ಗುಂಡ್ಲುಪೇಟೆ: ರೈತರ ಜಮೀನುಗಳಿಗೆ ಕಾಡಾನೆ ಲಗ್ಗೆ ಇಟ್ಟು ಫಸಲು ನಾಶ ಮಾಡುತ್ತಿರುವುರಿಂದ ರೋಸಿ ಹೋದ ರೈತರು ಓಂಕಾರ ವಲಯ ವ್ಯಾಪ್ತಿಯ ದೇಶಿಪುರದಲ್ಲಿ ಶುಕ್ರವಾರ ಅರಣ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ದೇಶಿಪುರದಲ್ಲಿ ಮಲ್ಲಪ್ಪ ಎಂಬವರ ಜಮೀನಿನಲ್ಲಿ 15 ತೆಂಗಿನ ಸಸಿ, 15ಕ್ಕೂ ಅಧಿಕ ಸೋಲಾರ್ ಬೇಲಿ ಕಂಬಗಳು, ಸ್ವಾಮಿ ಎಂಬುವವರ ಜಮೀನಿನಲ್ಲಿ ಅರ್ಧ ಎಕರೆ ಬೀನ್ಸ್, ಪುಟ್ಟಬಸಪ್ಪ ಅವರ ಅರ್ಧ ಎಕರೆ ಬಾಳೆ, ನಾಗರಾಜು ಎಂಬವರ ಎರಡೂವರೆ ಎಕರೆ ಬಾಳೆ, ಕುಮಾರ್ ಎಂಬುವವರ ಒಂದು ಎಕರೆ ಹೂವು ಕೋಸನ್ನು ಆನೆಗಳ ಹಿಂಡು ತಿಂದು, ತುಳಿದು ನಾಶಪಡಿಸಿವೆ.
ಸ್ಥಳ ಪರಿಶೀಲನೆಗೆ ಬಂದ ಓಂಕಾರ್ ವಲಯ ಅರಣ್ಯಾಧಿಕಾರಿ ಹನುಮಂತ ಪಾಟೀಲ್ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ ರೈತರು ಮುತ್ತಿಗೆ ಹಾಕಿ, ‘ಕಾಡು ಪ್ರಾಣಿಗಳ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಫೋಟೊ ತೆಗೆಯಲು ಕಾಟಾಚಾರಕ್ಕೆ ಬಂದು ಹೋಗುತ್ತಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.
‘5 ದಿನಗಳಿಂದ ಕಾಡಾನೆಗಳು ನಿತ್ಯ ಉಪಟಳ ಕೊಡುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿಲ್ಲ, ಕಾಡಾನೆ ಹಾವಳಿಯಿಂದ ಕೃಷಿ ಚಟುವಟಿಕೆ ಮಾಡಲಾಗುತ್ತಿಲ್ಲ. ಆನೆ ಹಾವಳಿ ತಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜಮೀನಿನ 200 ಮೀಟರ್ ಅಂತರದಲ್ಲಿ ಅರಣ್ಯ ಇಲಾಖೆ ವಸತಿಗೃಹಗಳಿದ್ದು, ರಾತ್ರಿ ಗಸ್ತು ತಿರುಗದೇ ಸಿಬ್ಬಂದಿ ನಿದ್ರಿಸುತ್ತಾರೆ ’ ಎಂದು ರೈತರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.