ADVERTISEMENT

ಗುಂಡ್ಲುಪೇಟೆ ‌| ಬೃಹತ್ ಟ್ರ್ಯಾಕ್ಟರ್, ಬೈಕ್ ರ‍್ಯಾಲಿ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:24 IST
Last Updated 17 ಸೆಪ್ಟೆಂಬರ್ 2025, 2:24 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು   

ಗುಂಡ್ಲುಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆ ಪದಾಧಿಕಾರಿಗಳು ಮತ್ತು ರೈತರು ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹೊರವಲಯದ ಶನೇಶ್ಚರ ದೇವಾಲಯದ ಆವರಣದಲ್ಲಿ ಬೃಹತ್ ಟ್ರ್ಯಾಕ್ಟರ್ ಮತ್ತು ಬೈಕ್ ರ‍್ಯಾಲಿಗೆ ಸಾವಯವ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಹಸಿರು ನಿಶಾನೆ ತೋರಿಸಿದರು. ನಂತರ ಪಟ್ಟಣದ ಮೂಲಕ ಹಾದು ರಾಷ್ಟ್ರೀಯ ಹೆದ್ದಾರಿ-766ರಲ್ಲಿ ರ‍್ಯಾಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘ಕಾವೇರಿ ನಿಯಂತ್ರಣ ಪ್ರಾಧಿಕಾರ ಅವಕಾಶ ಮಾಡಿರುವಂತೆ ಸಮುದ್ರ ಸೇರುತ್ತಿರುವ 30 ಟಿಎಂ.ಸಿ ಕಾವೇರಿ ನೀರನ್ನು ಚಾಮರಾಜನಗರ, ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳ 25 ಲಕ್ಷ ಎಕರೆ ಜಮೀನುಗಳಿಗೆ ಪೂರೈಸಬೇಕು. ಕಾಡು ಪ್ರಾಣಿಗಳಿಂದ ಆದ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ವಿತರಿಸುವುದರ ಜೊತೆಗೆ ವನ್ಯಪ್ರಾಣಿಗಳಿಂದ ಜೀವಹಾನಿಯಾದರೆ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಂಡೀಪುರ, ನಾಗರಹೊಳೆ ಬಿ.ಆರ್.ಟಿ. ಹಾಗೂ ಅಜ್ಜಿಪುರಗಳಲ್ಲಿ ಸಫಾರಿ ನಿಲ್ಲಿಸಬೇಕು. ಸೂರ್ಯಕಾಂತಿ ಖರೀದಿ ಕೇಂದ್ರ ಸ್ಥಾಪನೆ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಬೇಕು. ಭ್ರಷ್ಟಚಾರ ಆರೋಪವಿರುವ ನರೇಗಾ ಕಾಮಗಾರಿಗಳ ತನಿಖೆ ನಡೆಸಬೇಕು ಹಾಗೂ ಪಂಚಾಯಿತಿಗಳಿಗೆ ಬಂದ ಅನುದಾನದ ವಿವರ ಫಲಕದಲ್ಲಿ ಹಾಕಬೇಕು’ ಎಂದು ಒತ್ತಾಯಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಭ್ರಷ್ಟಚಾರ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳ ಸಬ್ಸಿಡಿ ಯೋಜನೆಗಳ ತನಿಖೆ ಆಗಬೇಕು, ಆಸ್ಪತ್ರೆಗಳ ಉನ್ನತಿಕರಣ, ರೈತರ ಮೇಲಿನ ಪೊಲೀಸ್ ದಬ್ಬಾಳಿಕೆ ನಿಲ್ಲಬೇಕು. ಬ್ಯಾಂಕ್‌ಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಿದರು.

‘ಹೊನ್ನೇಗೌಡನಹಳ್ಳಿಯಲ್ಲಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಜತೆಗೆ ಮೂಟೆಗಳನಿಟ್ಟು ತೊಂದರೆ ಮಾಡುವ ಬಗ್ಗೆ ಪರಿಶೀಲಿಸಿ, ಸಕಾಲದಲ್ಲಿ ಇ-ಸ್ವತ್ತು ಮಾಡಿಸಿಕೊಡಲು ಕ್ರಮ ವಹಿಸಬೇಕು, ಗ್ರಾಮಗಳ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಚರಂಡಿಗಳ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಇಒ ಷಣ್ಮುಗಂ ಭರವಸೆ ನೀಡಿದರು.

‘ಚಿನ್ನದ ಸಾಲ ಮರುಪಾವತಿ ಆಗಿದ್ದರೂ ಕೃಷಿ ಸಾಲದ ಕಾರಣಕ್ಕೆ ಚಿನ್ನಾಭರಣ ವಾಪಸ್‌ ನೀಡದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಮತ್ತು ಬ್ಯಾಂಕ್ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ವ್ಯವಹರಿಸುವ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾ ಭರವಸೆ ನೀಡಿದರು.

ಸಂಘಟನೆ ಪದಾಧಿಕಾರಿಗಳಾದ ಹಳ್ಳದಮಾದಹಳ್ಳಿ ಲೋಕೇಶ್, ಬೆಟ್ಟದಮಾದಹಳ್ಳಿ ಷಣ್ಮುಖಸ್ವಾಮಿ, ಹಸಗೂಲಿ ಮಹೇಶ್, ಮಾಡ್ರಹಳ್ಳಿ ಪಾಪಣ್ಣ, ಮಧುಹಳ್ಳದ ಮಾದಹಳ್ಳಿ, ಪ್ರಜ್ವಲ್, ಮಂಜು, ಮಹೇಶ್, ಕೂತನೂರು ಗಣೇಶ್, ಭೀಮನಬೀಡು ರಾಜು, ಮಹದೇವಪ್ರಸಾದ್, ಮಲ್ಲೇಶ್ ಸೇರಿದಂತೆ 400ಕ್ಕೂ ಅಧಿಕ ಮಂದಿ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.