ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಪರಿಣಾಮ, ಕಚೇರಿ ಕೆಲಸ, ಸರ್ಕಾರದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಕಚೇರಿಗೆ ಬರುತ್ತಿದ್ದರೂ ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡದಿರುವುದು ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಎಂದು ಸಾರ್ವಜನಿಕರು ದೂರಿದ್ದಾರೆ.
ತಾಲ್ಲೂಕು ಕಚೇರಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ, ಶಿಶು ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಅಬಕಾರಿ ಕಚೇರಿ, ಖಜಾನೆ ಇಲಾಖೆ, ಆಧಾರ್ ತಿದ್ದುಪಡಿ ಕೇಂದ್ರ, ಕಂದಾಯ ಇಲಾಖೆ, ಆಹಾರ ಇಲಾಖೆ, ಸರ್ವೇ ಇಲಾಖೆ ಮುಂತಾದ ಹಲವು ಶಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುತ್ತಿವೆ.
ಎಲ್ಲ ಇಲಾಖೆಗಳು ಒಂದೆಡೆ ಇರುವುದರಿಂದ ಸಹಜವಾಗಿ ತಾಲ್ಲೂಕು ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಚೇರಿಗೆ ಬರುವವರ ಪೈಕಿ ಹೆಚ್ಚಿನವರು ದ್ವಿಚಕ್ರ ವಾಹನಗಳಲ್ಲಿ ಬರುವುದರಿಂದ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ಹೀಗಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಹಾಗೂ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದಾರೆ.
ಅಧಿಕಾರಿಗಳ ವಾಹನಗಳ ನಿಲುಗಡೆಗೂ ನಿರ್ಧಿಷ್ಟವಾದ ಸ್ಥಳಾವಕಾಶ ಇಲ್ಲ. ನಾಗರಿಕರ ಜೊತೆಗೆ ನೌಕರರೂ ಮನ ಬಂದಕಡೆ ವಾಹನಗಳನ್ನು ನಿಲುಗಡೆ ಮಾಡಿ ಹೋಗುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.
ಕಚೇರಿ ಬಲ ಬದಿಯಲ್ಲಿ ಕಾರು ಸೇರಿದಂತೆ ದೊಡ್ಡ ವಾಹನಗಳು ನಿಲ್ಲುತ್ತದೆ. ಬೈಕ್ ಸವಾರರು ಮರದ ನೆರಳಿನಲ್ಲಿ ನಿಲ್ಲಿಸಲು ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿಯೇ ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ. ತಾಲ್ಲೂಕು ಆಡಳಿತ ಕ್ರಮ ವಹಿಸಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಪಟ್ಟಣದ ನಿವಾಸಿ ಮೂರ್ತಿ ಸಲಹೆ ನೀಡಿದರು.
ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ವಾಹನ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗುವುದು. ಕಚೇರಿಗೆ ಬರುವವರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು.-ಟಿ.ರಮೇಶ್ ಬಾಬು ತಹಸೀಲ್ದಾರ್.
ಗುಂಡ್ಲುಪೇಟೆ ತಾಲ್ಲೂಕು ಕಚೇರಿಗೆ ಪ್ರತಿನಿತ್ಯ ಜನರು ಹೆಚ್ಚಾಗಿ ಬೈಕ್‌ನಲ್ಲಿ ಬಂದು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಕಚೇರಿ ಮುಂಭಾಗ ಇಕ್ಕಟ್ಟಿನಲ್ಲಿ ಓಡಾಡಬೇಕಾಗಿದೆ. ತಹಶೀಲ್ದಾರ್ ಗಮನ ಹರಿಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ಶೆಲ್ಟರ್ ನಿರ್ಮಾಣ ಮಾಡಬೇಕು ಎಂದು ಕಾವಲುಪಡೆ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್ ಹೇಳಿದರು.
ಸರ್ಕಾರದ ಸೇವೆಗಳನ್ನು ಪಡೆಯಲು ಬರುವ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರಿಗೆ ಕೂರಲು ಆಸನಗಳ ಕೊರತೆ ಇದೆ. ನಿಂತು ನಿಂತು ಬೇಸತ್ತು ಅನಿವಾರ್ಯವಾಗಿ ಕಾಂಪೌಂಡ್ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಡಳಿತ ಹಿರಿಯ ನಾಗರಿಕ ಹಿತದೃಷ್ಟಿಯಿಂದ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕು ಕಚೇರಿಯ ಎಡ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿದ್ದು ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಅಶುಚಿತ್ವ ಕಾಡುತ್ತಿರುವುದರಿಂದ ಸಾರ್ವಜನಿಕರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಬಲ ಭಾಗದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿ ತಿಂಗಳುಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ತಾಲ್ಲೂಕು ಕಚೇರಿಗೆ ಬರುವವರು ವಿಧಿಯಿಲ್ಲದೆ ಬಯಲು ಶೌಚಾಲಯ ಅವಲಂಬಿಸಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.