ADVERTISEMENT

ಚಾಮರಾಜನಗರ: ಜಿಲ್ಲೆಗೆ ಮೊದಲ ಮಹಿಳಾ ‌ಎಸ್‌ಪಿ

ದಿಢೀರ್‌ ಬೆಳವಣಿಗೆಯಲ್ಲಿ ದಿವ್ಯಾ ಸಾರಾ ಥಾಮಸ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 11:34 IST
Last Updated 10 ಜುಲೈ 2020, 11:34 IST
ದಿವ್ಯಾ ಸಾರಾ ಥಾಮಸ್‌ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು
ದಿವ್ಯಾ ಸಾರಾ ಥಾಮಸ್‌ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು   

ಚಾಮರಾಜನಗರ: ದಿಢೀರ್‌ ಬೆಳವಣಿಗೆಯಲ್ಲಿ ಜಿಲ್ಲೆಯ ಪೊಲೀಸ್‌ ಇಲಾಖೆಯ ಮುಖ್ಯಸ್ಥರು (ಎಸ್‌ಪಿ) ಬದಲಾಗಿದ್ದಾರೆ.

2013ನೇ ಕರ್ನಾಟಕ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ದಿವ್ಯಾ ಸಾರಾ ಥಾಮಸ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಗುರುವಾರಅಧಿಕಾರ ಸ್ವೀಕರಿಸಿದ್ದಾರೆ. ಇವರು ಈ ಮೊದಲು ಬೆಂಗಳೂರಿನ ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ವಿಭಾಗದ ಡಿಸಿಪಿಯಾಗಿದ್ದರು.

ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸುತ್ತಿರುವುದು ಇದೇ ಮೊದಲು.

ADVERTISEMENT

ಜಿಲ್ಲೆಯ ಎಸ್‌ಪಿಯಾಗಿದ್ದ ಎಚ್‌.ಡಿ.ಆನಂದಕುಮಾರ್‌ ಅವರು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಸ್‌ಪಿಯಾಗಿ ವರ್ಗಾವಣೆಯಾಗಿದ್ದಾರೆ.

ಅಚ್ಚರಿಯ‌ ಬೆಳವಣಿಗೆ: ಎಚ್‌.ಡಿ.ಆನಂದ ಕುಮಾರ್‌ ಅವರನ್ನು ಐಎಸ್‌ಡಿ ಎಸ್‌ಪಿ ಹಾಗೂ ದಿವ್ಯಾ ಸಾರಾ ಥಾಮಸ್‌ ಅವರನ್ನು ಚಾಮರಾಜನಗರ ಎಸ್‌ಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಜೂನ್‌ 26ರಂದೇ ಆದೇಶ ಹೊರಡಿಸಿತ್ತು.

ಆದರೆ, ಇಬ್ಬರ ಮೂವ್‌ಮೆಂಟ್‌ ಆದೇಶ ಬಂದಿರಲಿಲ್ಲ. ಆ ಬಳಿಕ, ಆನಂದಕುಮಾರ್‌ ಅವರ ವರ್ಗಾವಣೆ ರದ್ದಾಗಿದೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ವರ್ಗಾವಣೆಗೆ ಸಂಬಂಧಿಸಿದಂತೆಗುರುವಾರ ಮೂವ್‌ಮೆಂಟ್‌ ಆದೇಶ ಹೊರಡಿಸಿದ್ದಾರೆ.

ಅದರಂತೆ, ದಿವ್ಯಾ ಸಾರಾ ಥಾಮಸ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಕೇರಳ ಮೂಲದ ದಿವ್ಯಾ ಅವರು 2016ರಲ್ಲಿ ಮೈಸೂರು ಜಿಲ್ಲೆ ನಂಜನಗೂಡು ವಿಭಾಗದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದಿವ್ಯಾ ಅವರು, ‘ಈ ಹಿಂದೆ ನಾನು ಸಮೀಪದ ನಂಜನಗೂಡಿನಲ್ಲಿ ಕೆಲಸ ಮಾಡಿದ್ದೆ. ಹಾಗಾಗಿ, ಜಿಲ್ಲೆಯ ಪರಿಚಯ ಇದೆ. ಚಾಮರಾಜನಗರ ಶಾಂತಿಯುತ ಜಿಲ್ಲೆ.ಕೆಲಸ ಮಾಡುವುದಕ್ಕೆ ಉತ್ತಮ ಅವಕಾಶ ಇದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ’ ಎಂದು ಹೇಳಿದರು.

ಪೊಲೀಸ್‌ ವಲಯದಲ್ಲೇ ಅಚ್ಚರಿ

ದಿಢೀರ್‌ ಆಗಿ ಎಸ್‌ಪಿ ಬದಲಾಗಿರುವುದು ಪೊಲೀಸ್‌ ವಲಯದಲ್ಲೇ ಅಚ್ಚರಿ ಮೂಡಿಸಿದೆ. ಹೊಸ ಎಸ್‌ಪಿ ಬರುವುದರ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ವರ್ಗಾವಣೆ ಆದೇಶ ಜೂನ್‌ 26ಕ್ಕೆ ಬಂದಿದ್ದರೂ, ಈವರೆಗೂ ಮೂವ್‌ಮೆಂಟ್‌ ಆದೇಶ ಬಾರದೇ ಇದ್ದುದರಿಂದ ಆನಂದಕುಮಾರ್‌ ಅವರೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ನಂಬಲಾಗಿತ್ತು.

‘ಜಿಲ್ಲೆಯಲ್ಲೇ ಮುಂದುವರಿಯಲು ಆನಂದಕುಮಾರ್‌ ಅವರು ಪ್ರಯತ್ನ ಪ‍ಟ್ಟಿದ್ದರು, ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಯೊಬ್ಬರು ಸರ್ಕಾರದ ಮೇಲೆ ಒತ್ತಡವನ್ನೂ ತಂದಿದ್ದರು. ಈ ಕಾರಣಕ್ಕೆ ಮೂವ್‌ಮೆಂಟ್‌ ಆದೇಶ ಬರುವುದು 12 ದಿನ ತಡವಾಗಿದೆ’ ಎಂದು ಮೂಲಗಳು‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.