ಹನೂರು: ತರಕಾರಿ ಬೆಳೆಗೆ ಸೂಕ್ತ ವಾತಾವರಣ ಹೊಂದಿರುವ ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯಲ್ಲಿ ಈ ಬಾರಿ ರೈತರು ಆಲೂಗಡ್ಡೆ ಕೈಬಿಟ್ಟು ಬೆಳ್ಳುಳ್ಳಿ ಬೆಳೆಯುವತ್ತ ಹೆಚ್ಚು ಆಸಕ್ತಿ ತೋರಿದ್ದಾರೆ. ಹಿಂದೆ ಹೋಬಳಿ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯಲ್ಲಿ ಆವರಿಸಿಕೊಂಡಿದ್ದ ಆಲೂಗೆಡ್ಡೆ ಬೆಳೆಯ ಕ್ಷೇತ್ರದಲ್ಲಿ ಬೆಳ್ಳುಳ್ಳಿ ನಳನಳಿಸುತ್ತಿದೆ.
ತಾಲ್ಲೂಕಿನ ಪಿ.ಜಿ. ಪಾಳ್ಯ, ಹುತ್ತೂರು ಹಾಗೂ ಬೈಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಬೆಳ್ಳುಳಿ ಬೆಳೆಯಲು ಹೆಚ್ಚು ಆಸಕ್ತಿ ತೋರಿದ್ದಾರೆ. ಪರಿಣಾಮ ಹಿಂದೆಲ್ಲ 200 ರಿಂದ 250 ಎಕರೆ ಭೂಮಿಯಲ್ಲಿ ಬೆಳೆಯುತ್ತಿದ್ದ ಬೆಳ್ಳುಳ್ಳಿ ಬೆಳೆ ಪ್ರಸ್ತುತ 700 ಎಕರೆಗೆ ವಿಸ್ತರಣೆಯಾಗಿದೆ. 500 ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಬೆಳೆ ಕೇವಲ 100 ರಿಂದ 200 ಎಕರೆಗೆ ಸೀಮಿತವಾಗಿದೆ.
ಶೀತದ ವಾತಾವರಣದಿಂದ ಕೂಡಿರುವ ಲೊಕ್ಕನಹಳ್ಳಿ ಹೋಬಳಿಯಲ್ಲಿ ರೈತರು ತರಕಾರಿ ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಾರೆ. ತರಕಾರಿ ಬೆಳೆದು ರಫ್ತು ಮಾಡುವಲ್ಲೂ ಹೋಬಳಿ ಹೆಸರುವಾಸಿಯಾಗಿದೆ. ವರ್ಷಪೂರ್ತಿ ಒಂದಿಲ್ಲೊಂದು ತರಕಾರಿಯನ್ನು ಬೆಳೆಯುತ್ತಲೇ ಗಮನ ಸೆಳೆಯುವ ಹೋಬಳಿಯಿಂದ ತಮಿಳುನಾಡಿನ ಮೆಟ್ಟುಪಾಳ್ಯಂ ಸೇರಿದಂತೆ ನೆರೆಯ ರಾಜ್ಯಗಳಿಗೆ ಹೆಚ್ಚಾಗಿ ತರಕಾರಿ ಪೂರೈಕೆಯಾಗುತ್ತದೆ.
ಖುಷ್ಕಿ ಹಾಗೂ ನೀರಾವರಿ ಸೌಲಭ್ಯವಿರುವ ಕೃಷಿ ಭೂಮಿಯಲ್ಲಿ ಹಿಂದೆ ಯತೇಚ್ಛವಾಗಿ ಆಲೂಗೆಡ್ಡೆ ಬೆಳೆಯಲಾಗುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಆಲೂಗಡ್ಡೆ ನಿರೀಕ್ಷಿತ ಇಳುವರಿ ನೀಡದಿರುವುದು ರೈತರು ಫಸಲು ಬದಲಾಯಿಸಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಬಹುತೇಕ ಆಲೂಗಡ್ಡೆ ಬೆಳೆಗಾರರು ಈ ಬಾರಿ ಬೆಳ್ಳುಳ್ಳಿ ಆಯ್ದುಕೊಂಡಿದ್ದಾರೆ.
ಆಲೂಗೆಡ್ಡೆ ಫಸಲು ಕುಸಿತಕ್ಕೆ, ನಷ್ಟವಾಗಲು ಕಳಪೆ ಗುಣಮಟ್ಟದ ಬಿತ್ತನ ಬೀಜ ಕಾರಣ. ರೈತರಿಗೆ ವಿತರಿಸುವ ಬೀಜದ ಗುಣಮಟ್ಟವನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡದಿರುವುದು, ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕದಿರುವುದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸುತ್ತಾರೆ ರೈತ ಮಲ್ಲಪ್ಪ.
ಹನೂರು ಭಾಗದಲ್ಲಿ ನಾಲ್ಕೈದು ವರ್ಷಗಳಿಂದ ರೈತರು ಆಲೂಗೆಡ್ಡೆ ಬೆಳೆದು ಕೈ ಸುಟ್ಟುಕೊಳ್ಳುತ್ತಲೇ ಇದ್ದು, ಈ ಬಾರಿ ಬೇಸೆತ್ತು ಬೆಳ್ಳುಳ್ಳಿಗೆ ಪ್ರಾಶಸ್ತ್ಯ ನೀಡಿದ್ದಾರೆ ಎನ್ನುತ್ತಾರೆ ಪಿ.ಜಿ ಪಾಳ್ಯದ ಸಿದ್ದರಾಜು.
ಆಲೂಗಡ್ಡೆ ಬಿತ್ತನೆ ಬೀಜ ದರ ಏರಿಕೆ: ಪ್ರತಿ ವರ್ಷ 50 ಕೆ.ಜಿ ಚೀಲದ ಆಲೂಗೆಡ್ಡೆ ಬಿತ್ತನೆ ಬೀಜ ₹300 ರಿಂದ ₹400 ದರಕ್ಕೆ ಸಿಗುತ್ತಿತ್ತು. ಈ ಬಾರಿ ₹ 1600 ತಲುಪಿದ್ದು, ಹೆಚ್ಚು ಹಣ ಕೊಟ್ಟರೂ ಗುಣಮಟ್ಟದ ಬಿತ್ತನೆ ಬೀಜ ಸಿಗುತ್ತಿಲ್ಲ. ಹೆಚ್ಚಿನ ಇಳುವರಿಯೂ ಬರುತ್ತದೆ ಎಂಬ ನಂಬಿಕೆ ಇಲ್ಲ. ಕೆಲವು ತಿಂಗಳ ಹಿಂದೆ ಕೆಜಿಗೆ ಬೆಳ್ಳುಳ್ಳಿ ದರ ₹ 500 ತಲುಪಿ ಬೆಳೆಗಾರರಿಗೆ ಉತ್ತಮ ಆದಾಯ ತಂದುಕೊಟ್ಟಿತ್ತು. ಈ ನಿಟ್ಟಿನಲ್ಲಿ ಆಲೂಗಡ್ಡೆ ಬದಲಿಗೆ ಬೆಳ್ಳುಳ್ಳಿ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ.
ಬೆಳ್ಳುಳ್ಳಿಗೆ ರೋಗ: ಬಿತ್ತನೆ ಮಾಡಿರುವ ಬೆಳ್ಳುಳ್ಳಿಗೆ ರೋಗದ ಬಾಧೆ ಕಾಣಿಸಿಕೊಂಡಿದೆ. ರೋಗ ಹತೋಟಿಗೆ ಖಾಸಗಿ ಔಷಧ ಅಂಗಡಿಗಳಲ್ಲಿ ಸಾವಿರಾರು ರೂಪಾಯಿ ವ್ಯಯಿಸಿ ರಾಸಾಯನಿಕ ಸಿಂಪಡಿಸಬೇಕಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿನೀಡಿ ಪರಿಶೀಲಿಸಬೇಕು ಎನ್ನುತ್ತಾರೆ ರೈತ ಸಿದ್ದರಾಜು.
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯಲ್ಲಿ ಬೆಳ್ಳುಳ್ಳಿ ಬೆಳೆಗೆ ಔಷಧಿ ಕೊರತೆ ವಿಚಾರ ಗಮನಕ್ಕೆ ಬಂದಿಲ್ಲ. ಜಮೀನಿಗೆ ಸಿಬ್ಬಂದಿ ಕಳುಹಿಸಿ ಔಷಧಿ ಪೂರೈಕೆಗೆ ಕ್ರಮವಹಿಸಲಾಗುವುದು.– ಶಿವಪ್ರಸಾದ್, ಉಪನಿರ್ದೇಶಕ ತೋಟಗಾರಿಕೆ ಇಲಾಖೆ
650 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ 2022-23ನೇ ಸಾಲಿನಲ್ಲಿ ಲೊಕ್ಕನಹಳ್ಳಿ ಹೋಬಳಿಯಲ್ಲಿ 210 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಹಾಗೂ 700 ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗಿತ್ತು. 2023-24ರಲ್ಲಿ 113 ಹೆಕ್ಟೇರ್ ಬೆಳ್ಳುಳ್ಳಿ ಹಾಗೂ 549 ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬೆಳೆಯಲಾಗಿತ್ತು. ಪ್ರಸ್ತುತ ಅಂದಾಜು 150 ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ 650 ಹೆಕ್ಟೇರ್ ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳ್ಳುಳ್ಳಿಯನ್ನು ಬಿತ್ತನೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.