ADVERTISEMENT

ಚಾಮರಾಜನಗರ: ನೆರೆ ಇಳಿದರೂ ತಗ್ಗದ ಜನರ ಆತಂಕ

ಸೋಮವಾರದಿಂದ ಅಬ್ಬರಿಸದ ವರುಣ, ತುಂಬಿ ಹರಿಯುತ್ತಿದೆ ನದಿ, ಕೆರೆ ಕಾಲುವೆಗಳು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 19:30 IST
Last Updated 6 ಸೆಪ್ಟೆಂಬರ್ 2022, 19:30 IST
ಚಾಮರಾಜನಗರ ತಾಲ್ಲೂಕಿನ ಕೋಡಿ ಮೋಳೆ ಸಮೀಪ ಸುವರ್ಣಾವತಿ ಕಾಲುವೆ ಮಂಗಳವಾರವೂ ತುಂಬಿ ಹರಿದು, ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು
ಚಾಮರಾಜನಗರ ತಾಲ್ಲೂಕಿನ ಕೋಡಿ ಮೋಳೆ ಸಮೀಪ ಸುವರ್ಣಾವತಿ ಕಾಲುವೆ ಮಂಗಳವಾರವೂ ತುಂಬಿ ಹರಿದು, ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು   

ಚಾಮರಾಜನಗರ/ಯಳಂದೂರು: ಜಿಲ್ಲೆಯಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಮಳೆಯಾಗಿಲ್ಲ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಕೊಂಚ ಕಡಿಮೆಯಾಗಿದ್ದು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಜನರು ಕೊಂಚ ನಿರಾಳರಾಗಿದ್ದಾರೆ.

ಈಗಲೂ ಸುವರ್ಣಾವತಿ ನದಿ, ಕಾಲುವೆ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಒಂದೆರಡು ಗಂಟೆ ಧಾರಾಕಾರ ಮಳೆ ಬಂದರೆ ಮತ್ತೆ ನೆರೆ ಉಂಟಾಗುವ ಆತಂಕ ಜನರನ್ನು ಕಾಡುತ್ತಿದೆ.

ತಾಲ್ಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳ ಹೊರ ಹರಿವಿನಲ್ಲಿ ಗಣನೀಯ ಇಳಿಕೆಯಾಗಿದ್ದು, ಮಂಗಳವಾರ ರಾತ್ರಿವರೆಗೂ ಎರಡೂ ಜಲಾಶಯಗಳಿಂದ 5,200 ಕ್ಯುಸೆಕ್‌ಗಳಷ್ಟು ನೀರು ಹೊರ ಬಿಡಲಾಗುತ್ತಿತ್ತು.

ADVERTISEMENT

ಎರಡೂ ಜಲಾಶಯಗಳ ಒಳಹರಿವು ಕಡಿಮೆಯಾಗಿದ್ದು, ರಾತ್ರಿ ಹೊತ್ತಿಗೆ ಹೊರ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನುಗಳಲ್ಲಿ ನಿಂತ ನೀರು: ಸೋಮವಾರ ತಾಲ್ಲೂಕಿನಲ್ಲಿ ಉಕ್ಕೇರಿದ್ದ ನದಿ, ಕಾಲುವೆಗಳ ಹರಿವಿನ ಬಿರುಸು ಮಂಗಳವಾರ ಸ್ವಲ್ಪ ಕಡಿಮೆಯಾಗಿದೆ. ಹಾಗಿದ್ದರೂ, ನದಿ, ಕಾಲುವೆಗಳ ಅಕ್ಕಪಕ್ಕದ ಜಮೀನುಗಳಲ್ಲಿ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ನೀರು ನಿಂತಿದೆ.

ತಾಲ್ಲೂಕಿನ ಕೋಡಿಮೋಳೆ, ಹರದನಹಳ್ಳಿಯ ಜನವಸತಿ ಪ್ರದೇಶಗಳಿಗೆ ನುಗ್ಗಿದ್ದ ನೀರು ಇಳಿದಿದ್ದು, ನಿವಾಸಿಗಳು ಮನೆಗೆ ಹಿಂದಿರುಗಿದ್ದಾರೆ.

‘ತಾಲ್ಲೂಕಿನಲ್ಲಿ ಪರಿಸ್ಥಿತಿ ಸುಧಾರಿಸಿದೆ. ಮೂರು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಕೋಡಿಮೋಳೆಯಲ್ಲಿ ಜಲಾವೃತ ಗೊಂಡ ಜನವಸತಿ ಪ್ರದೇಶ ಸಹಜಸ್ಥಿತಿಗೆ ಬಂದಿದೆ. ಹರದನಗಳ್ಳಿಯಲ್ಲೂ ನೀರು ಇಳಿದಿದೆ. ಕಣ್ಣೇಗಾಲ ಗ್ರಾಮದಲ್ಲಿ ಮಾತ್ರ ಹಂದಿ ಜೋಗಿ ಸಮುದಾಯದ 13 ಮಂದಿ ಕಾಳಜಿ ಕೇಂದ್ರದಲ್ಲಿ ಇದ್ದಾರೆ’ ಎಂದು ಚಾಮರಾಜನಗರ ತಹಶೀಲ್ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಳಂದೂರಿನಲ್ಲಿ ಯಥಾಸ್ಥಿತಿ: ಯಳಂದೂರು ತಾಲ್ಲೂಕಿನಲ್ಲಿ ನೆರೆ ಪರಿಸ್ಥಿತಿ ಮುಂದುವರಿದಿದೆ. ನೀರಿನ ಹರಿಯುವ ಬಿರುಸು ತುಸು ತಗ್ಗಿದ್ದು ಗ್ರಾಮೀಣ ಭಾಗದ ಜನರು ನಿಟ್ಟಿಸಿರು ಬಿಡುವಂತಾಗಿದೆ.

ತಾಲ್ಲೂಕಿನಲ್ಲಿ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಕಂಡು ಬಂತು. ಸಂಜೆ ಮೋಡ ಆವರಿಸಿ ಮಳೆ ಹನಿಯುವ ಆತಂಕ ಎದುರಾಯಿತು. ತುಂತುರು ಮಳೆ ಸ್ವಲ್ಪ ಕಾಲ ಕಾಡಿತು. ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮಳೆ ಸುರಿದಿದೆ.

ತಾಲ್ಲೂಕಿನ ಗುಂಬಳ್ಳಿ ವಿಜಿಕೆಕೆ ಆಸ್ಪತ್ರೆ, ಉಪ್ಪಿನ ಮೊಳೆ, ಕೃಷ್ಣಪುರ, ಗುಂಬಳ್ಳಿ, ಗಣಿಗನೂರು ಸುತ್ತಮುತ್ತ ಕೃಷಿ ಭೂಮಿಗಳು ಜಲಾವೃತವಾಗಿದ್ದು, ಕೃಷಿಕರು ಜಮೀನಿನಲ್ಲಿ ತುಂಬಿದ ನೀರನ್ನು ಹೊರ ಹಾಕಲು ಪ್ರಯಾಸ ಪಟ್ಟರು. ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ತೆರಳಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಶ್ರಮಿಸಿದರು.

'ರಾತ್ರಿಯಿಂದಲೇ ನದಿ ತಟದ ಗ್ರಾಮೀಣ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿತ್ತು. ಸೋಮವಾರ ತಡರಾತ್ರಿ ಮನೆಗಳತ್ತ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ನೆರೆ ಪೀಡಿತ ಪ್ರದೇಶಗಳಿಂದ ಜನರನ್ನು ಹೊರಗೆ ಕರೆತರುವಲ್ಲಿ ಕಂದಾಯ ಸಿಬ್ಬಂದಿ ಮತ್ತು ಪೊಲೀಸರು ಯಶಸ್ವಿಯಾದರು'ಎಂದು ತಹಸೀಲ್ದಾರ್ ಕೆ.ಬಿ. ಆನಂದಪ್ಪ ನಾಯಕ ಮಾಹಿತಿ ನೀಡಿದರು.

50 ವರ್ಷಗಳ ಬಳಿಕ ಯಳಂದೂರು ಆವರಿಸಿದ ಸುವರ್ಣೆ
ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೂ ಸುವರ್ಣಾವತಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಲೇ ಇತ್ತು. ಪರಿಣಾಮವಾಗಿ 50 ವರ್ಷಗಳ ಬಳಿಕ ಸುವರ್ಣಾವತಿ ನೀರು ಯಳಂದೂರನ್ನು ಆವರಿಸಿತು.

ಬಳೆಪೇಟೆ, ಗೌತಮ ಬಡಾವಣೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನುಗ್ಗಿ ಬೆಳಿಗ್ಗೆಯೇ ಜನರ ಓಡಾಟಕ್ಕೆ ತೊಂದರೆಯಾಯಿತು.

ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು ಜಲಾವೃತಗೊಂಡವು.

ಬಳೆಪೇಟೆ, ಗೌತಮ ಬಡಾವಣೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನೀರನ್ನು ಹೊರಹಾಕಲು ಪ್ರಯಾಸಪಟ್ಟರು.

‘ಕಂದಹಳ್ಳಿ ಬಳಿ ಸುವರ್ಣಾವತಿ ನದಿಯ ನೀರು ರಭಸವಾಗಿ ಹರಿಯುತ್ತಿದೆ. ಈ ನೀರು ಪಟ್ಟಣದ ಹಲವು ಬಡಾವಣೆಗಳಿಗೆ ನುಗ್ಗಿದೆ’ ಎಂದು ಪಟ್ಟಣದ ಸುರೇಶ್ ಹೇಳಿದರು.

ವಾಹನ ಸವಾರರು ಪಟ್ಟಣ ಪ್ರವೇಶಿಸಲು ಪರಿತಪಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕರು ಶಾಲಾ-ಕಾಲೇಜು ಸೇರಲು ಪ್ರಾಯಾಸಪಟ್ಟರು. ನಂತರ ನೆರೆ ಪೀಡಿತ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಯಿತು.

ಮಾರ್ಗ ಬದಲು:ಹೆದ್ದಾರಿ ಜಲಾವೃತವಾಗಿದ್ದರಿಂದ ರಾ.ಹೆ.209ರ ಮಾರ್ಗದ ಸಂಚಾರವನ್ನು ನಿರ್ಬಂಧಿಸಲಾಯಿತು. ಯಳಂದೂರು ಮೂಲಕ, ಚಾಮರಾಜನಗರ, ಕೊಳ್ಳೇಗಾಲ ಮತ್ತು ಬೆಂಗಳೂರಿಗೆ ಹೋಗುವ ಬಸ್‌ಗಳು ಸಂತೇಮರಹಳ್ಳಿ-ಮೂಗೂರು ಮಾರ್ಗವಾಗಿ ಸಂಚರಿಸಿದವು.

‘ಬಳೆಪೇಟೆಯಲ್ಲಿ ಮನೆಗೆ ನುಗ್ಗಿದ ನೀರು ಇಳಿದಿದೆ. ಆದರೆ, ನೀರಿನ ಹರಿವು ನಿಂತಿಲ್ಲ. ಕೆಲವೆಡೆ ಗಣೇಶನ ವಿಗ್ರಹ ನೆರೆ ನೀರಿನಲ್ಲಿ ಸೇರಿದೆ. ಕುಟುಂಬಸ್ಥರು ಮನೆಗಳಿಗೆ ಬೀಗ ಹಾಕಿ ನೆರೆಹೊರೆ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಸ್ಥಳೀಯರಾದ ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.