
ಹನೂರು: ಷೇರುದಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್ ಕುಮಾರ್ ಸಲಹೆ ನೀಡಿದರು.
ಹೂಗ್ಯಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರನ್ನು ಮಂಗಳವಾರ ಸನ್ಮಾನಿಸಿ ಮಾತನಾಡಿದರು.
‘ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ವೆಂಕಟೇಶ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಘಟನೆಯಿಂದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ಆಡಳಿತವನ್ನು ಕಸಿದುಕೊಳ್ಳುವಲ್ಲಿ ಮೈತ್ರಿ ಪಕ್ಷದ ನಿರ್ದೇಶಕರು ಯಶಸ್ವಿಯಾಗಿದ್ದೀರಿ. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೂ ದೊರಕಿಸಿ ಕೊಟ್ಟು ರೈತರಿಗೆ ಬೆಂಬಲವಾಗಿರಬೇಕು’ ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡ ಮಾದೇಶ್ ಮಾತನಾಡಿ, ‘35 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ಅಧಿಕಾರದಲ್ಲಿದ್ದರೂ ನಮ್ಮ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ಈ ಬಾರಿ ರೈತರು ಬದಲಾವಣೆ ಬಯಸಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದು ತಿಳಿಸಿದರು.
ಓಬಿಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜನಧ್ವನಿ ವೆಂಕಟೇಶ್, ‘ಸಂಘವು ಅತಿ ಹೆಚ್ಚು ಲಾಭ ಪಡೆಯಲಿ’ ಎಂದರು.
ನಿರ್ದೇಶಕರಾದ ಸುಬ್ಬಮ್ಮ, ಚಂದ್ರಮ್ಮ, ಭದ್ರಯ್ಯ, ನಾಗರಾಜು ಕೆ, ತಂಗವೇಲು, ಕೃಷ್ಣ, ಕೃಷ್ಣಶೆಟ್ಟಿ, ಚಿನ್ನತಮ್ಮ ಭೋವಿ ಅವರನ್ನು ಸನ್ಮಾನಿಸಲಾಯಿತು.
ಪ್ರಶಿಕ್ಷಣ ವಿಭಾಗದ ಸಂಚಾಲಕರಾದ ಗಣೇಶ್ ಕಾರ್ಣಿಕ್, ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಹನೂರು ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳಾದ ವೆಂಕಟೇಶ್, ನೂರೊಂದು ಶೆಟ್ಟಿ, ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನೂರ್ ಮಹದೇವಸ್ವಾಮಿ, ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸುಂದರ್, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಮಂಡಲ ಅಧ್ಯಕ್ಷರಾದ ಮುರುಗೇಶ್, ವೃಷಭೇಂದ್ರ ಸ್ವಾಮಿ, ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಡು, ಮಂಡಲ ಒಬಿಸಿ ಅಧ್ಯಕ್ಷ ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.