ADVERTISEMENT

ಬಿಳಿಗಿರಿರಂಗನಬೆಟ್ಟ: ವಾಹನಗಳಿಗೆ ಹಸಿರು ಸುಂಕ

ಸೂರ್ಯನಾರಾಯಣ ವಿ.
Published 4 ಜನವರಿ 2024, 5:34 IST
Last Updated 4 ಜನವರಿ 2024, 5:34 IST
ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಹಸಿರು ಸುಂಕ ಸಂಗ್ರಹಿಸುತ್ತಿರುವುದು
ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಹಸಿರು ಸುಂಕ ಸಂಗ್ರಹಿಸುತ್ತಿರುವುದು   

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ವಾಹನ ಸವಾರರಿಂದ ಹಸಿರು ಸುಂಕ ಸಂಗ್ರಹಿಸಲು ಅರಣ್ಯ ಇಲಾಖೆ ಆರಂಭಿಸಿದೆ.

ಹೊಸ ವರ್ಷದ ಮೊದಲ ದಿನದಿಂದ (ಜ.1) ಹಸಿರು ಸುಂಕ ಸಂಗ್ರಹಿಸಲಾಗುತ್ತಿದ್ದು, ದ್ವಿಚಕ್ರವಾಹನಹಳಿಗೆ ₹10, ನಾಲ್ಕು ಚಕ್ರದ ವಾಹನಗಳಿಗೆ ₹20 ನಿಗದಿ ಪಡಿಸಲಾಗಿದೆ.

ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಒಳಗಡೆ ನೆಲೆಸಿರುವವರಿಗೆ ಸುಂಕದಿಂದ ವಿನಾಯಿತಿ ಇದೆ. ಕೆಎಸ್‌ಆರ್‌ಟಿಸಿ ಬಸ್‌, ಆಂಬುಲೆನ್ಸ್‌ ಸೇರಿದಂತೆ ತುರ್ತು ವಾಹನಗಳಿಗೂ ವಿನಾಯಿತಿ ನೀಡಲಾಗಿದೆ.  

ADVERTISEMENT

‘ಪ್ರಾಯೋಗಿಕವಾಗಿ ಸುಂಕವನ್ನು ಸಂಗ್ರಹಿಸಲಾಗುತ್ತಿದ್ದು, ಹಣವನ್ನು ಅರಣ್ಯ ಸಂರಕ್ಷಣೆ ಹಾಗೂ ಸಂರಕ್ಷಿತ ವ್ಯಾಪ್ತಿಯ ಗಿರಿಜನರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳಿಗೆ ಬಳಸಲಾಗುವುದು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ನಿರ್ದೇಶಕಿ ಹಾಗೂ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಆರ್‌ಟಿ ವ್ಯಾಪ್ತಿಯ ಪುಣಜನೂರು ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಕಳೆದ ವರ್ಷದ ಮೇ 1ರಿಂದಲೇ ಹಸಿರು ಸುಂಕ ಸಂಗ್ರಹಿಸಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ಮತ್ತು ಕೇರಳ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಗ್ರಹಿಸಲಾಗುತ್ತಿದೆ.

ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವಾರಾಂತ್ಯ, ರಜಾ ದಿನ ಮತ್ತು ವಿಶೇಷ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಜಾಸ್ತಿ. ಅರಣ್ಯದಲ್ಲಿ ಸಾಗುವ ರಸ್ತೆಯಲ್ಲಿ ಸಂಚರಿಸುವ ಉದ್ದೇಶದಿಂದ ಬರುವ ಪ್ರವಾಸಿಗರೂ ಇದ್ದಾರೆ. 

ಯಳಂದೂರು ಮತ್ತು ಚಾಮರಾಜನಗರ ಮಾರ್ಗವಾಗಿ ಬೆಟ್ಟಕ್ಕೆ ಹೋಗಬಹುದಾಗಿದ್ದು, ಯಳಂದೂರು ಮಾರ್ಗದಲ್ಲಿ ಗುಂಬಳ್ಳಿಯಲ್ಲಿ ಮತ್ತು ಚಾಮರಾಜನಗರ ಮಾರ್ಗದಲ್ಲಿ ಹೊಂಡರಬಾಳುವಿನಲ್ಲಿ ಚೆಕ್‌ಪೋಸ್ಟ್‌ಗಳಿವೆ. ಅರಣ್ಯ ಪ್ರವೇಶಿವುದಕ್ಕೂ ಮೊದಲು ಜನರು ತಮ್ಮ ವಿವರಗಳನ್ನು ದಾಖಲು ಮಾಡುವ ವ್ಯವಸ್ಥೆ ಈ ಹಿಂದೆಯೇ ಜಾರಿಯಲ್ಲಿತ್ತು. ಈಗ ಹಸಿರು ಶುಲ್ಕವನ್ನೂ ನೀಡಬೇಕಾಗಿದೆ. 

ಅರಣ್ಯ ಸಂರಕ್ಷಣೆ, ಗಿರಿಜನರ ಅಭಿವೃದ್ಧಿಗೆ ಬಳಕೆ: ‘ಸಂಗ್ರಹಿಸಲಾಗುವ ಶುಲ್ಕ ಬಿಆರ್‌ಟಿಯ ನಿಧಿಗೆ ಜಮೆಯಾಗಲಿದೆ. ಹಣವನ್ನು ಅರಣ್ಯ, ವನ್ಯಜೀವಿ ಸಂರಕ್ಷಣೆ ಕಾರ್ಯಕ್ಕೆ, ಸಂರಕ್ಷಿತ ಪ್ರದೇಶದಲ್ಲಿರುವ ಗಿರಿಜನರಿಗೆ ವಿವಿಧ ತರಬೇತಿಗಳನ್ನು ನೀಡಿ, ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಹೇಳಿದರು.

‘ಎರಡೂ ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರಿಗಾಗಿ ಶೌಚಾಲಯ ಸೇರಿದಂತೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕಾಗಿದೆ. ಕೆ.ಗುಡಿಯಲ್ಲಿ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಗಿರಿಜನರನ್ನು ಪರಿಸರ ಮಾರ್ಗದರ್ಶಕರನ್ನಾಗಿ ನೇಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಈ ಹಿಂದೆ ಗಿರಿಜನ ಮಹಿಳೆಯರಿಗೆ ಲಂಟಾನದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗಿತ್ತು. ಮತ್ತಷ್ಟು ಮಹಿಳೆಯರು ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ. ಅವರಿಗೆ ತರಬೇತಿ ಕೊಡಿಸಿ, ಲಂಟಾನ ಉತ್ಪನ್ನಗಳನ್ನು ತಯಾರಿಸಲು ಅವಕಾಶ ಮಾಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನೂ ಹೊಂದಿದ್ದೇವೆ’ ಎಂದು ವಿವರಿಸಿದರು. 

ಇಲಾಖೆಯ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಜನಪ್ರತಿನಿಧಿಗಳ ಗಮನಕ್ಕೆ ತಂದು ಹಸಿರು ಸುಂಕ ಸಂಗ್ರಹ ಶುರು ಮಾಡಿದ್ದೇವೆ
- ದೀಪ್‌ ಜೆ., ಕಾಂಟ್ರ್ಯಾಕ್ಟರ್‌ ಬಿಆರ್‌ಟಿ ಡಿಸಿಎಫ್‌

‘ತಾತ್ಕಾಲಿಕ ಸಿಬ್ಬಂದಿ ನೇಮಕಕ್ಕೂ ಅನುಕೂಲ’ 

‘ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗಿದ್ದು ಬೇಸಿಗೆ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಂಕಿ ವೀಕ್ಷಕರನ್ನು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ. ಬಂಡೀಪುರ ನಾಗರಹೊಳೆಗೆ ಹೋಲಿಸಿದರೆ ಬಿಆರ್‌ಟಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸಂಗ್ರಹವಾಗುವ ಆದಾಯ ಕಡಿಮೆ. ಹಸಿರು ಸುಂಕ ಸಂಗ್ರಹಿಸಿದರೆ ಅಗತ್ಯವಿದ್ದಷ್ಟು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸುವುದರ ಜೊತೆಗೆ ಇಲಾಖೆಯ ಇನ್ನಿತರ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.