ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಹೋಗುವ ಪ್ರವಾಸಿಗರನ್ನು ಮುತ್ತುಗದ ಮರಗಳು ಹೂವು ಅರಳಿಸಿ ಆಕರ್ಷಿಸುತ್ತಿವೆ.
ಬೇಸಿಗೆ ಸಮೀಪಿಸುತ್ತಿದ್ದ ಹಾಗೆ ಮಾಗಿಯ ಚಳಿಯಲ್ಲಿ ಹಸಿರು ಹೊದ್ದ ಮರಗಳೆಲ್ಲ ಎಲೆ ಕಳಚಿ ಹೂವನ್ನು ಬಿಡುತ್ತವೆ. ತಮ್ಮ ಹೊಸ ಚಿಗುರೆಲೆಗಳನ್ನೇ ಹೂವಾಗಿಸಿಕೊಂಡು ಪ್ರಕೃತಿಯ ಸೊಬಗನ್ನು ಇಮ್ಮಡಿ ಗೊಳಿಸುತ್ತವೆ. ಮುತ್ತುಗದಂತಹ ಮರಗಳು ಹೂವು ಬಿಟ್ಟಾಗ ಕಾಡಿಗೆ ಕಿಚ್ಚು ಹೊತ್ತಿಕೊಂಡಂತೆ ಭಾಸವಾಗುತ್ತದೆ.
ನವೆಂಬರ್ - ಡಿಸೆಂಬರ್ ಮಾಸದ ಕೊರೆಯುವ ಚಳಿಯಲ್ಲಿ ಎಲೆ ಉದುರಿಸುವ ಮುತ್ತುಗ ಮರಗಳು ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನ ಆಸುಪಾಸಿನಲ್ಲಿ ಮೊಗ್ಗನ್ನು ಧರಿಸಿ, ಹೂವುಗಳನ್ನು ಅರಳಿಸುತ್ತವೆ.
ಬಂಡೀಪುರದ ಎಲೆ ಉದುರುವ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಲ್ಲಲ್ಲಿ ಗುಂಪಿನಲ್ಲಿ ಬೆಳೆವ ಈ ಮುತ್ತುಗ ಮರವು ಹಳದಿ ಮಿಶ್ರಿತ ಕೆಂಪು ಹೂಗಳನ್ನು ತೊಟ್ಟು, ಇಡೀ ಮರದ ತುಂಬೆಲ್ಲ ಹೂವುಗಳನ್ನು ಹೊದ್ದು ನಿಲ್ಲುವುದು ನಯನ ಮನೋಹರ ದೃಶ್ಯ.
ಮುತ್ತುಗದ ಮರದ ಹೂವು ಬಿಟ್ಟಾಗ ಅನೇಕ ಸಸ್ಯಾಹಾರಿ ಪ್ರಾಣಿಗಳು ಈ ಹೂವಿನ ದಳಗಳನ್ನು ತಿನ್ನುತ್ತವೆ. ಕಾಡಿನ ಮಂಗಗಳು, ಲಂಗೂರ್, ಅಳಿಲು ಸೇರಿದಂತೆ ಇತರೆ ಸಣ್ಣ ಪುಟ್ಟ ಪ್ರಾಣಿಗಳು ಈ ಮರದ ಬಳಿಯೇ ಸುಳಿದಾಡುತ್ತವೆ’ ಎಂದು ಪರಿಸರ ಪ್ರೇಮಿ ಶ್ರೀಕಂಠ ‘ಪ್ರಜಾವಾಣಿ’ಗೆ ತಿಳಿಸಿದರು.
ಸೂರಕ್ಕಿ, ಕಾಡು ಮೈನಾ, ಪಿಕಳಾರ, ಗಿಳಿ ಹಕ್ಕಿ, ಹೊನ್ನಕ್ಕಿ, ಕಾಡು ಗುಬ್ಬಿ, ಕಾಜಾಣಗಳಂತಹ ಹಲವು ಸ್ಥಳೀಯ ಪಕ್ಷಿಗಳಿಗಳಲ್ಲದೆ ವಲಸೆ ಬರುವ ಗುಲಾಬಿ ಬಣ್ಣದ ಕಬ್ಬಕ್ಕಿ (ರೋಸಿ ಸ್ಟಾರ್ಲಿಂಗ್), ಉರುವಲು ಹಕ್ಕಿ (ವಾರ್ಬ್ಲರ್ ) ನಂತಹ ವಿವಿಧ ಹಕ್ಕಿಗಳು ಮುತ್ತುಗದ ಹೂವಿನ ಮಕರಂದ ಹೀರಲು ಮರವನ್ನು ಆಶ್ರಯಿಸುತ್ತವೆ.
ಮುತ್ತುಗದ ಹೂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.