ADVERTISEMENT

ಚಾಮರಾಜನಗರ: ರೈತರಲ್ಲಿ ಮಂದಹಾಸ, ಗರಿಗೆದರಿದ ಕೃಷಿ ಚಟುವಟಿಕೆ

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ, ಬಿತ್ತನೆ ಬೀಜಕ್ಕಾಗಿ ಸರತಿ ಸಾಲು

ಸೂರ್ಯನಾರಾಯಣ ವಿ
Published 10 ಏಪ್ರಿಲ್ 2020, 19:45 IST
Last Updated 10 ಏಪ್ರಿಲ್ 2020, 19:45 IST
ಗುಂಡ್ಲುಪೇಟೆಯ ರೈತ ಸಂಪರ್ಕ ಕೇಂದ್ರವೊಂದರಲ್ಲಿ ಗುರುವಾರ ಬಿತ್ತನೆ ಬೀಜ ಖರೀದಿಗಾಗಿ ಸಾಲುಗಟ್ಟಿದ್ದ ರೈತರು
ಗುಂಡ್ಲುಪೇಟೆಯ ರೈತ ಸಂಪರ್ಕ ಕೇಂದ್ರವೊಂದರಲ್ಲಿ ಗುರುವಾರ ಬಿತ್ತನೆ ಬೀಜ ಖರೀದಿಗಾಗಿ ಸಾಲುಗಟ್ಟಿದ್ದ ರೈತರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ನಿಧಾನವಾಗಿ ಆರಂಭವಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಕೊರೊನಾ ವೈರಸ್‌ ಭೀತಿಯ ನಡುವೆಯೂ ಕೃಷಿ ಚಟುವಟಿಕೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಬಿತ್ತನೆ ಬೀಜ, ರಸಗೊಬ್ಬರ ಖರೀದಿಗಾಗಿ ರೈತ ಸಂಪರ್ಕ ಕೇಂದ್ರಗಳು, ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಎಡತಾಕುತ್ತಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣದ ಕಾರಣಕ್ಕೆ ಹೇರಲಾಗಿರುವ ದಿಗ್ಬಂಧನದ ಕಾರಣಕ್ಕೆ ರೈತ ಸಂಪರ್ಕ ಕೇಂದ್ರಗಳು ಕೆಲವು ದಿನಗಳು ಸ್ಥಗಿತವಾಗಿದ್ದವು. ಈಗ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕೇಂದ್ರಗಳನ್ನು ತೆರೆಯಲಾಗಿದೆ. ಬಹುತೇಕ ಎಲ್ಲ ಕೇಂದ್ರಗಳಲ್ಲಿ ರೈತರು ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ.

ADVERTISEMENT

‘ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದ ಬಿತ್ತನೆ ಬೀಜ ವಿತರಣೆಗೆ ಸ್ವಲ್ಪ ತೊಂದರೆಯಾಗಿತ್ತು. ಈಗ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಾಯವನ್ನು ಪಡೆಯಲಾಗಿದ್ದು, ಕೆಲಸ ಸರಾಗವಾಗಿ ನಡೆಯುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತಮ ಮಳೆ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಂದಿದೆ. ಏಪ್ರಿಲ್‌ 4ರಿಂದ 10ರವರೆಗೆ ಜಿಲ್ಲೆಯಾದ್ಯಂತ 3.1 ಸೆಂ.ಮೀ (31 ಮಿ.ಮೀ) ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 1.1 ಸೆಂ.ಮೀ, ಗುಂಡ್ಲುಪೇಟೆಯಲ್ಲಿ 4.3 ಸೆಂ.ಮೀ, ಕೊಳ್ಳೇಗಾಲ ತಾಲ್ಲೂಕಿನಲ್ಲಿ 3.0 ಸೆಂ.ಮೀ, ಯಳಂದೂರಿನಲ್ಲಿ 2.6 ಸೆಂ.ಮೀ ಮಳೆ ಬಿದ್ದಿದೆ.ಸಾಮಾನ್ಯವಾಗಿ ಈ ಅವಧಿಯಲ್ಲಿ 1.1 ಸೆಂ.ಮೀ ಮಳೆಯಾಗಿದೆ.

ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಯನ್ನು ಮುಂಗಾರು ಪೂರ್ವ ಅವಧಿ ಎಂದು ಗುರುತಿಸಲಾಗುತ್ತದೆ. ಮಾರ್ಚ್‌1ರಿಂದ ಏಪ್ರಿಲ್‌ 10ರ ನಡುವಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ 2.4 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 5.4 ಸೆಂ.ಮೀ ಮಳೆ ಬಿದ್ದಿದೆ.

ಜನವರಿ 1ರಿಂದ ಏಪ್ರಿಲ್‌ 10ರ ನಡುವೆ ಈ ಬಾರಿ 5.5 ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ 3.2 ಸೆಂ.ಮೀ ಮಳೆ ಸುರಿಯುತ್ತದೆ.

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಬಹುತೇಕ ರೈತರು ಕೃಷಿಗಾಗಿ ಮಳೆಯನ್ನೇ ನಂಬಿದ್ದಾರೆ. ಮುಂಗಾರಿಗೂ ಮೊದಲು ಸುರಿಯುವ ಮಳೆಗೆ ರೈತರು ಜೋಳ, ಉದ್ದು, ಹೆಸರು, ಅಲಸಂದೆ, ನೆಲಗಡಲೆ, ಎಳ್ಳು, ಸೂರ್ಯಕಾಂತಿ ಮತ್ತು ಹತ್ತಿ ಬಿತ್ತನೆ ಮಾಡುತ್ತಾರೆ. ಈ ವರ್ಷ ಕೃಷಿ ಇಲಾಖೆಯು ಈ ಅವಧಿಯಲ್ಲಿ 55 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

‘ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದು’
ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಬಿತ್ತನೆ ಬೀಜ ಹಾಗೂ ರಸರೊಬ್ಬರಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಹಾಗಾಗಿ ಕೊರತೆಯಾಗದು ಎಂದು ಚಂದ್ರಕಲಾ ಅವರು ತಿಳಿಸಿದರು.

ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳು ಹಾಗೂ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಸೇರಿದಂತೆ 52 ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕೆಓಎಫ್ ಮತ್ತು ಖಾಸಗಿ ಸಂಸ್ಥೆಗಳಿಗೆ ಈಗಾಗಲೇವಿವಿಧ ಬೆಳೆಗಳ 5,380 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಿಗೆ ಬೇಡಿಕೆ ಸಲ್ಲಿಸಲಾಗಿದೆ. ಈವರೆಗೆ ಜೋಳ 68.4 ಕ್ವಿಂಟಲ್, ಹೆಸರು 78.8 ಕ್ವಿಂಟಲ್, ಉದ್ದು 57.9 ಕ್ವಿಂಟಲ್, ನೆಲಗಡಲೆ 135 ಕ್ವಿಂಟಲ್ ಮತ್ತು ಸೂರ್ಯಕಾಂತಿ 133 ಕ್ವಿಂಟಲ್ ಸೇರಿದಂತೆ 473.10 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಾಗಿದ್ದು, 108.8 ಕ್ವಿಂಟಲ್ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಸದ್ಯ 5713 ಟನ್‌ ರಸಗೊಬ್ಬರ ದಾಸ್ತಾನು ಇದೆ. ಏಪ್ರಿಲ್‌ನಲ್ಲಿ 5310 ಟನ್‌ ಸರಬರಾಜು ಗುರಿ ಹೊಂದಲಾಗಿದೆ.ರಸಗೊಬ್ಬರ ಕೊರತೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಚಂದ್ರಕಲಾ ಅವರು ಹೇಳಿದರು.

**

ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸ್ಯಾನಿಟೈಸರ್‌ ಪೂರೈಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.
-ಎಚ್‌.ಟಿ.ಚಂದ್ರಕಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.