ADVERTISEMENT

ತಾತ್ಕಾಲಿಕ ಬೆಂಕಿ ವೀಕ್ಷಕರಿಗೂ ವಿಮೆ

ಬಂಡೀಪುರ: ಅರಣ್ಯ ಇಲಾಖೆಯಿಂದ ರಾಜ್ಯದಲ್ಲೇ ಮೊದಲ ಪ್ರಯತ್ನ

ಮಲ್ಲೇಶ ಎಂ.
Published 6 ಮಾರ್ಚ್ 2020, 20:00 IST
Last Updated 6 ಮಾರ್ಚ್ 2020, 20:00 IST
ಕಳೆದ ವರ್ಷ ಬಂಡೀಪುರದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದ ಬೆಂಕಿ ವೀಕ್ಷಕರು
ಕಳೆದ ವರ್ಷ ಬಂಡೀಪುರದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದ ಬೆಂಕಿ ವೀಕ್ಷಕರು   

ಗುಂಡ್ಲುಪೇಟೆ: ರಾಜ್ಯದಲ್ಲಿ ಮೊದಲ ಬಾರಿಗೆ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ತಾತ್ಕಾಲಿಕ ಬೆಂಕಿ ವೀಕ್ಷಕರಿಗೂ (ಫೈರ್‌ ವಾಚರ್ಸ್‌) ವೈದ್ಯಕೀಯ ವಿಮೆ ಮಾಡಿಸಲಾಗಿದೆ.

ಬೇಸಿಗೆ ಸಮಯದಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಕಾಡಿನಲ್ಲಿ ಕಷ್ಟಪಟ್ಟು, ಜೀವವನ್ನೇ ಪಣಕ್ಕಿಟ್ಟು ದುಡಿಯುವ ಅವರಿಗೆ ಸಂಬಳ, ಆಹಾರ ಬಿಟ್ಟು ಬೇರೇನೂ ಸೌಲಭ್ಯ ಇರಲಿಲ್ಲ. ಈಗ ಅವರಿಗೂ ವೈದ್ಯಕೀಯ ವಿಮೆ ಮಾಡಿಸುವ ಮೂಲಕ ಅರಣ್ಯ ಇಲಾಖೆ ಅವರ ಕ್ಷೇಮಾಭಿವೃದ್ಧಿಗೂ ಮಹತ್ವ ನೀಡಿದೆ.

ಬಂಡೀಪುರದ 13 ವಲಯಗಳಲ್ಲಿ ಈ ವರ್ಷ 430 ಬೆಂಕಿ ವೀಕ್ಷಕರನ್ನು ನೇಮಕ ಮಾಡಲಾಗಿದೆ. ನಾಲ್ಕು ತಿಂಗಳ ಅವಧಿಗೆ ತಲಾ ಒಬ್ಬೊಬ್ಬರಿಗೆ ₹284 ವಿಮಾ ಕಂತು ಕಟ್ಟಲಾಗಿದೆ. ಇದು ಸಮೂಹ ಪಾಲಿಸಿಯಾಗಿದ್ದು, ನಾಲ್ಕು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.ಕುಟುಂಬದ ಸದಸ್ಯರು ಕೂಡ ಇದರ ಉಪಯೋಗ ಪಡೆದುಕೊಳ್ಳಲು ಅವಕಾಶ ಇದೆ.

ADVERTISEMENT

2017ರಲ್ಲಿ ಮೊಳೆಯೂರು ವನ್ಯಜೀವಿ ವಲಯದಲ್ಲಿ ಹರಡಿದ್ದ ಬೆಂಕಿ ನಂದಿಸುವ ಯತ್ನದಲ್ಲಿ ಅರಣ್ಯ ರಕ್ಷಕ ಮುರುಗಪ್ಪ ತಮ್ಮನಗೋಳ್ ಅವರು ಮೃತಪಟ್ಟು, ಇಬ್ಬರು ತಾತ್ಕಾಲಿಕ ಬೆಂಕಿ ವೀಕ್ಷಕರು ತೀವ್ರವಾಗಿ ಗಾಯಗೊಂಡಿದ್ದರು. ಇಲಾಖೆಯ ಕಾಯಂ ಉದ್ಯೋಗಿಯಾಗಿದ್ದ ಮುರುಗಪ್ಪ ಅವರಿಗೆ ಹೆಚ್ಚಿನ ನೆರವು ಬಂದಿತ್ತು. ಉಳಿದ ಇಬ್ಬರು ವೀಕ್ಷಕರಿಗೆ ಇಲಾಖೆ ನೆರವು ನೀಡಿತ್ತಾದರೂ ಹೇಳಿಕೊಳ್ಳುವಂತಹ ಪ್ರಯೋಜನ ಆಗಲಿಲ್ಲ. ಇದನ್ನು ಮನಗಂಡು ಕೆಲ ಸ್ಥಳೀಯ ಸಂಘ ಸಂಸ್ಥೆಗಳು ಸೇರಿ ಅವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ ಮಾಡಿದ್ದವು.

ಬೆಂಕಿ ನಂದಿಸುವಂತಹ ಅಪಾಯಕಾರಿ ಕೆಲಸವನ್ನು ನಿರ್ವಹಿಸುವಾಗ ಅನಾಹುತ ಸಂಭವಿಸಿದರೆ ವಿಮೆಯ ಮುಖಾಂತರವೇ ವೈದ್ಯಕೀಯ ವೆಚ್ಚ ಭರಿಸುವ ಉದ್ದೇಶದಿಂದ ಟೆಂಡರ್ ಕರೆದು ವಿಮೆ ಮಾಡಿಸಲಾಗಿದೆ. ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಅಡಿಯಲ್ಲಿ ವಿಮೆ ಮಾಡಿಸಲಾಗಿದೆ.

‘ಕಳೆದೆರಡು ವರ್ಷಗಳಿಂದ ಬೆಂಕಿ ವೀಕ್ಷಕ ಕೆಲಸಗಳಿಗೆ ಯಾರು ಬರುತ್ತಿರಲಿಲ್ಲ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ಬಿಟ್ಟು ಈ ಕೆಲಸಕ್ಕೆ ಯಾರು ಮುಂದೆ ಬರುವುದಿಲ್ಲ. ಅಂತಹ ಕೆಲಸ ಮಾಡುವ ಜ್ಞಾನವೂ ಬೇರೆಯವರಿಗೆ ಇಲ್ಲ. ಇಂತಹವರಿಗೆ ಈ ರೀತಿಯ ಸೌಲಭ್ಯಗಳನ್ನು ನೀಡುವುದು ಉತ್ತಮ ಕೆಲಸ’ ಎಂದು ರೈತರು ಅಭಿನಂದಿಸಿದ್ದಾರೆ.

ಎಲ್ಲರಿಗೂ ವಿಮೆ: ಬಂಡೀಪುರದಲ್ಲಿ 560 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಕಾಯಂ, ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವವರು ಇದ್ದಾರೆ. ಎಲ್ಲರಿಗೂ ವಿಮೆ ಮಾಡಿಸಲಾಗಿದೆ.

‘ಅನುಕೂಲ ಕಲ್ಪಿಸುವ ಉದ್ದೇಶ’

‘ಕೆಲಸ ಮಾಡುವ ಅವಧಿಯಲ್ಲಿ ಅನಾಹುತ ಸಂಭವಿದರೆ, ವೀಕ್ಷಕರಿಗೆ ಆರ್ಥಿಕವಾಗಿ ಉಪಯೋಗ ಆಗಲಿ ಎಂಬ ಉದ್ದೇಶದಿಂದ ಈ ವರ್ಷ ವಿಮೆ ಮಾಡಿಸಲಾಗಿದೆ.ಮುಂದಿನ ವರ್ಷ ಮತ್ತೆ ಬೇಸಿಗೆಯಲ್ಲಿ ಕೆಲಸಕ್ಕೆ ತೆಗೆದುಕೊಂಡಾಗ ಮತ್ತೆ ವಿಮೆ ಮಾಡಿಸಲಾಗುತ್ತದೆ’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.