ADVERTISEMENT

ಗುಂಡ್ಲುಪೇಟೆ| ಬೆಳೆ ವಿಮೆ ಪಾವತಿಸಲು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

ರೈತ ಸಂಘದಿಂದ ಅಹೋರಾತ್ರಿ ಧರಣಿ ಆರಂಭ, ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:24 IST
Last Updated 24 ಜನವರಿ 2020, 13:24 IST
ಗುಂಡ್ಲುಪೇಟೆಯ ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು
ಗುಂಡ್ಲುಪೇಟೆಯ ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು   

ಗುಂಡ್ಲುಪೇಟೆ: ರೈತರ ಖಾತೆಗೆ ಬೆಳೆ ವಿಮೆ, ವೃದ್ಧಾಪ್ಯ ವೇತನ, ವಿಧವೆಯರ ಮಾಸಿಕ ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಾಜ್ಯ ಸರ್ಕಾರ, ತಾಲ್ಲೂಕು ಆಡಳಿತ, ಕೃಷಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ, ತಾಲ್ಲೂಕು ಕಚೇರಿ ಮುಂಭಾಗ ಪೆಂಡಾಲ್ ಹಾಕಿ ಧರಣಿ ಆರಂಭಿಸಿದರು.

ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಒಳ್ಳೆಯ ಬಿತ್ತನೆ ಬೀಜ, ನೀರು, ವಿದ್ಯುತ್, ನಿಖರ ಬೆಲೆಗೆ ಒತ್ತಾಯಿಸಿ ರೈತರು ಪ್ರತಿನಿತ್ಯ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರನ್ನು ಹಳ್ಳಿಗಳಿಂದ ಒಕ್ಕಲೆಬ್ಬಿಸುವ ತಂತ್ರವನ್ನು ಸರ್ಕಾರಗಳು ಮಾಡುತ್ತಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಎಲ್ಲವನ್ನೂ ವಹಿಸುತ್ತಿವೆ. ಹಳ್ಳಿಗಳ ಬದಲು ನಗರಗಳು ಬೆಳೆಯಬೇಕು ಎಂಬುದು ಇವರ ಉದ್ದೇಶವಾಗಿದೆ’ ಎಂದು ದೂರಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂವಾದವನ್ನು ಕೇವಲ ಭಾಷಣಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಅವರಿಗೆ ರೈತರಿಗಿಂತ ವಿಮಾ ಕಂಪನಿಗಳ ಮೇಲೆ ವ್ಯಾಮೋಹ ಜಾಸ್ತಿ. ಇದರಿಂದ ಶೇ 50ರಿಂದ 60ರಷ್ಟು ಕಂಪನಿಗಳಿಗೆ ಲಾಭವಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ’ ಎಂದು ದೂರಿದರು.

ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಠಿತಗೊಂಡಿದೆ. ಈ ಬಗ್ಗೆ ಶಾಸಕರು, ಸಂಸದರು, ಸಚಿವರು ಗಮನ ಹರಿಸಬೇಕು. ಕಬಿನಿ ನೀರು ಪೋಲಾಗುತ್ತಿದ್ದು, ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ಎಡವುತ್ತಿದೆ. ಕೆರೆಗಳಿಗೆ ನೀರು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಶಾಸಕ ನಿರಂಜನ್ ಕುಮಾರ್ ತಾಲ್ಲೂಕಿನ ಉಳಿದ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು. ಬೆಳೆ ವಿಮೆ, ವೃದ್ಧಾಪ್ಯ, ವಿಧವಾ ವೇತನವನ್ನು ಶೀಘ್ರ ಮಂಜೂರು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕಾಗಮಿಸಿದ ಕೃಷಿ ಅಧಿಕಾರಿ, ‘ವಾರದೊಳಗೆ ಬೆಳೆ ವಿಮೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದರು.

ತಹಶೀಲ್ದಾರ್ ನಂಜುಂಡಯ್ಯ ಮತ್ತು ಗ್ರೇಡ್-2 ತಹಶೀಲ್ದಾರ್ ಚಿಗರಿ, ‘ವೃದ್ಧಾಪ್ಯ ಮತ್ತು ವಿಧಾನ ವೇತನ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ಕಾರ್ಯಾಧ್ಯಕ್ಷ ಶಾಂತಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಹೊನ್ನೆಗೌಡನಹಳ್ಳಿ ಶಿವಮಲ್ಲು, ಜಿ.ಪಿ. ಸ್ವಾಮಿ, ವೀರನಪುರ ನಾಗರಾಜಪ್ಪ, ಲೋಕೇಶ್, ಮಹದೇವಸ್ವಾಮಿ, ಮಹೇಂದ್ರ, ಹಂಗಳ ದೀಪು, ವಸಂತ ಕುಮಾರ್, ಮಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.