ADVERTISEMENT

ಚಾಮರಾಜನಗರ | ಸಿಡಿಮದ್ದು ಸ್ಫೋಟ; ಜಾನುವಾರು ಜೀವಕ್ಕೆ ಕಂಟಕ

ನಾಲ್ಕು ತಿಂಗಳಲ್ಲಿ 8 ಪ್ರಕರಣ; 10 ಜಾನುವಾರುಗಳು, 1 ಕರಡಿ ಸಾವು

ಬಾಲಚಂದ್ರ ಎಚ್.
Published 7 ಏಪ್ರಿಲ್ 2025, 7:11 IST
Last Updated 7 ಏಪ್ರಿಲ್ 2025, 7:11 IST
ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ ಸಿಡಿಮದ್ದು ತಿಂದು ಜಾನುವಾರು ಮೃತಪಟ್ಟ ಸ್ಥಳಕ್ಕೆ ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು
ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ ಸಿಡಿಮದ್ದು ತಿಂದು ಜಾನುವಾರು ಮೃತಪಟ್ಟ ಸ್ಥಳಕ್ಕೆ ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು   

ಚಾಮರಾಜನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಕಿಡಿಗೇಡಿಗಳು ಇರಿಸುತ್ತಿರುವ ಸಿಡಿಮದ್ದುಗಳು ಜಾನುವಾರುಗಳ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಹೊಲಗಳಿಗೆ ಮೇವು ಅರಸಿ ಬರುವ ಮುಗ್ಧ ಜಾನುವಾರುಗಳು ಆಹಾರದೊಳಗೆ ಅಡಗಿಸಿಟ್ಟ ಸಿಡಿಮದ್ದು ಜಗಿದು ಭೀಕರವಾಗಿ ಮೃತಪಡುತ್ತಿವೆ. 

ಮೂರು ತಿಂಗಳಲ್ಲಿ 10 ಪ್ರಕರಣ: ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೂ 8 ಕಡೆಗಳಲ್ಲಿ ಸಿಡಿಮದ್ದು ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಜಾನುವಾರುಗಳು ಪ್ರಾಣಬಿಟ್ಟಿವೆ. ಜನವರಿಯಲ್ಲಿ 4, ಫೆಬ್ರುವರಿಯಲ್ಲಿ 1, ಮಾರ್ಚ್‌ನಲ್ಲಿ 2 ಹಾಗೂ ಏಪ್ರಿಲ್‌ನಲ್ಲಿ 1 ಸ್ಫೋಟ ಪ್ರಕರಣಗಳು ನಡೆದಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ.

ಎಲ್ಲೆಲ್ಲಿ ಸಿಡಿಮದ್ದು ಸ್ಫೋಟ: ಜ.14ರಂದು ಕೊಳ್ಳೇಗಾಲ ಠಾಣೆ ವ್ಯಾಪ್ತಿಯಲ್ಲಿ 1, ಜ.17ರಂದು ಹನೂರು ಠಾಣೆ ವ್ಯಾಪ್ತಿಯಲ್ಲಿ 1, ಜ.28ರಂದು ಕುದೇರು ಠಾಣೆ ವ್ಯಾಪ್ತಿಯ 2 ಕಡೆ, ಫೆ.20ರಂದು ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ 1, ಮಾರ್ಚ್‌ 11 ಹಾಗೂ 31ರಂದು ಹನೂರು, ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು, ಏ.2ರಂದು ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ಒಂದು ಕಡೆ ಸಿಡಿಮದ್ದು ಸ್ಫೋಟ ನಡೆದಿದ್ದು ಜಾನುವಾರುಗಳು ಸಾವನ್ನಪ್ಪಿವೆ. 

ADVERTISEMENT

ಹೈನುಗಾರರಲ್ಲಿ ಆತಂಕ: ಜಿಲ್ಲೆಯಲ್ಲಿ ಸರಣಿ ಸ್ಫೋಟ ಪ್ರಕರಣಗಳು ಹೈನುಗಾರರಲ್ಲಿ ಆತಂಕ ಸೃಷ್ಟಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಹೈನುಗಾರರು ಜಾನುವಾರುಗಳನ್ನು ಮೇಯಲು ಹೊರಗೆ ಬಿಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಫೋಟದ ಭಯದಿಂದ ರೈತರು ಜಮೀನು ಉಳುಮೆ ಮಾಡಲು ಹೆದರುತ್ತಿದ್ದಾರೆ.

ಆರ್ಥಿಕ ಸಂಕಷ್ಟ: ಜೀವನ ನಿರ್ವಹಣೆಗೆ ಕಟ್ಟಿಕೊಂಡಿದ್ದ ಹಸುಗಳು ಕಳೆದುಕೊಂಡು ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಲು ಮಾರಿ ಬದುಕು ಕಟ್ಟಿಕೊಂಡಿದ್ದವರು ಬೀದಿಗೆ ಬೀಳುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಕನಿಷ್ಠ 40 ರಿಂದ 60 ಸಾವಿರ ಮೌಲ್ಯದ ಹಸುಗಳಿಗೆ ಸರ್ಕಾರ ನೀಡುವ ಬಿಡಿಗಾಸು (10,000) ಪರಿಹಾರ ಸಾಲದು ಎಂಬ ಅಸಮಾಧಾನ ಹೈನುಗಾರರದ್ದು.

ಮಾನಸಿಕ ವೇದನೆ: ಒಂದೆಡೆ ಆರ್ಥಿಕ ನಷ್ಟ ಮತ್ತೊಂದೆಡೆ ಮಾನಸಿಕ ವೇದನೆ ಹೈನುಗಾರರನ್ನು ಹೈರಾಣಾಗಿಸುತ್ತಿದೆ. ಪ್ರೀತಿಯಿಂದ ಸಾಕಿದ ಜಾನುವಾರುಗಳ ಬಾಯಿ ಸಿಡಿಮದ್ದು ಸ್ಫೋಟದಿಂದ ಛಿದ್ರವಾಗಿರುವುದನ್ನು ನೋಡಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಆಹಾರ ಸೇವಿಸಲಾಗದೆ ಅನುಭವಿಸುವ ಯಾತನೆ ಕಂಡು ಮಮ್ಮುಲ ಮರಗುತ್ತಿದ್ದಾರೆ. ಮನೆಯಲ್ಲಿ ಹುಟ್ಟಿ ಬೆಳೆದ ಜಾನುವಾರುಗಳು ಕಣ್ಣೆದುರೇ ಬಲಿಯಾಗುವುದನ್ನು ನೋಡುವುದು ತುಂಬಾ ನೋವಿನ ಕ್ಷಣ ಎನ್ನುತ್ತಾರೆ ರೈತ ಬಸವರಾಜಪ್ಪ.

ಕಡಿವಾಣ ಹಾಕಿ: ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸ್ಫೋಟಕ ಎಲ್ಲಿ ತಯಾರಾಗುತ್ತದೆ, ಕಚ್ಛಾವಸ್ತುಗಳು ಎಲ್ಲಿಂದ ಪೂರೈಕೆಯಾಗುತ್ತದೆ ಎಂಬುದನ್ನು ಪತ್ತೆ ಹಚ್ಚಬೇಕು. ಆರೋಪಿಗಳಿಂದಲೇ ದಂಡವಸೂಲಿ ಮಾಡಿ ಜಾನುವಾರು ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರು.

ಹನೂರು ತಾಲ್ಲೂಕಿನಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಸಂಭವಿಸಿರುವ ಹೆಚ್ಚಿನ ಸಿಡಿಮದ್ದು ಸ್ಫೋಟ ಪ್ರಕರಣಗಳು ಹನೂರು ತಾಲ್ಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಹುಪಾಲು ಅರಣ್ಯ ಹೊಂದಿರುವ ಕಾರಣಕ್ಕೆ ಈ ಭಾಗದಲ್ಲಿ ಪ್ರಾಣಿಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಿಂದ ಜಾನುವಾರುಗಳ ಜೀವಕ್ಕೂ ಮಾರಕವಾಗಿದೆ.

7 ಮಂದಿ ಬಂಧನ: ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಣಗಳ್ಳಿಯ ರಾಮಶೆಟ್ಟಿ, ಸೋಮಣ್ಣ, ಶಿವಣ್ಣ, ನಾರಾಯಣಸ್ವಾಮಿ, ಭದ್ರಹಳ್ಳಿಯ ಶ್ರೀರಂಗಶೆಟ್ಟಿ, ಚಿಕ್ಕಲ್ಲತೂರಿನ ರುದ್ರ, ಜಡೆಯಪ್ಪ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಮೂರು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.

ವನ್ಯಜೀವಿಗಳ ಪ್ರಾಣಕ್ಕೂ ಕುತ್ತು: ಸಿಡಿಮದ್ದುಗಳು ಜಾನುವಾರುಗಳಿಗೆ ಮಾತ್ರವಲ್ಲ ವನ್ಯಜೀವಿಗಳ ಪ್ರಾಣಕ್ಕೂ ಕುತ್ತಾಗಿದೆ. ಈಚೆಗಷ್ಟೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದ ತೆಳ್ಳನೂರು–ಬಂಡಳ್ಳಿ ರಸ್ತೆಯಲ್ಲಿ ಸಿಡಿಮದ್ದು ಸೇವಿಸಿ ಕರಡಿ ಮೃತಪಟ್ಟಿದೆ. ಹೆಚ್ಚಾಗಿ ಕಾಡುಹಂದಿ, ಜಿಂಕೆಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ.

ಪೂರಕ ಮಾಹಿತಿ: ಬಸವರಾಜು ಬಿ, ಅವಿನ್ ಪ್ರಕಾಶ್, ಮಹದೇವ್ ಹೆಗ್ಗವಾಡಿಪುರ

ಕಾಡು ಹಂದಿಗಳ ಬೇಟೆಗೆ ಆರೋಪಿಗಳು ಇರಿಸಿದ್ದ ಸ್ಫೋಟಕಗಳು
‘ಕಾಡುಪ್ರಾಣಿಗಳೂ ಬಲಿ’ ಪ್ರಾಣಿಗಳನ್ನು ಬೇಟೆಯಾಡಲು ಇಡುತ್ತಿರುವ ಸಿಡಿ ಮುದ್ದುಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಕೆಲವೊಮ್ಮೆ ಹಂದಿ ಜಿಂಕೆ ಕಾಡೆಮ್ಮೆಗಳು ಸಾವನ್ನಪ್ಪುತ್ತಿವೆ. ಕಾಡುಪ್ರಾಣಿಗಳ ಮಾಂಸದಾಸೆಗೆ ಹೀನಕೃತ್ಯಕ್ಕೆ ಇಳಿದಿರುವವರನ್ನು ಬಂಧಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರಾಣಿ ಸಂಕುಲ ನಾಶವಾಗುತ್ತದೆ.
–ಶೈಲೇಂದ್ರ ರೈತ ಮುಖಂಡ 
ಕಠಿಣ ಕ್ರಮ ಜರುಗಿಸಲಿ ಒಂದೆರಡು ಹಸುಗಳನ್ನು ಸಾಕಿಕೊಂಡು ಬಹಳಷ್ಟು ಹೈನುಗಾರರು ಜೀವನ ಮಾಡುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಕಾಡು ಪ್ರಾಣಿಗಳ ಬೇಟೆಯಾಡಲು ಹಸುಗಳನ್ನು ಸಾಯಿಸುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಹಸುಗಳನ್ನು ಮೇಯಲು ಬಿಡಲು ಹೆದರಿಕೆಯಾಗುತ್ತಿದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು ನೀರು ಹಾಗೂ ಮೇವಿನ ಕೊರತೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಸಿಡಿಮದ್ದು ಹಾಕುವವರ ವಿರುದ್ಧ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
–ಜಗದೀಶ್ ಹೈನುಗಾರ ಮುಡಿಗುಂಡ
ಸಂಪೂರ್ಣ ನಿಲ್ಲಿಸಬೇಕು ಪೊಲೀಸರು ಸಿಡಿಮದ್ದು ಸ್ಫೋಟ ಪ್ರಕರಣದ ಜಾಡು ಹಿಡಿದು ಮೂಲವನ್ನು ಬೇಧಿಸಬೇಕು ಅಕ್ರಮವಾಗಿ ಪ್ರಾಣಿ ಬೇಟೆಕೋರರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
–ಚಂಗಡಿ ಕರಿಯಪ್ಪ ರೈತ ಮುಖಂಡ
ಆರೋಪಿಗಳ ಬಂಧನ
ಕಾಡಂಚಿನ ಗ್ರಾಮಗಳಲ್ಲಿ ಕಾಡುಹಂದಿ ಬೇಟೆಯಾಡಲು ಸಿಡಿಮದ್ದು ಇರಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಹನೂರು ಠಾಣೆ ಪೊಲೀಸರು ಕಾಡಂಚಿನ ಗ್ರಾಮಗಳಲ್ಲಿ ಗಸ್ತು ಮಾಡುತ್ತಿದ್ದು ಸ್ಫೋಟ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿದ್ದಾರೆ. ಗ್ರಾಮಸ್ಥರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ಕಂದಾಯ ಪೊಲೀಸ್ ಗ್ರಾಮ ಪಂಚಾಯಿತಿ ಸೆಸ್ಕ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. –ಬಿ.ಟಿ.ಕವಿತಾ ಎಸ್‌ಪಿ
ಸಿಡಿಮದ್ದಿಗೆ ಪಟಾಕಿ ಕಚ್ಛಾವಸ್ತು ಬಳಕೆ
ಸಿಡಿಮದ್ದು ತಯಾರಿಕೆಗೆ ಪಟಾಕಿಗಳಿಗೆ ಬಳಸುವ ಕಚ್ಛಾವಸ್ತುಗಳನ್ನು ಬಳಸಿರುವುದು ತನಿಖೆ ವೇಳೆ ದೃಢಪಟ್ಟಿದೆ. ಪಟಾಕಿಗಳ ತಯಾರಿಕೆ ಕಡಿಮೆ ಪ್ರಮಾಣ ಬಳಸಿದರೆ ಸಿಡಿಮದ್ದು ಸ್ಫೋಟಕಗಳಲ್ಲಿ ಹೆಚ್ಚಿನ ಪ್ರಮಾಣ ಬಳಕೆ ಮಾಡಲಾಗುತ್ತದೆ. ಬೆಣಚುಕಲ್ಲುಗಳ ಚೂರಿನ ಜೊತೆಗೆ ಸಿಡಿಮದ್ದು ಸೇರಿಸಿ ಜೋಳದ ಹಿಟ್ಟಿನ ಉಂಡೆಯಲ್ಲಿ ಅಡಗಿಸಿಟ್ಟು ಕಾಡುಪ್ರಾಣಿಗಳ ಚಲನವಲನ ಹೆಚ್ಚಿರುವ ಕಡೆ ಬಿಸಾಡಲಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.