ಚಾಮರಾಜನಗರ: ಆಷಾಢದಲ್ಲಿ ಪಾತಳಕ್ಕೆ ಕುಸಿದಿದ್ದ ಹೂವಿನ ದರ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಗಗನಕ್ಕೇರಿದೆ. ಎಲ್ಲ ಹೂವಿನ ದರಗಳು ಎರಡದಿಂದ ಮೂರು ಪಟ್ಟು ಹೆಚ್ಚಾಗಿದ್ದು ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯ ಸಂದರ್ಭ ಹೂವಿನ ದರ ಚೇತರಿಕೆ ಕಾಣಲು ಆರಂಭಿಸಿದ್ದು ನಿತ್ಯವೂ ಬೆಲೆ ಹೆಚ್ಚುತ್ತಲೇ ಇದೆ. ಕೆಲವೇ ದಿನಗಳಲ್ಲಿ ವರ ಮಹಾಲಕ್ಷ್ಮೀ ಹಬ್ಬ ಎದುರಾಗಲಿದ್ದು ಹೂವಿನ ದರ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.
ವಾರದ ಹಿಂದೆ ಕೆ.ಜಿ ಗುಲಾಬಿ ಗುಲಾಬಿ ದರ ಕೇವಲ ₹100 ಇತ್ತು. ಪ್ರಸ್ತುತ ₹ 240 ರಿಂದ ₹ 300ರವರೆಗೆ ತಲುಪಿದೆ. ಚೆಂಡು ಹೂ ₹20 ರಿಂದ ₹60ಕ್ಕೆ ಜಿಗಿದಿದೆ, ಸೇವಂತಿ ₹150 ರಿಂದ ₹240ಕ್ಕೆ ಏರಿಕೆಯಾಗಿದೆ, ಸಣ್ಣ ಮಲ್ಲಿಗೆ ಹಾಗೂ ಮಲ್ಲಿಗೆ ಹೂವಿನ ದರವೂ ದುಪ್ಪಟ್ಟಾಗಿದ್ದು ಕ್ರಮವಾಗಿ ಕೆ.ಜಿಗೆ ₹240 ಹಾಗೂ ₹400 ಇದೆ.
ಕನಿಷ್ಠ ₹500ರ ಗಡಿ ತಲುಪಿದ್ದ ಕನಕಾಂಬರ ಪ್ರಸ್ತುತ ₹1,000 ರಿಂದ ₹1,200ರವರೆಗೆ ಏರಿಕೆಯಾಗಿದೆ. ಬೇಡಿಕೆ ಕಳೆದುಕೊಂಡಿದ್ದ ಸುಗಂಧರಾಜ ₹160 ತಲುಪಿದೆ ಎಂದು ಹೂವಿನ ವ್ಯಾಪಾರಿ ರವಿ ಬೆಲೆಗಳ ವಿವರ ನೀಡಿದರು.
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಸಹಜವಾಗಿ ಬೆಲೆಯೂ ಹೆಚ್ಚಾಗುತ್ತದೆ. ಇನ್ನೂ ಒಂದೆರಡು ತಿಂಗಳು ಹೂವಿನ ದರ ಇಳಿಕೆಯಾಗುವ ಸಾಧ್ಯತೆಗಳು ತೀರಾ ಕಡಿಮೆ. ಹಬ್ಬಗಳ ಜೊತೆಗೆ ಧಾರ್ಮಿಕ ಉತ್ಸವಗಳು, ರಥೋತ್ಸವ, ಶುಭ ಸಮಾರಂಭಗಳು ನಡೆಯುವುದರಿಂದ ಹೂವಿಗೆ ಬೇಡಿಕೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ರವಿ.
ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು ನಡೆಯದ ಪರಿಣಾಮ ಹೂಗಳ ದರ ಭಾರಿ ಕುಸಿತ ಕಂಡಿತ್ತು. ಪ್ರಸ್ತುತ ಎಲ್ಲ ಹೂಗಳ ದರ ಕನಿಷ್ಠ 2 ರಿಂದ 3 ಪಟ್ಟು ಹೆಚ್ಚಾಗಿದೆ. ದರ ಹೆಚ್ಚಾದರೂ ಗ್ರಾಹಕರ ಖರೀದಿ ಉತ್ಸಾಹ ಕುಂದಿಲ್ಲ. ವರ್ಷಕ್ಕೊಮ್ಮೆ ಆಚರಿಸುವ ಹಬ್ಬಗಳಾಗಿರುವುದರಿಂದ ನಾಗರಿಕರು ದೇವರಿಗೆ ಹೂವಿನ ಅಲಂಕಾರ ಮಾಡಿ ಸಂಭ್ರಮಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.
ತರಕಾರಿ ದರ ಅಲ್ಪ ಇಳಿಕೆ: ಹಬ್ಬಗಳ ಸುಗ್ಗಿಯ ಮಧ್ಯೆಯೂ ತರಕಾರಿಗಳ ಬೆಲೆ ಅಲ್ಪ ಇಳಿಕೆಯಾಗಿದೆ. ಕಳೆದ ವಾರ ಕೆ.ಜಿಗೆ ₹50 ದಾಟಿದ್ದ ಬೀನ್ಸ್ ಹಾಗೂ ಕ್ಯಾರೆಟ್ ಇಳಿಕೆಯಾಗಿದೆ. ಎರಡೂ ತರಕಾರಿಗಳು ₹35 ರಿಂದ ₹40ಕ್ಕೆ ಸಿಗುತ್ತಿವೆ. ಕಳೆದ ವಾರ ಏರುಗತಿಯ ಸೂಚನೆ ನೀಡಿದ್ದ ಟೊಮೆಟೊ ಕೂಡ ಇಳಿಕೆಯಾಗಿದೆ. ಗಾತ್ರ ಹಾಗೂ ಗುಣಮಟ್ಟದ ಆಧಾರದಲ್ಲಿ ಕೆ.ಜಿಗೆ ₹20 ರಿಂದ ₹30ಕ್ಕೆ ಸಿಗುತ್ತಿದೆ ಎನ್ನುತ್ತಾರೆ ಕೋರ್ಟ್ ರಸ್ತೆಯ ಹಾಪ್‌ಕಾಮ್ಸ್ ಮಾಲೀಕ ಚಂದನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.