ಚಾಮರಾಜನಗರ: ಕೇಂದ್ರ ಸರ್ಕಾರ ಈಚೆಗೆ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್‌ಟಿ) ಕಡಿತ ಮಾಡಿರುವ ಪರಿಣಾಮ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದ್ದು ಖರೀದಿ ಶಕ್ತಿ ಹೆಚ್ಚಾಗಿದೆ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್ ಹೇಳಿದರು.
ನಗರದ ವರ್ತಕರ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಮಾತನಾಡಿ, ಸೆ.22ರಿಂದ ಹೊಸ ಜಿಎಸ್‌ಟಿ ದರ ಜಾರಿಗೆ ಬಂದಿದ್ದು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರ ದೃಢನಿರ್ಧಾರದ ಫಲವಾಗಿ ಬಡವರು, ಮಧ್ಯಮ ವರ್ಗಕ್ಕೆ ಹೆಚ್ಚು ಅನುಕೂಲವಾಗಿದೆ ಎಂದರು.
ಜಿಎಸ್‌ಟಿ ಕಡಿತದಿಂದ ಕೈಗಾರಿಕಾ ವಲಯಕ್ಕೂ ಉತ್ತೇಜನ ಸಿಕ್ಕಂತಾಗಿದೆ. ಉತ್ಪಾದಕ ವಲಯವಾದ ಕೃಷಿ ಕ್ಷೇತ್ರಕ್ಕೂ ಬಲ ಬಂದತಾಗಿದೆ. ರೈತರು ಸಹಿತ ಜನಸಾಮಾನ್ಯರಿಗೆ ಜಿಎಸ್‌ಟಿ ಪ್ರಯೋಜನ ದೊರೆತಿದೆ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಹಾರ ಪದಾರ್ಥಗಳ ಮೇಲೆ ಶೇ 27ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಪರಿಣಾಮ ಅಗತ್ಯ ವಸ್ತುಗಳ ದರ ದುಬಾರಿಯಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿದ್ದ ಶೇ 27 ತೆರಿಗೆಯನ್ನು ಬಿಜೆಪಿ ಸರ್ಕಾರ ಶೇ 5ಕ್ಕೆ ಇಳಿಕೆ ಮಾಡಿದ್ದು ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲಾಗಿದೆ ಎಂದರು.
ಜಿಎಸ್‌ಟಿ ಸುಧಾರಣೆಯಿಂದ ₹2 ಲಕ್ಷ ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದೆ. ದೇಶದ ಮಾರುಕಟ್ಟೆ ವ್ಯವಸ್ಥೆಯನ್ನು ಜಾಗತಿಕ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಟ್ರ್ಯಾಕ್ಟರ್, ಬಿಡಿಭಾಗಗಳು, ಹನಿ ನೀರಾವರಿ, ಸಾವಯವ ಬೆಳೆಗಳ ಬೀಜಗಳ ಮೇಲಿನ ತೆರಿಗೆ ಕಡಿತಗೊಳಿಸುವ ಮೂಲಕ ರೈತರಿಗೂ ಸಿಹಿ ಸುದ್ದಿ ನೀಡಲಾಗಿದೆ. ಅಗತ್ಯ ಔಷಧಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದ್ದು ರೋಗಿಗಳಿಗೆ ಅನುಕೂಲವಾಗಿದೆ. ದೇಶದ ಆರ್ಥಿಕತೆಯ ಸುಧಾರಣೆಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಸುರೇಶ್, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಶಂಕರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಅಧ್ಯಕ್ಷ ಪ್ರಭಾಕರ್, ಲಾರಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮಾಜಿ ಚೂಡಾ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ನಾಗೇಶ್, ಚೆನ್ನನಂಜಯ್ಯನಹುಂಡಿ ಮಹದೇವಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.