ADVERTISEMENT

ಗುಂಡ್ಲುಪೇಟೆ: ಹುಲಿ ಸೆರೆಗೆ ಕ್ರಮ ವಹಿಸದ ಇಲಾಖೆ

ಬಂಡೀಪುರ ಅರಣ್ಯ ಅಧಿಕಾರಿಗಳ ವಿರುದ್ಧ ಹೊನ್ನಶೆಟ್ಟರ ಹುಂಡಿ ಗ್ರಾಮಸ್ಥರ ಆರೋಪ

ಮಲ್ಲೇಶ ಎಂ.
Published 30 ಜೂನ್ 2022, 19:30 IST
Last Updated 30 ಜೂನ್ 2022, 19:30 IST
ಹುಲಿಯ ಓಡಾಟ ಇರುವ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿರುವುದು
ಹುಲಿಯ ಓಡಾಟ ಇರುವ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ಹೊನ್ನಶೆಟ್ಟರ ಹುಂಡಿ ಮತ್ತು ಮೂಖಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಹುಲಿಯೊಂದು ಆಗಿಂದಾಗ್ಗೆ ಕಾಣಿಸಿಕೊಂಡು ರೈತಾಪಿ ವರ್ಗದ ಜನರನ್ನು ಆತಂಕಕ್ಕೆ ದೂಡಿದೆ.

‘ಹುಲಿಗಳ ಹಾವಳಿ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಹುಲಿ ಸೆರೆಗೆ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿಲ್ಲ’ ಎಂಬುದು ಗ್ರಾಮಸ್ಥರ ಆರೋಪ.

ಈ ಭಾಗದಲ್ಲಿ ಹುಲಿ ಕಾಟದಿಂದ ಕೃಷಿ ಜಮೀನುಗಳು ಪಾಳು ಬಿದ್ದಿರುವ ಕುರಿತು ‘ಪ್ರಜಾವಾಣಿ’ಯ ಜೂನ್ 7ರ ಸಂಚಿಕೆಯಲ್ಲಿ ವಿಶೇಷ ವರದಿ (ಹುಲಿಗಳ ಕಾಟ: ಪಾಳು ಬಿದ್ದ ಜಮೀನುಗಳು) ಪ್ರಕಟವಾಗಿತ್ತು. ಆ ಬಳಿಕ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿ ಹುಲಿ ಸೆರೆಗೆ ಬೋನು ಇಟ್ಟು ಹೋಗಿದ್ದಾರೆ. ಹುಲಿಯ ಚಲನವಲನಗಳನ್ನು ಅರಿಯುವುದಕ್ಕಾಗಿ ಅಲ್ಲಲ್ಲಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದಾರೆ.

ADVERTISEMENT

‘ವರದಿ ಪ್ರಕಟವಾದ ನಂತರ ಇಲಾಖೆಯವರು ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಸಲುವಾಗಿ ಬೋನು ಇಟ್ಟು ಹೋಗಿದ್ದರು. ಹುಲಿಗಳ ಹೆಜ್ಜೆ ಗುರುತು ಪತ್ತೆ ಮಾಡಿಲ್ಲ, ಕೂಂಬಿಂಗ್ ಮಾಡಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.

‘ಹುಲಿಗಳ ಭಯದಿಂದ ಜಮೀನುಗಳಿಗೆ ಹೋಗಲು ಹೆದರಿಕೆ ಆಗುತ್ತಿದೆ. ಸಂಜೆಯಾಗುತ್ತಿದ್ದಂತೆ ಮನೆ ಸೇರಬೇಕಿದೆ. ಜಮೀನಿನಲ್ಲಿ ಈರುಳ್ಳಿ ಕೀಳುತ್ತಿದ್ದು, ಬೆಳೆಯನ್ನು ಕಾಯಲು ಭಯವಾಗುತ್ತದೆ. ಕಳ್ಳತನವಾದರೂ ಮನೆಗೆ ಹೋಗಬೇಕಿದೆ’ ಎಂದು ಗ್ರಾಮದ ರೈತ ಮಹೇಶ ಅಳಲು ತೋಡಿಕೊಂಡರು.

‘ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಬಂದು ಬೋನು ಇಟ್ಟು ಹೋಗಿದ್ದಾರೆ. ಸೆರೆಗೆ ಅಗತ್ಯವಾದ ನಾಯಿ ಅಥವಾ ಮೇಕೆಯನ್ನು ಕಟ್ಟಿಲ್ಲ. ಖಾಲಿ ಬೋನು ಇರಿಸಿದ್ದಾರೆ’ ಎಂದು ದೂರಿದರು.

ಹುಲಿ ಇರುವುದು ದೃಢ: ಹೊನ್ನರಶೆಟ್ಟರ ಹುಂಡಿ ಮತ್ತು ಮೂಖಹಳ್ಳಿ ಭಾಗದಲ್ಲಿ ಸಂಚರಿಸುತ್ತಿರುವುದು ಹುಲಿಯೇ ಅಥವಾ ಚಿರತೆಯೇ ಎಂಬ ಅನುಮಾನ ಅರಣ್ಯ ಅಧಿಕಾರಿಗಳಲ್ಲಿತ್ತು. ಇದನ್ನು ದೃಢಪ‍ಡಿಸುವುದಕ್ಕಾಗಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದರು. ಕ್ಯಾಮೆರಾದಲ್ಲಿ ಹುಲಿ ಓಡಾಡುತ್ತಿರುವುದು ದೃಢಪಟ್ಟಿದೆ.

‘ಹುಲಿ ಭಯದಿಂದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು ಆಗುತ್ತಿಲ್ಲ. ರಾತ್ರಿ ಸಮಯದಲ್ಲಿ ನೀರು ಬೀಡಲು ಆಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಬೋನು ಅಳವಡಿಸಿ ಶೀಘ್ರವಾಗಿ ಹುಲಿ ಸೆರೆ ಹಿಡಿಯಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರತಿಭಟನೆಯ ಎಚ್ಚರಿಕೆ:ಹುಲಿ ಸೆರೆ ಹಿಡಿಯಲು ವಿಳಂಬ ಮಾಡಿ ಜಾನುವಾರುಗಳು ಮತ್ತು ಜನರ ಮೇಲೆ ದಾಳಿಯಾದರೆ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದರು.

***

ಹುಲಿ ಈ ಭಾಗದಲ್ಲಿ ಓಡಾಡುತ್ತಿರುವುದು ದೃಢಪಟ್ಟಿದೆ. ಶೀಘ್ರವಾಗಿ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು.
-ಡಾ.ರಮೇಶ್ ಕುಮಾರ್, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.