ADVERTISEMENT

ಹಿಂದುಳಿದವರಿಗೆ ಕಾನೂನು ನೆರವು: ನ್ಯಾಯಾಧೀಶೆ ಎಂ.ಟಿ.ದೀಪು

ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಎಂ.ಟಿ.ದೀಪು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:54 IST
Last Updated 11 ನವೆಂಬರ್ 2025, 1:54 IST
ಗುಂಡ್ಲುಪೇಟೆಯ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಟಿ.ದೀಪು ಉದ್ಘಾಟಿಸಿದರು
ಗುಂಡ್ಲುಪೇಟೆಯ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಟಿ.ದೀಪು ಉದ್ಘಾಟಿಸಿದರು   
ಪ್ರತಿಯೊಬ್ಬರಿಗೂ ಕಾನೂನಿನ ತೊಡಕು ಬಡವರಿಗೂ ನ್ಯಾಯ ದೊರಕಿಸುವ ಆಶಯ

ಗುಂಡ್ಲುಪೇಟೆ: ‘ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ನೆರವು ನೀಡಲಾಗುತ್ತದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಟಿ.ದೀಪು ಹೇಳಿದರು.

ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲುಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕೆ.ಎಸ್.ನಾಗರತ್ನಮ್ಮ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ವರ್ಷ ನ.9ರಂದು ಕಾನೂನು ಸೇವಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಾನೂನಿನಲ್ಲಿ ಇರುವ ಪರಿಹಾರ ಪಡೆದುಕೊಳ್ಳಬೇಕಾದರೆ, ನಾವು ನ್ಯಾಯಾಲಯಕ್ಕೆ ಹೋಗಬೇಕಾದರೆ ಕೆಲವು ನೀತಿ ನಿಬಂಧನೆ ಇರುತ್ತವೆ. ಅದಕ್ಕೆ ವಕೀಲರ ಬಳಿ ಹೋಗಬೇಕಾಗುತ್ತದೆ. ಆದರೆ ಆರ್ಥಿಕವಾಗಿ ವಕೀಲರನ್ನು ನೇಮಿಸಿಕೊಳ್ಳದೆ ಇರುವವರಿಗೆ ಸರ್ಕಾರದಿಂದ ಉಚಿತ ವಕೀಲರ ನೇಮಕ ಮಾಡಲಾಗುತ್ತದೆ’ ಎಂದರು.

ADVERTISEMENT

‘ಪ್ರತಿ ತಾಲ್ಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿ ಕಚೇರಿಯಿದ್ದು, ಅರ್ಜಿ ಸಲ್ಲಿಸಿದರೆ ಅವರ ಸಮಸ್ಯೆ ಬಗ್ಗೆ ತಿಳಿ ಹೇಳಿ ಅಗತ್ಯ ಬಿದ್ದರೆ ವಕೀಲರ ನೇಮಕ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ತೊಡಕು ಉಂಟಾಗುತ್ತಿದ್ದು, ಅವರ ಹಕ್ಕು ಮತ್ತು ಸೇವೆ ಪಡೆದುಕೊಳ್ಳಲು ಸಮಸ್ಯೆ ಉಂಟಾದಾಗ ಯಾವ ರೀತಿ ಪಡೆದುಕೊಳ್ಳಬಹುದು ಎಂಬುದು ತಿಳಿಸಲಾಗುತ್ತದೆ’ ಎಂದು ಹೇಳಿದರು.

‘ಕಾನೂನು ಸೇವಾ ಸಮಿತಿ ಮುಖ್ಯ ಉದ್ದೇಶ ಎಲ್ಲರೂ ಸಮಾನವಾಗಿರಬೇಕು. ಹಣವಂತರು ಮಾತ್ರ ವಕೀಲರನ್ನು ನೇಮಿಸಿ ನ್ಯಾಯ ಪಡೆದುಕೊಳ್ಳುವುದಲ್ಲ, ಬಡವರಿಗೂ ನ್ಯಾಯ ದೊರೆಯಬೇಕು ಎನ್ನುವುದು ಸಮಿತಿಯ ಆಶಯ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾವು ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಇದರ ವಿರುದ್ಧ ಯಾವುದಾದರೂ ಕಾನೂನು ಬಂದರೆ ಅದನ್ನು ವಜಾ ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಯಾವುದೇ ಜಾತಿ, ಧರ್ಮ ನೋಡದೆ ಸಂವಿಧಾನದ ಅನುಸಾರವಾಗಿ ನಡೆದುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದರು.

ವಕೀಲರಾದ ಅರವಿಂದ್, ದೇವರಾಜು, ಕಾಲೇಜಿನ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.