ADVERTISEMENT

ಮುಡಿಗೇರದ ಘಮಘಮ ಮರಳೆ, ಮಲ್ಲಿಗೆ ಹೂ: ಸರ್ಕಾರದ ನೆರವಿನ ನಿರೀಕ್ಷೆ

ಹೂ ಕಟ್ಟುವವರ ಬದುಕು ಅತಂತ್ರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 3:02 IST
Last Updated 1 ಜೂನ್ 2021, 3:02 IST
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಸೋಮವಾರ ಹೂ ಕಟ್ಟುವ ಕಾಯಕದಲ್ಲಿ ತೊಡಗಿದ್ದ ಮಹಿಳೆಯರು
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಸೋಮವಾರ ಹೂ ಕಟ್ಟುವ ಕಾಯಕದಲ್ಲಿ ತೊಡಗಿದ್ದ ಮಹಿಳೆಯರು   

ಯಳಂದೂರು: ‘ಬಗೆಬಗೆಯ ಹೂಗಳನ್ನು ಕಟ್ಟುತ್ತ ದಿನಪೂರ್ತಿ ದುಡಿದರೂ ನೂರು ರೂಪಾಯಿ ಕೈ ಸೇರುವುದಿಲ್ಲ. ನೂರಾರು ಮೀಟರ್‌ಗೆ ಬೇಡಿಕೆ ಇದ್ದ ದಿನಗಳು ಕಳೆದುಹೋಗಿವೆ. ಹೂ ಮತ್ತು ಮಾಲೆ ಕೇಳುವರೇ ಇಲ್ಲ. ಲಾಕ್‌ಡೌನ್‌ ಬಳಿಕ ಹೂ ಕಟ್ಟಿ ಬದುಕು ಕಟ್ಟಿಕೊಂಡಿದ್ದ ಬಹುತೇಕ ಮಹಿಳೆಯರು ಆದಾಯ ಇಲ್ಲದೆ ಕೊರಗುವಂತಾಗಿದೆ’ ಎಂದು ಮದ್ದೂರಿನ ಕಾಳಮ್ಮ ಅಳಲು ತೋಡಿಕೊಂಡರು.

ಹೂ ಕಟ್ಟಿ, ಮಾರಾಟ ಮಾಡುತ್ತ ಅದರಿಂದ ಬರುವ ಆದಾಯದಲ್ಲೇ ಬದುಕುವ ನೂರಾರು ಮಹಿಳೆಯರು ಪ್ರತಿ ಗ್ರಾಮದಲ್ಲೂ ಇದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿದ್ದಂತೆ ಅವರ ವ್ಯಾಪಾರವೂ ತಗ್ಗಿದೆ. ದಿನಕ್ಕೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದ ಕೈಗಳು ಈಗ ವರಮಾನ ಇಲ್ಲದೆ ಸೊರಗಿವೆ. ಹೂ ಕೇಳುವವರು ಮತ್ತು ಮದುವೆ, ಪೂಜೆ, ಹೊಸಮನೆಗೆ ಮುಂಗಡ ನೀಡಿ ನೂರಾರು ಮೀಟರ್ ಹೂ ಮತ್ತು ಹಾರ ಕಾಯ್ದಿರಿಸುತ್ತಿದ್ದರು. ಆದರೆ ಈಗ ಕಾರ್ಯಕ್ರಮಗಳು ಇಲ್ಲದೆ ಇರುವುದರಿಂದ ಅವರಿಗೆ ಆದಾಯವೇ ಇಲ್ಲ.

ಸ್ಥಳೀಯವಾಗಿ ಕೃಷಿಕರು ಮಲ್ಲಿಗೆ, ಕನಕಾಂಬರ, ಮರಲೆ ಮತ್ತು ಪನ್ನೀರು ಪತ್ರೆ ಬೆಳೆಯುತ್ತಾರೆ. ಇವರಿಂದ ಕೆಜಿ ಲೆಕ್ಕದಲ್ಲಿ ಹೂ ಕೊಂಡು ಮಾಲೆ ಕಟ್ಟುವ ಉದ್ಯೋಗವನ್ನು ಮಹಿಳೆಯರು ಮಾಡುತ್ತಾರೆ. ಮಧ್ಯಾಹ್ನ 3 ಗಂಟೆ ಬಳಿಕ ಮಹಿಳೆಯರು ಒಟ್ಟಾಗಿ 50 ರಿಂದ 100 ಮೀಟರ್ ಹೂ ಕಟ್ಟಿ, ಮಾರನೆ ದಿನ ಮಾರಾಟ ಮಾಡುತ್ತಾರೆ. ಕೆಲವು ಸದಸ್ಯರು ಕೊಳ್ಳೇಗಾಲ ಮತ್ತು ಚಾಮರಾಜನಗರದ ಮಾರುಕಟ್ಟೆಗೂ ಪೂರೈಸುತ್ತಾರೆ. ಕೋವಿಡ್ ನಂತರ ಹೂ ಮಾರಾಟ ಕುಸಿದಿದೆ ಎನ್ನುತ್ತಾರೆ ಮೀನಮ್ಮ.

ADVERTISEMENT

ಪ್ಯಾಕೇಜ್ ಕೊಡಿ: ದಿನಕ್ಕೆ ₹ 500 ಆದಾಯ ಸಾಮಾನ್ಯವಾಗಿತ್ತು. ಹಬ್ಬ ಇಲ್ಲವೇ ವಿಶೇಷ ದಿನಗಳಲ್ಲಿ ₹ 1 ಸಾವಿರದವರೆಗೆ ಆದಾಯ ಸಿಗುತ್ತಿತ್ತು. ಈಗ ₹ 100 ಸಿಕ್ಕರೆ ಸಾಕು ಎಂಬಂತಾಗಿದೆ. ದಿನಕ್ಕೆ 10 ಮೀಟರ್‌ಗಿಂತ ಹೆಚ್ಚು ಬಿಕರಿ ಆಗುತ್ತಿಲ್ಲ. ₹ 30 ರಿಂದ 50 ದರಕ್ಕೆ ಬೇಡಿಕೆ ಇದ್ದ ದಿನಗಳು ಕಳೆದಿವೆ. ಈಗ ಪ್ರತಿ ಮೀಟರ್ ಹೂ ಧಾರಣೆ ₹ 10-20 ಇದೆ. ಸ್ಥಳೀಯ ಮಾರಾಟಕ್ಕೆ ಹೂ ಸೀಮಿತವಾಗಿದ್ದು, ಪಟ್ಟಣಗಳಿಂದ ಬೇಡಿಕೆ ಬರುತ್ತಿಲ್ಲ.

ರಾಜ್ಯದಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೀಡಾದವರಿಗೆ 2ನೇ ಹಂತದ ಪರಿಹಾರದ ಘೋಷಣೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಮಯದಲ್ಲಿ ಹೂ ಕಟ್ಟಿ ಬದುಕುವ ಗ್ರಾಮೀಣ ಮಹಿಳೆಯರ ಸಂಕಷ್ಟಕ್ಕೆ ನೆರವಾಗುವ ಯೋಜನೆ ರೂಪಿಸಬೇಕು ಎನ್ನುತ್ತಾರೆ ನಂಜಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.