ADVERTISEMENT

ಬಂಡೀಪುರ: ರೈತರ ಮೇಲೆ ದಾಳಿ ಮಾಡಿದ ಹುಲಿ ಸೆರೆ, ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 5:53 IST
Last Updated 3 ಜುಲೈ 2022, 5:53 IST
ಸೆರೆಯಾಗಿರುವ ಹುಲಿ
ಸೆರೆಯಾಗಿರುವ ಹುಲಿ    

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಲಕ್ಕಿಪುರ ಗ್ರಾಮದಲ್ಲಿ ರೈತರ ಮೇಲೆ ದಾಳಿ ನಡೆಸಿದ್ದ, ಹಸುವೊಂದನ್ನು ಕೊಂದಿದ್ದ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ.

ಲಕ್ಕಿಪುರ ಗ್ರಾಮಕ್ಕೆ ಹೊಂದಿಕೊಂಡಂತಿರುವ ಶಿವಬಸಪ್ಪ ಎಂಬುವವರ ಬಾಳೆ ತೋಟದಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆಗೆ ಭಾನುವಾರ ಮಳೆಯ ನಡುವೆಯೇ ಬೆಳಿಗ್ಗೆ 6 ಗಂಟೆಗೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.

ಅಭಿಮನ್ಯು ಹಾಗೂ ಶ್ರೀಕಂಠ ಎಂಬ ಸಾಕಾನೆಗಳ ನೆರವಿನಿಂದಪತ್ತೆ ಕಾರ್ಯ ಆರಂಭಿಸಿದ ಸಿಬ್ಬಂದಿ, ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹೊಡೆದು, ಪ್ರಜ್ಞೆ ತಪ್ಪಿಸಿ ಸೆರೆ ಹಿಡಿದಿದ್ದಾರೆ.

ADVERTISEMENT

ಹೆಣ್ಣು ಹುಲಿಯಾಗಿದ್ದು ಅಂದಾಜು 10 ವರ್ಷ ವಯಸ್ಸಾಗಿದೆ. ಹುಲಿಯ ಎಡಕಾಲಿನಲ್ಲಿ ಗಾಯದ ಗುರುತು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 6ರಿಂದ 9 ಗಂಟೆಗಳ ವರೆಗೆ ಬಾಳೆ ತೋಟದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅರಿವಳಿಕೆ ನೀಡಿದಾಗ ಹುಲಿ ನಿತ್ರಾಣಗೊಂಡಿತ್ತು. ಬಳಿಕ ಬಲೆಯ ಮೂಲಕ ಹಿಡಿದು ಬೋನಿಗೆ ಹಾಕಲಾಯಿತು. ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿ ಇರುವ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ಎಸಿಎಫ್ ನವೀನ್, ಆರ್ ಎಫ್ ಒ ನವೀನ್ ಕುಮಾರ್‌ ಇತರರು ಇದ್ದರು.

ಅರಣ್ಯ ಇಲಾಖೆಯ ಸಿಬ್ಬಂದಿಹುಲಿಯನ್ನು ಸೆರೆ ಹಿಡಿದ ಸಂದರ್ಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.