ADVERTISEMENT

ಗೊರೆ ಹಬ್ಬ: ಸೆಗಣಿ ಎರಚಿಕೊಂಡು ಸಂಭ್ರಮ

ತಮಿಳುನಾಡಿನ ತಾಳವಾಡಿಯ ಗುಮಟಾಪುರದಲ್ಲಿ ನಡೆಯುವ ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:23 IST
Last Updated 24 ಅಕ್ಟೋಬರ್ 2025, 4:23 IST
ತಮಿಳುನಾಡಿನ ತಾಳವಾಡಿಯ ಗುಮಟಾಪುರದಲ್ಲಿ ಗುರುವಾರ ನಡೆದ ‘ಗೊರೆಹಬ್ಬ’ದಲ್ಲಿ ಗ್ರಾಮಸ್ಥರು ಸೆಗಣಿ ಎರಚಾಡಿಕೊಳ್ಳುತ್ತಿರುವ ದೃಶ್ಯ
ತಮಿಳುನಾಡಿನ ತಾಳವಾಡಿಯ ಗುಮಟಾಪುರದಲ್ಲಿ ಗುರುವಾರ ನಡೆದ ‘ಗೊರೆಹಬ್ಬ’ದಲ್ಲಿ ಗ್ರಾಮಸ್ಥರು ಸೆಗಣಿ ಎರಚಾಡಿಕೊಳ್ಳುತ್ತಿರುವ ದೃಶ್ಯ   

ಚಾಮರಾಜನಗರ: ಪ್ರತಿವರ್ಷದ ಸಂಪ್ರದಾಯದಂತೆ ಜಿಲ್ಲೆಯ ಗಡಿ ಭಾಗವಾದ ತಮಿಳುನಾಡಿನ ತಾಳವಾಡಿಯ ಗುಮಟಾಪುರದಲ್ಲಿ ಗುರುವಾರ ‘ಗೊರೆಹಬ್ಬ’ ನಡೆಯಿತು. ಸೆಗಣಿಯಿಂದ ಪರಸ್ಪರ ಎರಚಾಡಿಕೊಳ್ಳುವ ವಿಶಿಷ್ಟ ಹಬ್ಬ ಇದಾಗಿದ್ದು ಗ್ರಾಮಸ್ಥರು ಭಾಗವಹಿಸಿ ಸಂಭ್ರಮಿಸಿದರು.

ದೀಪಾವಳಿ ಹಬ್ಬವಾದ ಮಾರನೆಯ ದಿನ ಗೊರೆ ಹಬ್ಬವನ್ನು ಆಚರಿಸುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ ಬಲಿಪಾಡ್ಯಮಿ ನಂತರದ ದಿನವಾದ ಗುರುವಾರ ಗ್ರಾಮದೇವರ ಅಣತಿಯಂತೆ ಗೊರೆ ಹಬ್ಬ ಆಚರಿಸಲಾಯಿತು. ಸೆಗಣಿಯನ್ನು ಎರಚಾಡಿಕೊಂಡು ಗ್ರಾಮಸ್ಥರು ಸಂಭ್ರಮಿಸಿದರು. 

ಪೂರ್ವ ತಯಾರಿ

ADVERTISEMENT

ಗೊರೆಹಬ್ಬಕ್ಕೂ ಮುನ್ನ ಗ್ರಾಮದ ಯುವಕರು ಹಾಗೂ ಮುಖಂಡರು ಒಟ್ಟಾಗಿ ಸಿದ್ಧತೆ ಮಾಡಿಕೊಂಡರು. ಬೆಳಿಗ್ಗೆ ಯುವಕರು ಹಾಗೂ ಮಕ್ಕಳ ತಂಡಗಳು ಸೆಗಣಿಯನ್ನು ಸಂಗ್ರಹಿಸಿ ತಂದು ಗ್ರಾಮದ ಬೀರಪ್ಪ ದೇವಸ್ಥಾನದ ಬಳಿ ರಾಶಿ ಹಾಕಿದರು. ನಂತರ ಪ್ರತಿ ಮನೆಯಿಂದಲೂ ಎಣ್ಣೆ ಸಂಗ್ರಹಿಸಿ ದೇವಸ್ಥಾನಕ್ಕೆ ಅರ್ಪಿಸಲಾಯಿತು.

ಗ್ರಾಮದ ಹೊರವಲಯದಲ್ಲಿರುವ ಕಾರಪ್ಪ ದೇವಸ್ಥಾನಕ್ಕೆ ತೆರಳಿದ ಯುವಕರ ಗುಂಪು ಸೊಂಟಕ್ಕೆ ಎಲೆಬಳ್ಳಿಗಳನ್ನು ಸುತ್ತಿಕೊಂಡು ಸಂಭ್ರಮಿಸಿದರು. ಹುಲ್ಲಿನ ಮೀಸೆ ಅಂಟಿಸಿಕೊಂಡು, ಮೈಗೆ ಬಳ್ಳಿಗಳ ಮಾಲೆ ಮಾಡಿಕೊಂಡಿದ್ದ ‘ಚಾಡಿಕೋರ’ನನ್ನು ಕತ್ತೆಯ ಮೇಲೆ ಕೂರಿಸಿ ಮೆರವಣಿಗೆಯಲ್ಲಿ ಬೀರಪ್ಪನ ದೇವಸ್ಥಾನದವರೆಗೂ ಕರೆತಲಾಯಿತು. ಈ ವೇಳೆ ನಡೆದ ವಿನೋದಾವಳಿಗಳು ಗಮನ ಸೆಳೆದವು.

ಕಳೆದ 40 ವರ್ಷಗಳಿಂದ ಮಾದೇವ ಎಂಬುವರು ಚಾಡಿಕೋರನಾಗಿ ಕತ್ತೆಯ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವರ್ಷ ಅವರ ಪುತ್ರ ನಾಗರಾಜು ಚಾಡಿಕೇರನ ವೇಷ ಧರಿಸಿದ್ದರು.

ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಪೂಜಾರಿ ಪೂಜೆ ಸಲ್ಲಿಸಿ ಕತ್ತಿ ಹಿಡಿದು ಆವೇಶ ಭರಿತವಾಗಿ ಕುಣಿದು ಭಕ್ತಿ ಪ್ರದರ್ಶಿಸಿದ ಬಳಿಕ ಗೊರೆ ಹಬ್ಬಕ್ಕೆ ಚಾಲನೆ ದೊರೆಯಿತು. ನೆರೆದಿದ್ದವರೆಲ್ಲ ದೊಡ್ಡ ಸೆಗಣಿ ಉಂಡೆಗಳನ್ನು ತೂರಿ ಕೇಕೆ ಹಾಕುತ್ತಾ ಹಬ್ಬ ಆಚರಿಸಿದರು. ವಿಶಿಷ್ಟ ಆಚರಣೆ ವೀಕ್ಷಿಸಲು ಕೆಲವು ವಿದೇಶಿಗರು ಬಂದಿದ್ದರು. ಅಂತಿಮವಾಗಿ ಪೊರಕೆ ಕಡ್ಡಿಗಳಿಂದ ಮಾಡಲಾಗಿದ್ದ ಬೊಂಬೆಯನ್ನು ಸುಟ್ಟು ಗೊರೆಹಬ್ಬಕ್ಕೆ ತೆರೆ ಎಳೆಯಲಾಯಿತು.

ಗೊರೆ ಹಬ್ಬದಲ್ಲಿ ಗಮನ ಸೆಳೆದ ಚಾಡಿಕೋರನ ಮೆರವಣಿಗೆ
ಗ್ರಾಮದ ಯುವಕರ ವಿನೋದಾವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.