ಚಾಮರಾಜನಗರ: ಮೈಸೂರು ಜಿಲ್ಲೆಯ ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೆ ಐವರಲ್ಲಿ ಕೋವಿಡ್ -19 ದೃಢಪಟ್ಟಿರುವುದು ಜಿಲ್ಲೆಯ ಜನರಲ್ಲೂ ಆತಂಕ ಮೂಡಿಸಿದೆ. ಈ ಪೈಕಿ ನಾಲ್ವರು ನಂಜನಗೂಡಿನ ಪಟ್ಟಣದವರೇ ಆಗಿರುವುದು ಭಯವನ್ನು ಇನ್ನಷ್ಟು ಹೆಚ್ಚಿಸಿದೆ.
ಜಿಲ್ಲೆಯ ಹಲವರು ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು,ಭಾನುವಾರದವರೆಗೆ ಜಿಲ್ಲಾಡಳಿತ 35 ಮಂದಿಯನ್ನು ಗುರುತಿಸಿ ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನಿಗಾ ಘಟಕದಲ್ಲಿ ಇರಿಸಿದೆ.
ಕಾರ್ಖಾನೆಯಲ್ಲಿ ಸೋಂಕು ತಗುಲಿಸಿಕೊಂಡಿರುವವರು ಜಿಲ್ಲೆಯ ಉದ್ಯೋಗಿಗಳೊಂದಿಗೆನೇರ ಸಂಪರ್ಕ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಜಿಲ್ಲೆಯಲ್ಲಿ ನೇರ ಸಂಪರ್ಕ ಸಾಧಿಸಿದವರು ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ ಎಂದು ಗೊತ್ತಾಗಿದೆ.
‘ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಎಲ್ಲ ಉದ್ಯೋಗಿಗಳ ಪಟ್ಟಿಯನ್ನು ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಕೇಳಿದ್ದೇವೆ. ಅದರ ಆಧಾರದಲ್ಲಿ ನಮ್ಮ ಜಿಲ್ಲೆಯವರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಸದ್ಯ ವಿಶೇಷ ನಿಗಾ ಘಟಕದಲ್ಲಿರುವ ಯಾರಲ್ಲೂ ರೋಗ ಲಕ್ಷಣ ಕಂಡು ಬಂದಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ನಂಜನಗೂಡು ಪಟ್ಟಣ ಜಿಲ್ಲಾ ಕೇಂದ್ರದಿಂದ 37 ಕಿ.ಮೀ ದೂರದಲ್ಲಿದ್ದು, ಜನರು ಪಟ್ಟಣದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಅಲ್ಲಿನ ನಾಲ್ವರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಜಿಲ್ಲೆಯ ಜನರು ಹೆದರಿದ್ದಾರೆ. ಇದುವರೆಗೂ, ‘ನಮ್ಮಲ್ಲಿ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದ ಜನರು, ಈಗ ನಮ್ಮ ಊರಿಗೆ ಹತ್ತಿರದವರೆಗೆ ತಲುಪಿದೆ’ ಎಂದು ಮಾತನಾಡಿಕೊಳ್ಳುವುದಕ್ಕೆ ಆರಂಭಿಸಿದ್ದಾರೆ.
ಭಯ ಹುಟ್ಟುಹಾಕಿದ ಜ್ವರ
ಈ ಮಧ್ಯೆ, ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೀಚನಹಳ್ಳಿಯಲ್ಲಿ ಕೆಲರಲ್ಲಿ ಕಂಡು ಬಂದಿದ್ದ ಜ್ವರ ತೀವ್ರ ಆತಂಕ ಸೃಷ್ಟಿಸಿತ್ತು.
ಕರ್ನಾಟಕ ಕೇರಳ ಗಡಿಭಾಗದಲ್ಲಿ, ಅರಣ್ಯದ ಅಂಚಿನಲ್ಲಿರುವ ಈ ಊರಿನಲ್ಲಿ 40 ಮನೆಗಳಿವೆ. ಇಲ್ಲಿನ ನಿವಾಸಿಗಳಲ್ಲಿ ಕೆಲವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಸ್ಥಳೀಯರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದು, ವೈದ್ಯರು ಹಾಗೂ ಸಿಬ್ಬಂದಿ ತಕ್ಷಣ ಊರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ನಾಲ್ಕೈದು ಜನರಲ್ಲಿ ಜ್ವರ ಕಂಡು ಬಂದಿದೆ. ಒಬ್ಬರು ಟೈಫಾಯ್ಡ್‌ನಿಂದಲೂ ಬಳಲುತ್ತಿದ್ದಾರೆ ಎಂದು ಪರೀಕ್ಷೆ ವೇಳೆ ಗೊತ್ತಾಗಿದೆ.
‘ಊರಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿನ ಜನರಲ್ಲಿ ಕಂಡು ಬಂದಿರುವ ಜ್ವರಕ್ಕೂ ಕೊರೊನಾ ವೈರಸ್‌ಗೂ ಯಾವುದೇ ಸಂಬಂಧ ಇಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.