಶವನ್ನು ಕೈಬಿಟ್ಟು ಉಳಿದ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಮರು ಅಧಿಸೂಚನೆ ಹೊರಡಿಸಬೇಕು. 4,055 ಎಕರೆ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಬಸವರಾಜು, ತಾಲ್ಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಸಿಎಫ್ ಶಿವರಾಮು, ಆರ್.ಎಫ್.ಒ ರವಿಕುಮಾರ್ ಪುರಾಣಿಕಮಠ ಆಗಮಿಸಿ ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಬಸವರಾಜು, ಚಾರ್ಲಿ, ಲಿಂಗರಾಜು, ವಸಂತಕುಮಾರ್, ಮಹದೇವ, ಲಾರೆನ್ಸ್, ಮಾರ್ಟಳ್ಳಿಯ ಅರಪುದರಾಜ್, ಮಾದಮ್ಮ, ಜಾನ್ ಕೆನಾಡಿ, ಪೆರಿಯಾನಾಯಗಂ, ಭಾಸ್ಕರ್, ಮುರಗೇಶ್, ಅರೋಗ್ಯ, ಭೈರ, ಕೆಂಪರಾಜು, ವಿಜಿ, ಶಿವಮಲ್ಲಿ, ಶಾಂತಮೇರಿ, ವಸಂತಮೇರಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.