ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಾರದು, ಟನ್ ಕಬ್ಬಿಗೆ 5,000 ದರ ನಿಗದಿ ಮಾಡಬೇಕು, ಹಾಲಿನ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೇರಳ ಸರ್ಕಾರ ಹಾಗೂ ವೈನಾಡು ಸಂಸದೆ ಪ್ರಿಯಾಂಕಾ ವಾದ್ರಾ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಬಂಡೀಪುರ ಅರಣ್ಯದ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಕಾಡುಪ್ರಾಣಿಗಳ ವಿನಾಶಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಚಟುವಟಿಕೆಗಳು ಹೆಚ್ಚಾಗಲಿವೆ. ಅರಣ್ಯ ಸಂಪತ್ತು ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಕಬ್ಬುಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪ್ರಸಕ್ತ ಸಾಲಿಗೆ ಟನ್ ಕಬ್ಬಿಗೆ 5,000 ನಿಗದಿ ಮಾಡಬೇಕು, ಇಳುವರಿಯಲ್ಲಿ ಆಗುತ್ತಿರುವ ಮೋಸ ತಪ್ಪಿಸಲು ತಜ್ಞರು ಹಾಗೂ ರೈತ ಮುಖಂಡರ ತಾಂತ್ರಿಕ ಸಮಿತಿ ನೇಮಕ ಮಾಡಬೇಕು, ತೂಕದಲ್ಲಿನ ಮೋಸ ತಡೆಯಲು ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಆನ್‌ಲೈನ್ ಗೇಮ್‌ಗಳ ಹಾವಳಿ ಹೆಚ್ಚಾಗಿದ್ದು ಯುವಕರು ಹಣ ಕಳೆದುಕೊಂದು ಸಾವಿಗೆ ಶರಣಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಗೇಮ್ ಎಂಬ ಕ್ಯಾನ್ಸರ್ ಗ್ರಾಮೀಣ ಭಾಗದಲ್ಲಿ ಮಾರಣ ಹೋಮಕ್ಕೆ ಕಾರಣವಾಗಲಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಂಪೂರ್ಣ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
ಮಲಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಿನ್ನದ ಅವ್ಯವಹಾರದಲ್ಲಿ ಮೋಸಹೋಗಿದ್ದ ಕೆಲವು ರೈತರಿಗೆ ಮಾತ್ರ ಚಿನ್ನ ಬಿಡಿಸಿಕೊಡಲಾಗಿದ್ದು ಬಾಕಿ ರೈತರಿಗೆ ಚಿನ್ನ ದೊರೆತಿಲ್ಲ. ಕಾನೂನು ತೊಡಕು ನಿವಾರಿಸಿ ಚಿನ್ನ ಕೊಡಿಸಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು, ₹ 800 ಕೋಟಿ ಬಾಕಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹಾಲಿನ ದರ ಹೆಚ್ಚಿನ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹಾಕಿರುವ ಸರ್ಕಾರ ದರ ಏರಿಕೆಯ ಲಾಭವನ್ನು ಹೈನುಗಾರರಿಗೆ ಕೊಡಬೇಕು, ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು ನಿಲ್ಲಿಸಬೇಕು, ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು ಎಂದು ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿಪೂಜೆ, ಉದ್ಘಾಟನಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಬೇಕು, ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ನಡೆಸುವುದಾಗಿ ಕಾಲಹರಣ ಮಾಡುವುದನ್ನು ನಿಲ್ಲಿಸಬೇಕು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ರಾಜ್ಯ ಸಂಚಾಲಕ ಹನುಮಯ್ಯ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮುಖಂಡ ಪ್ರಕಾಶ್ ಗಾಂಧಿ, ಜಿಲ್ಲಾ ಉಪಾಧ್ಯಕ್ಷ ಮಲಿಯೂರು ಮಹೇಂದ್ರ, ಊರ್ದಳ್ಳಿ ರಾಮಣ್ಣ, ಗುರುವಿನಪುರ ಮೋಹನ್ ಚಂದ್ರ, ಕೆರೆಹುಂಡಿ ಶಿವಣ್ಣ, ಸ್ಯಾಂಡ್ರಳ್ಳಿ ಬಸವರಾಜ್ ಮಲ್ಲು, ಅರಳಿಕಟ್ಟೆ ಪ್ರಭುಸ್ವಾಮಿ, ಮಹದೇವಪ್ಪ, ಹೊನ್ನವಳಿ ಬಸವಣ್ಣ, ಕಿಳ್ಳಿಳ್ಳಿಪುರ ನಂದೀಶ್, ಶ್ರೀಕಂಠ ಹರವೆ, ಶಿವಪಾದಣ್ಣ ಹರವೆ, ಮಂಚಳ್ಳಿ ಮಣಿಕಂಠ ಪ್ರತಿಭಟನೆಯಲ್ಲಿ ಇದ್ದರು.
Highlights - ರೈತರ ಬೆಳೆಗಳಿಗೆ ಎಂಎಸ್‌ಪಿ ಕಾನೂನು ಜಾರಿಗೊಳಿಸಿ ಆನ್‌ಲೈನ್ ಗೇಮ್: ದಾರಿ ತಪ್ಪುತ್ತಿರುವ ಯುವಜನತೆ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಾಲದ ಹೊರೆ: ಆತ್ಮಹತ್ಯೆ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.