
ಗುಂಡ್ಲುಪೇಟೆ: ವರ್ಷಾಂತ್ಯ ಹಿನ್ನೆಲೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಗೋಪಾಲಸ್ವಾಮಿ ಬೆಟ್ಟಕ್ಕೆ ಸೋಮವಾರದಂದು ಜನಸಾಗರವೇ ಹರಿದು ಬಂದಿತ್ತು. ಅಧಿಕ ಮಂದಿ ಅಯ್ಯಪ್ಪ ಮಾಲಾಧಾರಿಗಳು ಆಗಮಿಸಿದ ಕಾರಣ ಗಂಟೆಕಾಲ ಸರತಿ ಸಾಲಿನಲ್ಲಿ ನಿಂತು ಗೋಪಾಲನ ದರ್ಶನ ಪಡೆದರು.
ರಾಜ್ಯ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡು ಮತ್ತು ಕೇರಳದಿಂದ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಆಗಮಿಸಿದ ಪರಿಣಾಮ ಬೆಟ್ಟಕ್ಕೆ ತೆರಳಲು ಬಸ್‌ಗಾಗಿ ತಪ್ಪಲಿನಲ್ಲಿ ಕಾದು ಹೈರಾಣರಾದರು. ಸೋಮವಾರ ಮೂರು ಬಸ್‌ಗಳು ಕಾರ್ಯಾಚರಣೆ ನಡೆಸಿದ್ದು, ಶಬರಿಮಲೆ ಯಾತ್ರಿಕರು ಹಾಗೂ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದ ಕಾರಣ ಬಿರು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ಬೆಟ್ಟಕ್ಕೆ ಹೋದರು.
ಬೆಟ್ಟದ ಮೇಲು ಸರತಿ ಸಾಲು: ಕಳೆದೊಂದು ವಾರದಿಂದ ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೆಚ್ಚಿನ ಮಂಜು ಬೀಳುತ್ತಿದೆ. ಜೊತೆಗೆ ಭಕ್ತರ ದಂಡು ಅಧಿಕವಾಗಿ ಆಗಮಿಸಿದ್ದ ಕಾರಣ ಜನ ಜಂಗುಳಿ ಹೆಚ್ಚಿ, ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದರು. ಈ ವೇಳೆ ಅನೇಕ ಮಂದಿ ಗೋಪಾಲನ ನಾಮ ಸ್ಮರಣೆ ಮಾಡಿ ಗೋವಿಂದ.. ಗೋವಿಂದ.. ಎಂದು ಕೂಗಿದರು. ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಸೆಲ್ಫಿ ಕ್ರೇಜ್: ಬೆಟ್ಟದಲ್ಲಿ ಆಗಾಗ್ಗೆ ಮಂಜು ಆವರಿಸಿದ ಕಾರಣ ಯುವಕರು, ಮಹಿಳೆಯರು ಸೆಲ್ಫಿ ಮತ್ತು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.