ADVERTISEMENT

ಮಹದೇಶ್ವರ ವನ್ಯಧಾಮ: ಪಿ.ಜಿ.ಪಾಳ್ಯ ಸಫಾರಿಗೆ ಉತ್ತಮ ಸ್ಪಂದನೆ

ತಿಂಗಳಲ್ಲಿ 575 ಪ್ರವಾಸಿಗರ ಭೇಟಿ, ₹1.92 ಲಕ್ಷ ಆದಾಯ

ಬಿ.ಬಸವರಾಜು
Published 11 ಜನವರಿ 2024, 8:01 IST
Last Updated 11 ಜನವರಿ 2024, 8:01 IST
ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯದಲ್ಲಿ ಸಫಾರಿಗೆ ಹೊರಟ ಪ್ರವಾಸಿಗರು
ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯದಲ್ಲಿ ಸಫಾರಿಗೆ ಹೊರಟ ಪ್ರವಾಸಿಗರು   

ಹನೂರು: ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಆರಂಭವಾಗಿರುವ ಸಫಾರಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಸಫಾರಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. 

ಡಿ.2ರಂದು ಸಫಾರಿಗೆ ಚಾಲನೆ ನೀಡಲಾಗಿತ್ತು. ಸತ್ಯಮಂಗಲ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವಲಯ ಹಲವು ವನ್ಯಪ್ರಾಣಿಗಳಿಗೆ ಆಶ್ರಯತಾಣವಾಗಿದೆ. ಹುಲಿ, ಚಿರತೆ, ಆನೆ, ಕರಿಚಿರತೆ, ಕೊಂಡು ಕುರಿ, ಕಡವೆ, ರಣಹದ್ದುಗಳು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಸಂಕಲಗಳು ಪ್ರವಾಸಿಗರಿಗೆ ದರ್ಶನಕೊಡುತ್ತಿವೆ. 

ಒಂದು ತಿಂಗಳು, ಒಂದು ವಾರದ ಅವಧಿಯಲ್ಲಿ ಇಲ್ಲಿಯವರೆಗೆ 575 ಪ್ರವಾಸಿಗರು ಹಾಗೂ 60 ವಿದ್ಯಾರ್ಥಿಗಳು ಸಫಾರಿ ಮಾಡಿದ್ದಾರೆ. ಸ್ಥಳೀಯರಲ್ಲದೆ ಬೆಂಗಳೂರು, ಮೈಸೂರು, ತಮಿಳುನಾಡು, ಮಂಡ್ಯ ಜಿಲ್ಲೆಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಕೂಡ ಬಂದು ಕಾಡು ಸುತ್ತಾಟದ ಅನುಭವ ಪಡೆಯುತ್ತಿದ್ದಾರೆ. 

ADVERTISEMENT
ಪ್ರವಾಸಿಗರಿಗೆ ದರ್ಶನ ನೀಡುವ ಜಿಂಕೆಗಳ ಹಿಂಡು

18 ಕಿ.ಮೀ ವ್ಯಾಪ್ತಿಯಲ್ಲಿ ಸಫಾರಿ ನಡೆಸಲಾಗುತ್ತಿದೆ. ಈ ಪ್ರದೇಶ ಸಮತಟ್ಟಾಗಿರುವುದರಿಂದ ಹೆಚ್ಚು ಪ್ರಾಣಿಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ  ದೊಡ್ಡ ಮಟ್ಟದಲ್ಲಿ ಸಫಾರಿ ಅಭಿವೃದ್ಧಿಯಾಗಲಿದೆ’ ಎಂದು ಬೀಟ್ ಫಾರೆಸ್ಟರ್ ವಿಠ್ಠಲ್ ಶಿರಗಾಂವಿ‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿನಿತ್ಯ ಎರಡು ಅವಧಿಯಲ್ಲಿ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ರಿಂದ 7:30 ಮತ್ತು 7:30 ರಿಂದ  9 ಗಂಟೆವರೆಗೆ, ಸಂಜೆ 3 ರಿಂದ 4.30 ಮತ್ತು 4.30ರಿಂದ 6 ರವರೆಗೆ ಸಫಾರಿ ಮಾಡಬಹುದಾಗಿದೆ. ವಯಸ್ಕರಿಗೆ ₹400 ಹಾಗೂ ಮಕ್ಕಳಿಗೆ ₹200 ಹಾಗೂ ವಾಹನ ಶುಲ್ಕ ₹100 ದರ ನಿಗದಿ ಪಡಿಸಲಾಗಿದೆ.

ಸಫಾರಿಗೆ ಹೋಗಿದ್ದವರ ಕ್ಯಾಮೆರಾದಲ್ಲಿ ಸೆರೆಯಾದ ಗಜರಾಜ
‘₹1.92 ಲಕ್ಷ ಆದಾಯ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌ ‘ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಈಗ ಎರಡು ವಾಹನಗಳಿವೆ. ಇನ್ನೂ ಎರಡು ವಾಹನಗಳನ್ನು ಬಿಡುವಂತೆ ಪ್ರವಾಸಿಗರಿಂದ ಒತ್ತಾಯ ಕೇಳಿ ಬಂದಿದೆ’ ಎಂದರು.  ‘ಡಿ.2ರಿಂದ ಜ.10ರವರೆಗೆ ₹1.92 ಲಕ್ಷ ಆದಾಯ ಬಂದಿದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಬರುವ ಪ್ರವಾಸಿಗರಿಗೆ ಮತ್ತಷ್ಟು ಮೂಲಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.