
ಗುಂಡ್ಲುಪೇಟೆ: ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಕರು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.
ತಾಲ್ಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಚಾಮುಲ್ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಹಾಲು ಕರೆಯುವ ಹಾಗೂ ಮಿಶ್ರತಳಿ ಕರು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಆಚರಣೆಯ ಸಮಯದಲ್ಲಿ ಮೈಸೂರಿನಲ್ಲಿ ದೊಡ್ಡಮಟ್ಟದಲ್ಲಿ ಹಾಲು ಕರೆಯುವ ಸ್ಪರ್ಧೆ ನಡೆಯುತ್ತದೆ. ಅದರಂತೆಯೇ ಗ್ರಾಮೀಣ ಭಾಗದಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿದಾಗ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಲು ಕರೆಯುವ ಸ್ಪರ್ಧೆಯ ಜೊತೆಗೆ ಮಿಶ್ರತಳಿ ಕರು ಪ್ರದರ್ಶನಗಳಿಂದ ಈ ಭಾಗದ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿ ಎಂದು ಹಾರೈಸಿದರು.
ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ 13 ರಾಸುಗಳು ಪ್ರದರ್ಶನದಲ್ಲಿದ್ದವು. ಅಧಿಕ ಹಾಲು ಕರೆದ ರಾಸುಗಳಿಗೆ ₹10ಸಾವಿರ ಪ್ರಥಮ,₹7,500 ದ್ವಿತೀಯ ಮತ್ತು ₹5 ಸಾವಿರ ತೃತೀಯ ನಗದು ಬಹುಮಾನ ನೀಡಲಾಯಿತು.
ಮಿಶ್ರತಳಿ ಕರುಗಳ ಸ್ಪರ್ಧೆಯಲ್ಲಿ 21 ಜರ್ಸಿ ಮತ್ತು ಎಚ್‌ಎಫ್ ಕರುಗಳು ಪ್ರದರ್ಶಿಸಲಾಗಿತ್ತು. ಪ್ರದರ್ಶನದಲ್ಲಿದ್ದ ಎಲ್ಲ ರಾಸು ಮತ್ತು ಉತ್ತಮ ಕರುಗಳ ಮಾಲೀಕರಿಗೆ ಹಾಲಿನ ಕ್ಯಾನ್ ನೀಡಿ ಹೈನುಗಾರಿಕೆಯನ್ನು ಪ್ರೊತ್ಸಾಹಿಸಲಾಯಿತು.
ಚಾಮುಲ್ ನಿರ್ದೇಶಕ ಎಚ್.ಎಂ.ನಂಜುಂಡಪ್ರಸಾದ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಮಾದೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಾಗಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಮಧುಶಂಕರ್, ಡಾ.ನಾಗೇಂದ್ರಸ್ವಾಮಿ, ಗವಿಸ್ವಾಮಿ, ಕೃಷ್ಣ, ಚೇತನ್, ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.