ಚಾಮರಾಜನಗರ: ಅರಣ್ಯದೊಳಗೆ ಜಾನುವಾರು ಪ್ರವೇಶ ನಿರ್ಬಂಧಿಸುವ ವಿಚಾರವಾಗಿ ಸರ್ಕಾರ ರೂಪಿಸಿರುವ ನಿಯಮಗಳನ್ನು ಕಾಡಂಚಿನ ರೈತರು ಪಾಲಿಸಬೇಕು ಎಂಬ ಅರಣ್ಯ ಇಲಾಖೆ ಅಧಿಕಾರಿ ಹೇಳಿಕೆಗೆ ರೈತ ಮುಖಂಡರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಡೆಯಿತು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್ ಆರಂಭದಲ್ಲಿ ಮಾತನಾಡಿ, ಎಂಎಂ ಹಿಲ್ಸ್‌ನ ಹೂಗ್ಯಂನದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಬಳಿಕ ಅರಣ್ಯದೊಳಗೆ ದನಗಳನ್ನು ಮೇಯಿಸುವ ವಿಚಾರದಲ್ಲಿ ಸರ್ಕಾರ ನಿಯಮ ರೂಪಿಸಿದೆ. ರಾಜ್ಯದ ಅರಣ್ಯದೊಳಗೆ ಹೊರ ರಾಜ್ಯಗಳ ಜಾನುವಾರು ಪ್ರವೇಶ ನಿರ್ಬಂಧಿಸಲಾಗಿದೆ.
ಕಾಡಂಚಿನ ರೈತರು ಜಾನುವಾರುಗೆ ಲಸಿಕೆ ಹಾಕುವುದರ ಜೊತೆಗೆ ಕಿವಿ ಗುರುತು ಮಾಡಿಸಿಕೊಂಡು ಅನ್ಯ ರಾಜ್ಯದ ಜಾನುವಾರುಗಳ ಗುರುತಿಸುವಿಕೆಗೆ ಸಹಕಾರ ನೀಡಬೇಕು, ಹೆಚ್ಚಿನ ಜಾನುವಾರು ಹೊಂದಿರುವ ಕಾಡಂಚಿನ ರೈತರು ದನಗಳನ್ನು ಕಡಿಮೆ ಮಾಡಿಕೊಳ್ಳಬೇಕು, ಹೆಚ್ಚು ಹಾಲು ಕೊಡುವ ತಳಿಯ ಹಸು ಸಾಕಬೇಕು, ಜಮೀನುಗಳಲ್ಲೇ ಮೇವು ಬೆಳೆಸಿಕೊಳ್ಳಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ದನದ ದೊಡ್ಡಿ ನಿರ್ಮಿಸಿ ಕಾಡಿಗೆ ದನಗಳ ಪ್ರವೇಶ ತಗ್ಗಿಸಲಾಗುವುದು ಎಂದು ಹೇಳಿದರು.
ಡಿಸಿಎಫ್ ಮಾತಿಗೆ ಸಿಟ್ಟಿಗೆದ್ದ ರೈತ ಮುಖಂಡ ಹೊನ್ನೂರು ಪ್ರಕಾಶ್, ‘ಹೆಚ್ಚು ಹಾಲು ಕೊಡುವ ತಳಿಯ ಹಸುಗಳನ್ನು ಸಾಕಿ, ನಿರ್ದಿಷ್ಟ ಜಾಗದಲ್ಲಿಯೇ ದನಗಳನ್ನು ಮೇಯಿಸಿ ಎಂದು ಹೇಳುವ ಅಧಿಕಾರ ಅಧಿಕಾರಿಗಳಿಗಿಲ್ಲ, ಸರ್ಕಾರಕ್ಕೂ ಇಲ್ಲ. ಬೇಜವಾಬ್ದಾರಿ ಹೇಳಿಕೆ ನೀಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಅರಣ್ಯ ಇಲಾಖೆಯ ಸಲಹೆಗಳನ್ನು ರೈತರು ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ. ರೈತರ ಜೀವನೋಪಾಯಕ್ಕೆ ತೊಂದರೆ ಕೊಡುವ ಉದ್ದೇಶ ಇಲ್ಲ. ರೈತರ ವಿರೋಧ ಹಾಗೂ ಅಹವಾಲುಗಳನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿ ಬಗೆಹರಿಸಲಿದೆ ಎಂದು ಭರವಸೆ ನೀಡಿ ಸಮಾಧಾನಪಡಿಸಿದರು.
ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ‘ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಪಾಲಿಸುವುದು ಮಾತ್ರವಲ್ಲ, ರೈತರ ಸಂಕಟ, ನೋವುಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸಬೇಕು. ದೇಸಿ ನಾಟಿ ದನಗಳ ತಳಿಯನ್ನು ಉಳಿಸಿ ಬೆಳೆಸುತ್ತಿರುವ ಕಾಡಂಚಿನ ರೈತರಿಗೆ ವಿದೇಶಿ ತಳಿಗಳನ್ನು ಸಾಕುವಂತೆ ಹೇಳುತ್ತಿರುವುದು ಮೂರ್ಖತನ. ಮಲೆ ಮಾದಪ್ಪನಿಗೂ ನಾಟಿ ಹಸುವಿನ ಹಾಲಿನ ಅಭಿಷೇಕ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇದ್ದರೆ ಒತ್ತುವರಿಯಾಗಿರುವ ಗೋಮಾಳ ತೆರವುಗೊಳಿಸಿ ಎಂದು ಸವಾಲು ಹಾಕಿದರು.
ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ, ರೈತರು ಇಚ್ಛೆಯ ತಳಿಯ ಹಸು ಸಾಕಲು ಅವಕಾಶವಿದೆ. ಮಾನವ ಪ್ರಾಣಿ ಸಂಘರ್ಷ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಅರಣ್ಯದಂಚಿನಲ್ಲಿ ಬಫರ್ ವಲಯವನ್ನು ಸೃಷ್ಟಿಸಿ ನರೇಗಾ ಅನುದಾನ ಹಾಗೂ ಪಶುಸಂಗೋಪನಾ ಇಲಾಖೆಯ ಅನುದಾನ ಬಳಸಿಕೊಂಡು ಹಲವು ಜಾತಿಯ ಮೇವು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾನವ–ಪ್ರಾಣಿ ಸಂಘರ್ಷ ತಪ್ಪಿಸಬೇಕು. ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು, ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗದಂತೆ ತಡೆಯಬೇಕು. ಚೆಕ್ ಪೋಸ್ಟ್‌ಗಳಲ್ಲಿ ಸಿ.ಸಿ ಟಿವಿಕ್ಯಾಮೆರಾ ಅಳವಡಿಸಿ ನಿಗಾ ಇರಿಸಬೇಕು. ರೈತರು ಮರಗಳ ಕಟಾವಿಗೆ ಅರ್ಜಿ ಸಲ್ಲಿಸಿದರೆ ತ್ವರಿತ ವಿಲೇವಾರಿ ಮಾಡಬೇಕು. ಅತ್ತಿಖಾನೆ, ಬೇಡಗುಳಿ, ಹೊನ್ನಮೇಟಿ ಭಾಗದಲ್ಲಿ ಕಳೆನಾಶಕದಿಂದ ಆಗುತ್ತಿರುವ ಪರಿಸರ ಹಾನಿ ತಡೆಯಬೇಕು. ಧಾರ್ಮಿಕ ಪ್ರದೇಶಗಳಿಗೆ ತೆರಳಲು ನಿರ್ಬಂಧ ಹೇರಬಾರದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಜಿ.ಪೋ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಹಿರಿಯ ಅರಣ್ಯ ಅಧಿಕಾರಿಗಳಾದ ಶ್ರೀಪತಿ, ಪ್ರಭಾಕರ್, ಭಾಸ್ಕರ್, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ, ಡಾ.ಗುರುಪ್ರಸಾದ್, ಮಹದೇವಪ್ಪ, ಕರಿಯಪ್ಪ, ಮಹೇಶ್ ಕುಮಾರ್, ರಂಗಸ್ವಾಮಿ, ರಾಜೇಂದ್ರ, ಹೊನ್ನೂರು ಬಸವಣ್ಣ ಇದ್ದರು.
ಹಿರಿಯ ಅಧಿಕಾರಿಗಳ ಜೊತೆ ಸಭೆ
ಅರಣ್ಯದಂಚಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಕೆರೆಗಳ ಹೂಳೆತ್ತಲಾಗುವುದು ನೀರಾವರಿ ಇಲಾಖೆ ಹಾಗೂ ನಿಗಮದ ಅಧಿಕಾರಿಗಳು ನೀರಾವರಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಕೆರೆ ಒತ್ತುವರಿ ತೆರವುಗೊಳಿಸಬೇಕು ರೈತರ ಜೊತೆ ಸಭೆ ನಡೆಸಬೇಕು ಬಾಳೆ ಖರೀದಿದಾರರ ಸಭೆ ನಡೆಸಲಾಗುವುದು ಗುಣಮಟ್ಟದ ಕೃಷಿ ಪರಿಕರ ಬಿತ್ತನೆ ಬೀಜ ರಸಗೊಬ್ಬರ ಪೂರೈಸಬೇಕು ವಿದ್ಯುತ್ ಗುತ್ತಿಗೆದಾರರಿಂದ ಆಗುತ್ತಿರುವ ತೊಂದರೆ ನಿವಾರಿಸಬೇಕು ಸಾರಿಗೆ ಅಧಿಕಾರಿಗಳು ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿ ಅಗತ್ಯವಿರುವೆಡೆ ಬಸ್ ಓಡಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.