ADVERTISEMENT

ಬಿಳಿಗಿರಿ ರಂಗನಬೆಟ್ಟ ದೇವಾಲಯದ ಹಿಂಭಾಗದ ಕಮರಿಯಲ್ಲಿ ಗಾಂಜಾ ಗಿಡಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 15:39 IST
Last Updated 16 ಸೆಪ್ಟೆಂಬರ್ 2020, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಕಮರಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವುದನ್ನು ಬುಧವಾರ ಸಂಜೆ ಪತ್ತೆ ಹಚ್ಚಿರುವ ಪೊಲೀಸರು, 65 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಅಪರಾಧ ವಿಭಾಗದ (ಡಿಸಿಎಬಿ) ಇನ್‌ಸ್ಪೆಕ್ಟರ್‌ ಮಹದೇಶವಶೆಟ್ಟಿ ಕೆ.ಎಂ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 65 ಗಿಡಗಳನ್ನು ತೆರವುಗೊಳಿಸಿ, 13 ಕೆಜಿಗಳಷ್ಟು ಗಾಂಜಾ ಸೊಪ್ಪು ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಹದೇವಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಾರ್ವಜನಿಕರೊಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ, ಯಳಂದೂರು ತಹಶೀಲ್ದಾರ್‌ ಸುದರ್ಶನ್‌ ಅವರ ಸಮ್ಮುಖದಲ್ಲಿಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್‌ ಸಿಬ್ಬಂದಿ ಲೋಕೇಶ್‌ ಆರ್‌., ಸಿದ್ದಮಲ್ಲ ಶೆಟ್ಟಿ, ಪ್ರಸನ್ನ, ಎಚ್‌.ಶಿವಕುಮಾರ್‌, ಚಾಲಕ ಮಹೇಶ್‌ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.