ADVERTISEMENT

ಗುಂಡ್ಲುಪೇಟೆ | ಟಿಪ್ಪರ್‌ ಆರ್ಭಟ: ಜನರ ಜೀವದ ಜೊತೆ ಚೆಲ್ಲಾಟ

ನಿಯಮ ಮೀರಿ ಕಲ್ಲುಗಳನ್ನು ಹೊತ್ತು ಸಂಚರಿಸುವ ಲಾರಿಗಳು: ಇಲಾಖೆಗಳು ಮೌನ ?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 6:03 IST
Last Updated 5 ಏಪ್ರಿಲ್ 2025, 6:03 IST
ಗುಂಡ್ಲುಪೇಟೆಯಲ್ಲಿ ಹೊದಿಕೆ ಹಾಕದೆ ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಟಿಪ್ಪರ್
ಗುಂಡ್ಲುಪೇಟೆಯಲ್ಲಿ ಹೊದಿಕೆ ಹಾಕದೆ ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಟಿಪ್ಪರ್   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುವ ಸ್ಥಳಗಳಿಂದ ಕ್ರಷರ್‌ಗಳಿಗೆ ಕಚ್ಚಾವಸ್ತುಗಳನ್ನು ಸಾಗಿಸುವ ಟಿಪ್ಪರ್‌ಗಳು ನಿಯಮ ಬಾಹಿರವಾಗಿ ಸಂಚರಿಸುತ್ತ ಸಾರ್ವಜನಿಕರ ಪ್ರಾಣಕ್ಕೆ ಎರವಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಠಿಣ ಕ್ರಮ ಜರುಗಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ನಿಗದಿಗಿಂತ ಅಧಿಕ ತೂಕ, ಅತಿಯಾದ ವೇಗ, ನಿಯಮ ಮೀರಿ ರಾತ್ರಿಯ ಹೊತ್ತು ಸಂಚಾರ, ಅಪಾಯಕಾರಿ ಚಾಲನೆ ಸೇರಿದಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಟಿಪ್ಪರ್‌ಗಳ ಸಂಚಾರಕ್ಕೆ ತಡೆಯೊಡ್ಡಲು ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸಾಧ್ಯವಾಗಿಲ್ಲ.

ಯಮಸ್ವರೂಪಿಯಾಗಿ ನುಗ್ಗುವ ಟಿಪ್ಪರ್‌ಗಳು ಅಪಘಾತ ಮಾಡಿದಾಗ ಸಾರ್ವಜನಿಕರ ಕಣ್ಣೊರೆಸುವ ಯತ್ನವಾಗಿ ಟಿಪ್ಪರ್ ಮಾಲೀಕರಿಗೆ ದಂಡವಿಧಿಸಲಾಗುತ್ತಿದೆಯಷ್ಟೆ. ಆದರೆ, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿಲ್ಲ ಎಂದು ಪಟ್ಟಣದ ಮಂಜುನಾಥ ಹಾಗೂ ದೊಡ್ಡತುಪ್ಪೂರು ಚಂದ್ರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಗಣಿ ಇಲಾಖೆಯ ನಿಯಮಾನುಸಾರ ರಾತ್ರಿಯ ಹೊತ್ತು ಟಿಪ್ಪರ್‌ಗಳಲ್ಲಿ ಕಚ್ಛಾವಸ್ತುಗಳ ಸಾಗಾಟಕ್ಕೆ ನಿರ್ಬಂಧ ಇದೆ. ನಿರ್ಧಿಷ್ಟ ಭಾರವನ್ನು ಮಾತ್ರ ಸಾಗಿಸಬೇಕು ಎಂಬ ನಿಯಮ ಇದೆ. ಆದರೆ, 18 ಟನ್ ಸಾಮರ್ಥ್ಯದ ಟಿಪ್ಪರ್‌ಗಳಲ್ಲಿ 30 ಟನ್‌ಗಳವರೆಗೂ, 30 ಟನ್ ಸಾಮರ್ಥ್ಯದ ವಾಹನಗಳಲ್ಲಿ 45 ಟನ್‌ವರೆಗೂ ಲೋಡ್‌ ತುಂಬಿಕೊಂಡು ಸಾಗಿಸುತ್ತಿರುವುದರಿಂದ, ರಸ್ತೆಗಳು ಹಾಳಾಗುತ್ತಿವೆ. ಸೇತುವೆಗಳು ಶಿಥಿಲವಾಗುತ್ತಿವೆ ಎಂದು ದೂರುತ್ತಾರೆ ಸಾರ್ವಜನಿಕರು.

ನಿಯಮ ಬಾಹಿರವಾಗಿ ಸಂಚರಿಸುವ ಟಿಪ್ಪರ್‌ಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಸೂಕ್ರ ಕ್ರಮಕ್ಕೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗುತ್ತದೆ.
ರಮೇಶ್, ಬಾಬುತಹಸೀಲ್ದಾರ್

ತೆರಕಣಾಂಬಿ ಹೋಬಳಿ ಕಡೆಯಿಂದ ಗುಂಡ್ಲುಪೇಟೆ ಹಾಗೂ ಬೇಗೂರು ಕ್ರಷರ್‌ಗಳಿಗೆ ಬರುವ ಟಿಪ್ಪರ್‌ಗಳು ಅಧಿಕ ಭಾರ ಹೊತ್ತು ಸಂಚರಿಸುವುದರಿಂದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ಈಚೆಗೆ ರಸ್ತೆ ದುರಸ್ತಿ ಮಾಡಿದ್ದೆದರೂ ಮತ್ತೆ ಮತ್ತೆ ಗುಂಡಿ ಬೀಳುತ್ತಲೇ ಇದೆ. ಕಳೆದ ವಾರ ಅಧಿಕ ಭಾರ ಹೊತ್ತು ಹೋಗುತ್ತಿದ್ದ ಟಿಪ್ಪರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿತ್ತು.

ಟಿಪ್ಪರ್‌ಗಳು ರಾತ್ರಿಯ ಹೊತ್ತು ಪ್ರಖರ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಬಳಸುತ್ತಿವುದರಿಂದ ದ್ವಿಚಕ್ರ ವಾಹನಗಳು, ಸಣ್ಣ ಪುಟ್ಟ ವಾಹನಗಳು ದಾರಿ ಕಾಣದೆ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ವಾಹನಗಳ ಮೇಲೆ ಯಾವುದೇ ಹೊದಿಗೆ ಹಾಕದೆ ಅಪಾಯಕಾರಿಯಾಗಿ ಸಾಗಿಸಲಾಗುತ್ತದೆ. ಕೆಲವೊಮ್ಮೆ ಕಲ್ಲುಗಳು ರಸ್ತೆಯ ಮೇಲೆ ಬೀಳುತ್ತಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಸವಾರ ಮಹದೇವ್‌.

ಕರಿಕಲ್ಲು ಗಣಿಗಳ ಅನುಪಯಕ್ತ ವಸ್ತುಗಳ ಬಳಕೆ: ಕರಿಕಲ್ಲು ಗಣಿಗಳಲ್ಲಿ ನಿರುಪಯುಕ್ತವಾಗಿರುವ ಕಲ್ಲು ಬಂಡೆಗಳನ್ನು ಎಗ್ಗಿಲ್ಲದೆ ಕ್ರಷರ್‌ಗಳಿಗೆ ಸಾಗಿಸಲಾಗುತ್ತಿದ್ದು ರಾಜಧನ ತಪ್ಪಿಸಲು ರಾತ್ರಿಯ ಹೊತ್ತು ಹೆಚ್ಚಾಗಿ ಸಾಗಿಸಲಾಗುತ್ತಿದೆ. ರಾತ್ರಿ ಆರಂಭವಾಗುವ ಸಂಚಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಸಾಗುತ್ತದೆ ಎಂದು ಆರೋಪಿಸುತ್ತಾರೆ ಸಾರ್ವಜನಿಕರಾದ ನಾಗೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.